ಆಕ್ಲೆಂಡ್: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನ್ಯೂಜಿಲೆಂಡ್ಗೆ 307ರನ್ಗಳ ಟಾರ್ಗೆಟ್ ನೀಡಿತ್ತು. ಇದನ್ನು ಬೆನ್ನುಹತ್ತಿದ ನ್ಯೂಜಿಲೆಂಡ್ ತಂಡ 7 ವಿಕೆಟ್ಗಳ ಗೆಲುವು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಾಯಕ ಶಿಖರ್ ಧವನ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಅವರ ಅರ್ಧಶತಕ ಹಾಗೂ ವಾಷಿಂಗ್ಟನ್ ಸುಂದರ್ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 306 ರನ್ ಗಳಿಸಿತ್ತು.
307 ರನ್ಗಳ ಗುರಿ ಬೆನ್ನು ಹತ್ತಿದ ನ್ಯೂಜಿಲೆಂಡ್ ತಂಡ ಉತ್ತಮ ಆರಂಭದ ನಿರೀಕ್ಷೆಯಲ್ಲಿತ್ತು. ಆದರೆ ಫಿನ್ ಅಲೆನ್ 22 ರನ್ ಹಾಗೂ ಡಿವೊನ್ ಕಾನ್ವೇ 24 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ತಂಡದ ಮೊತ್ತ 27 ರನ್ ಆಗಿದ್ದಾಗ ಫಿನ್ ಅಲೆನ್ ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಡಿವೊನ್ ಕಾನ್ವೇ ಉಮ್ರಾನ್ ಮಲಿಕ್ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ಔಟ್ ಆದರು.
ನಂತರ ಜತೆಯಾದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಟಾಮ್ ಲಾಥಮ್ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿಯನ್ನು ಬೇರ್ಪಡಿಸಲು ಭಾರತೀಯ ಬೌಲರ್ಗಳು ಎಷ್ಟೇ ಪ್ರಯತ್ನ ಪಟ್ಟರೂ, ಇಬ್ಬರೂ ಕ್ರಿಸ್ ಕಚ್ಚಿ ನಿಂತರು. ಇದರೊಂದಿಗೆ ಟಾಮ್ ಲಾಥಮ್ 145 ರನ್ ಗಳಿಸಿ, ಅಜೇಯ ಶತಕದೊಂದಿಗೆ ಮಿಂಚಿದರು. ಆಕ್ರಮಣಕಾರಿಯಾಗ ಬ್ಯಾಟ್ ಬೀಸುತ್ತಿದ್ದ ಲಾಥಮ್ಗೆ ನಾಯಕ ವಿಲಿಯಮ್ಸನ್ ಸಾಥ್ ನೀಡಿದರು. ವಿಲಿಯಮ್ಸನ್ ಅಜೇಯ 94 ರನ್ ಗಳಿಸಿ ಮಿಂಚಿದರು. ಇವರಿಬ್ಬರ ಮುರಿಯದ ಜತೆಯಾಟದ ನೆರವಿಂದ ನ್ಯೂಜಿಲೆಂಡ್ ತಂಡ ಮೊದಲ ಏಕದಿನ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. (ಏಜೆನ್ಸೀಸ್)