ಮುಂಬೈ: ಕ್ರಿಕೆಟ್ ಲೋಕದಲ್ಲಿ ತಮ್ಮ ಬ್ಯಾಟಿಂಗ್, ಬೌಲಿಂಗ್ ಮತ್ತು ಆಲ್ರೌಂಡ್ ಪ್ರದರ್ಶನದಿಂದಲೇ ದಶಕಗಳ ಕಾಲ ಕ್ರೀಡಾ ಅಭಿಮಾನಿಗಳನ್ನು ರಂಜಿಸಿರುವ ಮಾಜಿ ಹಿರಿಯ, ದಿಗ್ಗಜ ಕ್ರಿಕೆಟಿಗರು ಮತ್ತೊಮ್ಮೆ ಮೈದಾನಕ್ಕಿಳಿಯಲು ಸಜ್ಜಾಗಿದ್ದು, ಕ್ರಿಕೆಟ್ ಪ್ರಿಯರ ಬಯಕೆ ಕಡೆಗೂ ಈಡೇರಿದೆ. ಪ್ರೈಮ್-ಟೈಮ್ ಕ್ರಿಕೆಟ್ ಹಬ್ಬಕ್ಕಾಗಿ ಕಾತರ ಹೊರಹಾಕಿದ್ದ ಫ್ಯಾನ್ಸ್ಗಳಿಗೆ ಈಗ ಹಳೆಯ ಪ್ರತಿಸ್ಪರ್ಧಿಗಳು ಮತ್ತೇ ಅಖಾಡಕ್ಕಿಳಿಯಲು ಮುಂದಾಗಿರುವುದು ಭಾರೀ ಸಂತಸ ತಂದಿದೆ.
ಇದನ್ನೂ ಓದಿ: ಕಣ್ಮನ ತಣಿಸುವ ಅರಟಾಳ ಮಾಳಿಂಗೇಶ್ವರ ಜಾತ್ರಾ ಮಹೋತ್ಸವ
ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಸೇರಿದಂತೆ ಒಟ್ಟು ಆರು ತಂಡಗಳು ಭಾಗವಹಿಸಲಿರುವ ಬಹುನಿರೀಕ್ಷಿತ ಉದ್ಘಾಟನಾ ಆವತ್ತಿ ಪಂದ್ಯಗಳ ವೇಳಾಪಟ್ಟಿಯನ್ನು ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ (IML) ಅಧಿಕೃತವಾಗಿ ಪ್ರಕಟಿಸಿದೆ. ಪಂದ್ಯಾವಳಿಗಳು ಜಿಯೋಸ್ಟಾರ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಕಲರ್ಸ್ ಸಿನಿಪ್ಲೆಕ್ಸ್ (SD & HD) ಮತ್ತು ಕಲರ್ಸ್ ಸಿನಿಪ್ಲೆಕ್ಸ್ ಸೂಪರ್ಹಿಟ್ಸ್ನಲ್ಲಿ ನೇರ ಪ್ರಸಾರವಾಗಲಿದೆ. ಎಲ್ಲಾ ಪಂದ್ಯಗಳು ಸಂಜೆ 7:30ಕ್ಕೆ ಆರಂಭವಾಗಲಿವೆ.
ಫೆಬ್ರವರಿ 22, 2025ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ದಿಗ್ಗಜ ಹಿರಿಯ ಆಟಗಾರರು ಮುಖಾಮುಖಿಯಾಗಲಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಶ್ರೀಲಂಕಾದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಕುಮಾರ್ ಸಂಗಕ್ಕಾರ ನೇತೃತ್ವದ ಶ್ರೀಲಂಕಾ ತಂಡದ ವಿರುದ್ಧ ಭಾರತೀಯ ತಂಡವನ್ನು ಮುನ್ನಡೆಸಲಿದ್ದಾರೆ.
"ಐಎಂಎಲ್ ಕ್ರಿಕೆಟ್‌ನ ವಿಶಿಷ್ಟ ಮತ್ತು ಶಾಶ್ವತ ಪರಂಪರೆಯ ಆಚರಣೆಯಾಗಲಿದೆ. ಎಲ್ಲಾ ತಂಡಗಳು ಭಾರೀ ಪೈಪೋಟಿ ನೀಡಲು ಸಜ್ಜಾಗಿವೆ. ನ್ಯಾಯಯುತವಾಗಿ ಆಡುವ ತೀವ್ರ ಮತ್ತು ಸ್ಪರ್ಧಾತ್ಮಕ ಲೀಗ್‌ನಲ್ಲಿ ನನ್ನ ಸಮಕಾಲೀನವರೊಂದಿಗೆ ಮತ್ತೆ ಮೈದಾನಕ್ಕೆ ಕಾಲಿಡಲು ಬಹಳ ಉತ್ಸಾಹ ಹಾಗೂ ಕಾತರ ನನ್ನಲ್ಲಿ ಕಾಡುತ್ತಿದೆ" ಎಂದು ಭಾರತ ತಂಡದ ನಾಯಕ ಸಚಿನ್ ತೆಂಡೂಲ್ಕರ್ ಹೇಳಿದರು.
