ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ 14ನೇ ಆವೃತ್ತಿಯ ಬಾಕಿ 31 ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ. ಶನಿವಾರ ಆಯೋಜನೆಗೊಂಡಿದ್ದ ಬಿಸಿಸಿಐನ ವರ್ಚುವಲ್ ಮಹಾಸಭೆಯಲ್ಲಿ (ಎಸ್‌ಜಿಎಂ) ಈ ತೀರ್ಮಾನ ಕೈಗೊಳ್ಳಲಾಗಿದೆ. ಕರೊನಾ ಪಿಡುಗಿನಿಂದಾಗಿ ಟಿ20 ವಿಶ್ವಕಪ್ ಆಯೋಜನೆ ಕುರಿತು ನಿರ್ಧರಿಸಲು ಒಂದು ತಿಂಗಳು ಸಮಯಾವಕಾಶ ಕೊಡುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ (ಐಸಿಸಿ) ಮನವಿ ಮಾಡಿಕೊಳ್ಳಲು ನಿರ್ಧರಿಸಲಾಯಿತು. ಸಭೆಯಲ್ಲಿ ಈ ಎರಡು ಕಾರ್ಯಸೂಚಿಗಳೇ ಪ್ರಧಾನವಾಗಿದ್ದವು. ಅಕ್ಟೋಬರ್-ನವೆಂಬರ್‌ನಲ್ಲಿ ಟಿ20 ವಿಶ್ವಕಪ್ ನಿಗದಿಯಾಗಿದೆ. ಭಾರತದಲ್ಲಿ ಕೋವಿಡ್-19 ಪರಿಸ್ಥಿತಿ ಹತೋಟಿಗೆ ಬರದಿದ್ದರೆ ಐಸಿಸಿ ಯುಎಇಗೆ ಸ್ಥಳಾಂತರಿಸಲು ಚಿಂತನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ತಿಂಗಳ ಸಮಯಾವಕಾಶ ಕೋರಿದೆ.
* ಸೆಪ್ಟೆಂಬರ್ 18 ರಿಂದ ಐಪಿಎಲ್?
2020ರಲ್ಲಿ 13ನೇ ಆವೃತಿಯನ್ನು ಆಯೋಜಿಸಿದ ಮಾದರಿಯಲ್ಲೇ 14ನೇ ಆವೃತಿಯ ಉಳಿದ 31 ಪಂದ್ಯಗಳನ್ನು ಯುಎಇಯಲ್ಲೇ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಸಂಘಟಿಸಲು ಬಿಸಿಸಿಐ ಅಧಿಕೃತ ತೀರ್ಮಾನ ಕೈಗೊಂಡಿತು. ಭಾರತದಲ್ಲಿ ಈಗ ಮಳೆಗಾಲ ಆಗಿರುವುದರಿಂದ, ಟೂರ್ನಿ ಆಯೋಜಿಸಲು ಕಷ್ಟವಾಗಲಿದೆ. ಯುಎಇಯಲ್ಲಿರುವ ಮೂರು ಮೈದಾನಗಳು ಸನಿಹದಲ್ಲಿ ಇರುವುದರಿಂದ, ಲೀಗ್ ಆಯೋಜನೆಗೆ ಕಷ್ಟವಾಗುವುದಿಲ್ಲ. ಆಟಗಾರರಿಗೂ ಅನುಕೂಲವಾಗುತ್ತದೆ ಎಂಬುದು ಸಭೆಯ ಅಭಿಪ್ರಾಯವಾಗಿತ್ತು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸದ್ಯ ಸೆಪ್ಟೆಂಬರ್ 18ರಿಂದ ಅಕ್ಟೋಬರ್ 10ರವರೆಗೆ ಲೀಗ್ ಆಯೋಜನೆಗೊಳ್ಳಲಿದೆ. ಅಲ್ಲದೆ, 3 ವಾರಗಳ ವೇಳಾಪಟ್ಟಿ ಶೀಘ್ರದಲ್ಲೇ ಅಂತಿಮಗೊಳ್ಳಲಿದೆ ಎಂದು ತಿಳಿಸಿದ್ದಾರೆ.
