ಕ್ರೀಡೆ

ಭಾರತೀಯ ಕುಸ್ತಿ ಒಕ್ಕೂಟದ ಆಡಳಿತ ನೋಡಿಕೊಳ್ಳಲಿರುವ ತಾತ್ಕಾಲಿಕ ಸಮಿತಿಯಲ್ಲಿ ಕನ್ನಡಿಗ ಎಂಎಂ ಸೋಮಯ್ಯ

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್​​ಐ) ಹೊಸ ಆಡಳಿತ ಮಂಡಳಿ ಚುನಾಯಿತಗೊಂಡ ಮೂರೇ ದಿನಗಳಲ್ಲಿ ಕೇಂದ್ರ ಕ್ರೀಡಾ ಸಚಿವಾಲಯದಿಂದ ಅಮಾನತುಗೊಂಡಿರುವುದರಿಂದ ಅದರ ಆಡಳಿತವನ್ನು ನೋಡಿಕೊಳ್ಳಲು ಮೂವರು ಸದಸ್ಯರ ತಾತ್ಕಾಲಿಕ ಸಮಿತಿಯನ್ನು ಭಾರತೀಯ ಒಲಿಂಪಿಕ್​ ಸಂಸ್ಥೆ (ಐಒಎ) ಬುಧವಾರ ನೇಮಿಸಿದೆ.

ಭಾರತೀಯ ವುಶು ಸಂಸ್ಥೆಯ ಅಧ್ಯಕ್ಷ ಭೂಪಿಂದರ್​ ಸಿಂಗ್​ ಬಾಜ್ವಾ ಆ್ಯಡ್​-ಹಾಕ್​ ಸಮಿತಿಯ ಚೇರ್ಮನ್​ ಆಗಿದ್ದರೆ, ಕರ್ನಾಟಕದ ಮಾಜಿ ಹಾಕಿ ಆಟಗಾರ ಎಂಎಂ ಸೋಮಯ್ಯ ಮತ್ತು ಮಾಜಿ ಷಟ್ಲರ್​ ಮಂಜುಷಾ ಕನ್ವರ್​ ಸಮಿತಿಯ ಇನ್ನಿಬ್ಬರು ಸದಸ್ಯರಾಗಿದ್ದಾರೆ. ಕ್ರೀಡಾ ಸಚಿವಾಲಯದ ಸೂಚನೆಯ ಮೇರೆಗೆ ಐಒಎ, ಡಬ್ಲ್ಯುಎ್​ಐ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳಲು ತಾತ್ಕಾಲಿಕ ಸಮಿತಿಯನ್ನು ರಚಿಸಿದೆ.

1980ರ ಮಾಸ್ಕೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ಆಟಗಾರರಾಗಿರುವ ಸೋಮಯ್ಯ, 1988ರ ಸಿಯೋಲ್​ ಒಲಿಂಪಿಕ್ಸ್​ನಲ್ಲಿ ತಂಡದ ನಾಯಕರೂ ಆಗಿದ್ದರು. ಒಟ್ಟು 3 ಒಲಿಂಪಿಕ್ಸ್​ ಆಡಿರುವ 64 ವರ್ಷದ ಸೋಮಯ್ಯ, ಅರ್ಜುನ ಪ್ರಶಸ್ತಿ ಪುರಸತರೂ ಆಗಿದ್ದಾರೆ.