ಬಟುಮಿ (ಜಾರ್ಜಿಯಾ): ಭಾರತದ ಯುವ ಆಟಗಾರ್ತಿ ದಿವ್ಯಾ ದೇಶ್ಮುಖ್ ಫಿಡೆ ಮಹಿಳಾ ಚೆಸ್ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಅವರು ಈ ಸಾಧನೆ ಮಾಡಿದ ಎರಡನೇ ಭಾರತೀಯರೆನಿಸಿದ್ದಾರೆ. ಗ್ರಾಂಡ್ಮಾಸ್ಟರ್ ಕೊನೆರು ಹಂಪಿ ಭಾನುವಾರವಷ್ಟೇ ಈ ಸಾಧನೆ ಮಾಡಿದ ಮೊದಲ ಭಾರತೀಯರೆನಿಸಿದ್ದರು.
19 ವರ್ಷದ ದಿವ್ಯಾ ಸೋಮವಾರ ನಡೆದ ಕ್ವಾರ್ಟರ್ಫೈನಲ್ ಹಂತದ ಟೈಬ್ರೇಕರ್ನಲ್ಲಿ ದೇಶಬಾಂಧವರಾದ ಅನುಭವಿ ಆಟಗಾರ್ತಿ ಹರಿಕಾ ದ್ರೋಣವಲ್ಲಿ ಎದುರು ಗೆಲುವು ದಾಖಲಿಸಿದರು. ಕ್ವಾರ್ಟರ್ಫೈನಲ್ ಹಂತದ 2 ಕ್ಲಾಸಿಕಲ್ ಪಂದ್ಯಗಳಲ್ಲಿ ದಿವ್ಯಾ-ಹರಿಕಾ ಡ್ರಾ ಸಾಧಿಸಿದ್ದರು. ಇದರಿಂದ ವಿಜೇತರನ್ನು ನಿರ್ಧರಿಸಲು ನಡೆದ ಪ್ರಗತಿಯ ಎರಡೂ ಪಂದ್ಯಗಳಲ್ಲಿ ಮೇಲುಗೈ ಸಾಧಿಸಿದ ಇಂಟರ್ನ್ಯಾಷನಲ್ ಮಾಸ್ಟರ್ ದಿವ್ಯಾ, 3&1ರಿಂದ ಗೆದ್ದು ಉಪಾಂತ್ಯಕ್ಕೇರಿದರು.
15ನೇ ಶ್ರೇಯಾಂಕಿತೆ ದಿವ್ಯಾ ಸೆಮೀಸ್ನಲ್ಲಿ 3ನೇ ಶ್ರೇಯಾಂಕಿತೆ ಚೀನಾದ ಟಾನ್ ಜೊಂಗ್ಯಿ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಸೆಮೀಸ್ನಲ್ಲಿ 4ನೇ ಶ್ರೇಯಾಂಕಿತೆ ಕೊನೆರು ಹಂಪಿ, ಅಗ್ರ ಶ್ರೇಯಾಂಕಿತೆ ಚೀನಾದ ಲೀ ಟಿಂಗ್ಜೀ ವಿರುದ್ಧ ಆಡಲಿದ್ದಾರೆ. ಟೂರ್ನಿಯ ಅಗ್ರ ಮೂವರು ಆಟಗಾರ್ತಿಯರು ಮುಂದಿನ ವರ್ಷ ನಡೆಯಲಿರುವ ವಿಶ್ವ ಚಾಂಪಿಯನ್ಷಿಪ್ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆಯಲಿದ್ದಾರೆ. ಈಗ ಹಂಪಿ&ದಿವ್ಯಾ ಪೈಕಿ ಒಬ್ಬರು ಅಥವಾ ಇಬ್ಬರೂ ಅರ್ಹತೆ ಗಳಿಸುವ ಅವಕಾಶವಿದೆ.
ನಾಗ್ಪುರದ ವೈದ್ಯ ದಂಪತಿಯ ಪುತ್ರಿಯಾಗಿರುವ ದಿವ್ಯಾ, ಕಳೆದ ವರ್ಷ ಚೆಸ್ ಒಲಿಂಪಿಯಾಡ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಅಲ್ಲದೆ ಟೂರ್ನಿಯಲ್ಲಿ ವೈಯಕ್ತಿಕವಾಗಿಯೂ ಚಿನ್ನದ ಪದಕ ಗೆದ್ದುಕೊಂಡಿದ್ದರು.