"ಐಎಂಎಲ್ ಕ್ರಿಕೆಟ್ ಮಾಜಿ ಕ್ರಿಕೆಟಿಗರಿಗೆ ಅದ್ಭುತ ಅವಕಾಶ. ಹಳೆಯ ಪೈಪೋಟಿಯನ್ನು ಮೆಲುಕು ಹಾಕಲು ಮತ್ತು ಅಭಿಮಾನಿಗಳೊಂದಿಗೆ ಮತ್ತೇ ಬೆರೆಯಲು, ಸಂಪರ್ಕ ಸಾಧಿಸಲು ಒಂದೊಳ್ಳೆ ವೇದಿಕೆ. ಈ ಐತಿಹಾಸಿಕ ಲೀಗ್‌ನಲ್ಲಿ ಹಲವಾರು ಗಣ್ಯರ ಜತೆಗೆ ಭಾಗವಹಿಸಲು ನಾನೂ ಉತ್ಸುಕನಾಗಿದ್ದೇನೆ" ಎಂದು ಶ್ರೀಲಂಕಾ ತಂಡದ ನಾಯಕ ಕುಮಾರ್ ಸಂಗಕ್ಕಾರ ಸಂತಸ ಹಂಚಿಕೊಂಡರು.
"ಐಎಂಎಲ್‌ಗಾಗಿ ಜಿಯೋಸ್ಟಾರ್‌ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ನಮಗೆ ಅತೀವ ಸಂತಸ ಮತ್ತು ಗೌರವವಿದೆ. ಜಿಯೋಸ್ಟಾರ್ ತನ್ನ ಅನುಭವ ಹಾಗೂ ಕ್ರೀಡಾ ಪ್ರಸಾರದಲ್ಲಿನ ಪರಿಣತಿಯೊಂದಿಗೆ, ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ಲೀಗ್ ಅನ್ನು ಸ್ಮರಣೀಯ ಅನುಭವವನ್ನಾಗಿ ಮಾಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ" ಎಂದು ಎಫ್‌ಎಸ್‌ಪಿಎಂ ನಿರ್ದೇಶಕಿ ಜಹಾನ್ ಮೆಹ್ತಾ ಹೇಳಿದರು.
ಇದನ್ನೂ ಓದಿ: ಹೋಟೆಲ್ಗಳಿಗೆ ಸ್ಟಾರ್ ಸ್ಟೇಟಸ್ ಕೊಡೋರು ಯಾರು; ಅದನ್ನು ಹೇಗೆ ಗುರುತಿಸುವುದು ಗೊತ್ತಾ? | StarHotel
"ಅಂತಾರಾಷ್ಟ್ರೀಯ ಮಾಸ್ಟರ್ಸ್ ಲೀಗ್‌ನ ಉದ್ಘಾಟನಾ ಆವೃತ್ತಿಯನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ನಮ್ಮ ಲೀನಿಯರ್ ಚಾನೆಲ್‌ಗಳಾದ ಕಲರ್ಸ್ ಸಿನಿಪ್ಲೆಕ್ಸ್ ಮತ್ತು ಕಲರ್ಸ್ ಸಿನಿಪ್ಲೆಕ್ಸ್ ಸೂಪರ್‌ಹಿಟ್ಸ್‌ನೊಂದಿಗೆ ಪ್ರಸಾರ ಮಾಡಲು ನಮಗೆ ಖುಷಿಯಿದೆ. ಐಎಂಎಲ್ ಕೇವಲ ಕ್ರಿಕೆಟ್ ಪಂದ್ಯಾವಳಿಗಿಂತ ಮೀರಿದ್ದಾಗಿದೆ. ಮುಂಬರುವ ವಾರಗಳಲ್ಲಿ ಅಭಿಮಾನಿಗಳು ರೋಮಾಂಚಕ ಪಂದ್ಯಗಳು, ತಜ್ಞರ ವ್ಯಾಖ್ಯಾನ, ವಿಶೇಷ ತೆರೆಮರೆಯ ಎಂಟ್ರಿ ಮತ್ತು ಬಹಳಷ್ಟು ರೋಚಕತೆಯನ್ನು ಈ ಲೀಗ್‌ನಲ್ಲಿ ನಿರೀಕ್ಷಿಸಬಹುದು" ಎಂದು ಜಿಯೋಸ್ಟಾರ್‌ನ ಹಿಂದಿ ಚಲನಚಿತ್ರ ವ್ಯವಹಾರದ ಮುಖ್ಯಸ್ಥ ರೋಹನ್ ಲವ್ಸಿ ಹೇಳಿದರು.