ಮುಂಬೈ: ಸತತ ಸೋಲುಗಳಿಂದ ಕಂಗೆಟ್ಟು ಈಗಾಗಲೇ ಪ್ಲೇಆ್ ರೇಸ್‌ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ ನೈಟ್‌ರೈಡರ್ಸ್ ತಂಡಗಳು ಐಪಿಎಲ್-15ರ ಔಪಚಾರಿಕ ಹಣಾಹಣಿಯಲ್ಲಿ ಸೋಮವಾರ ಎದುರಾಗಲಿವೆ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಕದನ ಉಭಯ ತಂಡಗಳ ಪಾಲಿಗೆ ಅಂಕಪಟ್ಟಿ ಕಡೇ ಸ್ಥಾನ ತಪ್ಪಿಸಿಕೊಳ್ಳುವ ದೃಷ್ಟಿಯಿಂದ ಮಾತ್ರ ಮಹತ್ವ ಪಡೆದಿದೆ. ಸತತ 8 ಸೋಲುಗಳ ಬಳಿಕ ಗೆಲುವಿನ ಹಳಿಗೇರಿರುವ ಮುಂಬೈ ಬಳಿಕ ಕಡೇ 2 ಪಂದ್ಯಗಳಲ್ಲಿ ಜಯ ದಾಖಲಿಸಿದ್ದು, ಇದೀಗ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ.
ಮತ್ತೊಂದೆಡೆ, ನಿರ್ಣಾಯಕ ಸಮರದಲ್ಲಿ ಶನಿವಾರ ಲಖನೌ ಸೂಪರ್‌ಜೈಂಟ್ಸ್ ಎದುರು 75 ರನ್‌ಗಳಿಂದ ಸೋತಿರುವ ಕೆಕೆಆರ್ ತಂಡ ತನ್ನ ಪಾಲಿಗೆ ಉಳಿದಿರುವ ಕಡೇ 3 ಪಂದ್ಯಗಳಲ್ಲೂ ಗೆದ್ದರೂ ಇತರ ಪಂದ್ಯಗಳ ಫಲಿತಾಂಶದ ಮೇಲೆ ಭವಿಷ್ಯ ಅಡಗಿದೆ. 2011ರ ಲೀಗ್ ಲೆಕ್ಕಾಚಾರದಂತೆ 10 ತಂಡಗಳ ಲೀಗ್‌ನಲ್ಲಿ ಪ್ಲೇಆಫ್ ಹಂತಕ್ಕೇರಲು ಕನಿಷ್ಠ 8 ಗೆಲುವಿನ ಅಗತ್ಯವಿದೆ. ಆದರೆ, ಕೆಕೆಆರ್ ಈಗಾಗಲೇ 7 ಸೋಲು ಕಂಡಿದೆ. ಹೀಗಾಗಿ ಕೆಕೆಆರ್ ಪ್ಲೇಆಫ್ ಹಾದಿಯೂ ಬಂದ್ ಆಗಿದೆ.
ಟೀಮ್ ನ್ಯೂಸ್
ಮುಂಬೈ: ಸತತ 2 ಗೆಲುವು ದಾಖಲಿಸಿರುವ ನಡುವೆಯೂ ಕೈರಾನ್ ಪೊಲ್ಲಾರ್ಡ್ ಸ್ಥಾನಕ್ಕೆ ಕುತ್ತು ಬರುವ ನಿರೀಕ್ಷೆ ಇದೆ. ಸತತ ವೈಲ್ಯ ಕಾಣುತ್ತಿರುವ ಪೊಲ್ಲಾರ್ಡ್ ಬದಲಿಗೆ ಫ್ಯಾಬಿಯನ್ ಅಲೆನ್ ಅಥವಾ ಡಿವಾಲ್ಡ್ ಬ್ರೆವಿಸ್ ಅವಕಾಶ ಪಡೆಯಬಹುದು.
ಕೆಕೆಆರ್: ಅಸ್ಥಿರ ನಿರ್ವಹಣೆ ತೋರುತ್ತಿರುವ ಆರಂಭಿಕ ಆರನ್ ಫಿಂಚ್ ಬದಲಿಗೆ ಸ್ಯಾಮ್ ಬಿಲ್ಲಿಂಗ್ಸ್ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆಯಬಹುದು. ಬಾಬಾ ಇಂದ್ರಜಿತ್ ಸ್ಥಾನದಲ್ಲಿ ಅನುಭವಿ ಅಜಿಂಕ್ಯ ರಹಾನೆ ಮರಳಬಹುದು. ಉಮೇಶ್ ಯಾದವ್ ಫಿಟ್ ಆದರೆ ಹರ್ಷಿತ್ ರಾಣಾ ಸ್ಥಾನ ಬಿಟ್ಟುಕೊಡಲಿದ್ದಾರೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಮುಖಾಮುಖಿ: 30, ಮುಂಬೈ: 22, ಕೆಕೆಆರ್: 8