* ಅನಿಶ್ಚಿತತೆಯಲ್ಲಿ ಟಿ20 ವಿಶ್ವಕಪ್
ಟಿ20 ವಿಶ್ವಕಪ್‌ಗೆ ಭಾರತವೇ ಆತಿಥ್ಯವಹಿಸಬೇಕು ಎಂದು ಎಸ್‌ಜಿಎಂನಲ್ಲಿ ಪಾಲ್ಗೊಂಡಿದ್ದ ಬಹುತೇಕ ಸದಸ್ಯರು ಅಭಿಪ್ರಾಯವಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಈ ಬಗ್ಗೆ ತೀರ್ಮಾನಿಸಲು ಸಾಧ್ಯವಿಲ್ಲ ಎಂಬ ಮಾತು ಸಭೆಯಲ್ಲಿ ಕೇಳಿಬಂದಿತು. ಆದರೆ, ಕೋವಿಡ್-19 ಪರಿಸ್ಥಿತಿ ಅರಿಯಲು ಒಂದು ತಿಂಗಳು ಕಾಲಾವಕಾಶ ನೀಡುವಂತೆ ಐಸಿಸಿಗೆ ಮನವಿ ಮಾಡಲು ತೀರ್ಮಾನಿಸಲಾಯಿತು. ಜೂನ್ 1ಕ್ಕೆ ನಿಗದಿಯಾಗಿರುವ ಐಸಿಸಿ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಪಾಲ್ಗೊಳ್ಳುವರು.
* ವಿದೇಶಿ ಆಟಗಾರರ ಬಿಡುಗಡೆಗೆ ಒತ್ತಾಯವಿಲ್ಲ
ಐಪಿಎಲ್ ಟೂರ್ನಿ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಐಪಿಎಲ್ ನಡೆದರೆ ಬಹುತೇಕ ವಿದೇಶಿ ಆಟಗಾರರು ಗೈರಾಗುವ ಸಾಧ್ಯತೆ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಸಿಸಿಐ ಸದಸ್ಯರೊಬ್ಬರು, ಐಪಿಎಲ್‌ಗಾಗಿ ಆಟಗಾರರನ್ನು ಬಿಡುಗಡೆ ಮಾಡುವಂತೆ ಯಾವುದೇ ಕ್ರಿಕೆಟ್ ಮಂಡಳಿಗಳನ್ನೂ ಒತ್ತಾಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆದರೆ, ಬಹುತೇಕ ವೆಸ್ಟ್‌ಇಂಡೀಸ್ ಆಟಗಾರರು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲಿದ್ದಾರೆ. ಸಿಎಪಿಎಲ್ ಸೆ.19ಕ್ಕೆ ಮುಕ್ತಾಯಗೊಳ್ಳಲಿದೆ.
* ನನೆಗುದಿಯಲ್ಲಿ ದೇಶಿಯ ಆಟಗಾರರ ಪರಿಹಾರ
ದೇಶೀಯ ಆಟಗಾರರಿಗೆ ಪರಿಹಾರ ನೀಡುವ ಕುರಿತು ಸಭೆಯಲ್ಲಿ ಯಾವುದೇ ಚರ್ಚೆಗಳು ನಡೆಯಲಿಲ್ಲ. ಐಪಿಎಲ್ ಹಾಗೂ ಟಿ20 ವಿಶ್ವಕಪ್ ವಿಷಯವೇ ವಿಶೇಷ ಮಹಾಸಭೆಯ ಪ್ರಮುಖ ಕಾರ್ಯಸೂಚಿಯಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇತರೆ ವಿಷಯಗಳು ಚರ್ಚೆಗೆ ಬರಲಿಲ್ಲ ಎನ್ನಲಾಗಿದೆ. ಕೋವಿಡ್-19ರಿಂದ ಸತತ ಎರಡನೇ ವರ್ಷವೂ ದೇಶೀಯ ಕ್ರಿಕೆಟ್ ಟೂರ್ನಿಗಳು ಸರಿಯಾಗಿ ಆಯೋಜನೆಗೊಳ್ಳದ ಹಿನ್ನೆಲೆಯಲ್ಲಿ ಸಭೆಯಲ್ಲಿ ಆಟಗಾರರಿಗೆ ಸೂಕ್ತ ಪರಿಹಾರ ೋಷಿಸುವ ನಿರೀಕ್ಷೆಯಿತ್ತು. ಕಳೆದ ವರ್ಷ ರಣಜಿ ಟ್ರೋಫಿ ನಡೆಯದ ಕಾರಣ 700ಕ್ಕೂ ಹೆಚ್ಚು ದೇಶೀಯ ಕ್ರಿಕೆಟಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಸಭೆಯಲ್ಲಿ ಕೆಲ ರಾಜ್ಯ ಸಂಸ್ಥೆಗಳು ದನಿ ಎತ್ತಿದರೂ ಸೌರವ್ ಗಂಗೂಲಿ ಹಾಗೂ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿರಸ್ಕರಿಸಿದರು ಎನ್ನಲಾಗಿದೆ.
* ಸೋಮವಾರ ದುಬೈಗೆ ಗಂಗೂಲಿ, ಜಯ್ ಷಾ
ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಷಾ ಹಾಗೂ ಉಪಾಧ್ಯಕ್ಷ ರಾಜೀವ್ ಶುಕ್ಲಾ ಐಸಿಸಿ ಸಭೆಯಲ್ಲಿ ಪಾಲ್ಗೊಳ್ಳಲು ಸೋಮವಾರ ದುಬೈಗೆ ತೆರಳಲಿದ್ದಾರೆ. ಮಂಗಳವಾರ (ಜೂ.1) ಸಭೆ ನಡೆಯಲಿದ್ದು, ಅಕ್ಟೋಬರ್-ನವೆಂಬರ್‌ನಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಆಯೋಜನೆ ಈ ಸಭೆಯ ಪ್ರಮುಖ ಕಾರ್ಯಸೂಚಿಯಾಗಿದೆ.
* ಮಹಾರಾಷ್ಟ್ರದಲ್ಲಿ ಟಿ20 ವಿಶ್ವಕಪ್?
ಟಿ20 ವಿಶ್ವಕಪ್ ಆಯೋಜನೆ ಸಂಬಂಧ ಐಸಿಸಿಯಿಂದ ಬಿಸಿಸಿಐ ಒಂದು ತಿಂಗಳು ಸಮಯಾವಕಾಶ ಕೋರಲಿದೆ. ಅಲ್ಲದೆ, ಮಹಾರಾಷ್ಟ್ರದಲ್ಲಿ (ಮುಂಬೈನಲ್ಲಿ ಮೂರು ಮೈದಾನ, ಪುಣೆಯಲ್ಲಿ ಒಂದು) ಮಾತ್ರ ಟಿ20 ವಿಶ್ವಕಪ್ ಆಯೋಜಿಸುವ ಪ್ರಸ್ತಾವನೆಯನ್ನೂ ಬಿಸಿಸಿಐ ಸಭೆ ಮುಂದಿಡಲಿದೆ ಎನ್ನಲಾಗಿದೆ. ಆದರೆ, ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಟೂರ್ನಿಯಲ್ಲಿ ಪಾಕಿಸ್ತಾನದ ಪಾಲ್ಗೊಲ್ಳುವಿಕೆಯ ಮೇಲೆ ಕರಿನೆರಳು ಬಿದ್ದಿದೆ. ಆದರೂ ಆ ವೇಳೆಗೆ ರಾಜತಾಂತ್ರಿಕ ಪರಿಹಾರ ದೊರೆಯುವ ಬಗ್ಗೆ ಬಿಸಿಸಿಐ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.