ನವದೆಹಲಿ: ಮುಂದಿನ ವರ್ಷದ ಟಿ20 ವಿಶ್ವಕಪ್ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜೂನ್ 9ರಂದು ನ್ಯೂಯಾರ್ಕ್ನಲ್ಲಿ ಪರಸ್ಪರ ಮುಖಾಮುಖಿ ಆಗಲಿವೆ ಎಂದು ವರದಿಯಾಗಿದೆ. ಹಾಲಿ ವರ್ಷಾಂತ್ಯದೊಳಗೆ ಅಂದರೆ ಮುಂದಿನ ವಾರಾಂತ್ಯದೊಳಗೆ ವಿಶ್ವಕಪ್ ವೇಳಾಪಟ್ಟಿ ಅಧಿಕೃತವಾಗಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಉಪಖಂಡದ ಟಿವಿ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ಭಾರತ-ಪಾಕ್ ಪಂದ್ಯವನ್ನು ಹಗಲಿನಲ್ಲಿ ಆಯೋಜಿಸುವ ಯೋಜನೆ ಇದೆ. ಭಾರತ&ಅಮೆರಿಕ ನಡುವಿನ ಸಮಯದ ವ್ಯತ್ಯಾಸದಿಂದಾಗಿ ಈ ಚಿಂತನೆ ನಡೆದಿದೆ. ಜೂನ್ 9 ಭಾನುವಾರವಾಗಿದೆ. ಅಮೆರಿಕದಲ್ಲಿ ರಾತ್ರಿ ಪಂದ್ಯ ಆಯೋಜಿಸಿದರೆ, ಭಾರತದಲ್ಲಿ ಸೋಮವಾರ ಮುಂಜಾನೆ ಪಂದ್ಯ ಪ್ರಸಾರವಾಗುತ್ತದೆ. ಹೀಗಾಗಿ ಅಮೆರಿಕದಲ್ಲಿ ರಾತ್ರಿ ಪಂದ್ಯ ನಡೆಸುವುದಾದರೆ ಜೂನ್ 8ರಂದೇ ನಡೆಯಲಿದೆ. ಆಗ ಭಾರತದಲ್ಲಿ ಭಾನುವಾರ ಬೆಳಗ್ಗೆ ಪಂದ್ಯ ಪ್ರಸಾರವಾಗಲಿದೆ. ಭಾರತ-ಪಾಕ್ ತಂಡಗಳ ಗುಂಪಿನಲ್ಲಿ ಐರ್ಲೆಂಡ್ 3ನೇ ತಂಡವಾಗಿರುವ ಸಾಧ್ಯತೆಗಳಿವೆ.
ಅಮೆರಿಕದ 3 ತಾಣಗಳ ಜತೆಗೆ ವೆಸ್ಟ್ ಇಂಡೀಸ್ನ 6 ದೇಶಗಳೂ ಟೂರ್ನಿಗೆ ಆತಿಥ್ಯ ವಹಿಸಲಿದೆ. ಆದರೆ ಭಾರತ ತಂಡದ ಬಹುತೇಕ ಎಲ್ಲ ಪಂದ್ಯಗಳು ಅಮೆರಿಕದಲ್ಲೇ ನಡೆಯುವ ಸಾಧ್ಯತೆಗಳಿವೆ. 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ಗೆ ಟಿ20 ಕ್ರಿಕೆಟ್ ಸೇರ್ಪಡೆಯಾಗಿರುವುದರಿಂದ ಅಮೆರಿಕದಲ್ಲಿ ಈಗಿನಿಂದಲೇ ಇದನ್ನು ಜನಪ್ರಿಯಗೊಳಿಸುವುದು ಇದರ ಉದ್ದೇಶವಾಗಿದೆ. ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯೊಂದು ಆಯೋಜನೆಗೊಂಡಿದೆ.
ಟಿ20 ವಿಶ್ವಕಪ್ನಲ್ಲಿ ಈ ಬಾರಿ ತಂಡಗಳ ಸಂಖ್ಯೆಯನ್ನು 20ಕ್ಕೆ ಏರಿಸಲಾಗಿದೆ. ತಂಡಗಳು ತಲಾ 5ರಂತೆ 4 ಗುಂಪುಗಳಲ್ಲಿ ವಿಭಜನೆಯಾಗಲಿದ್ದು, ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್-8 ಹಂತಕ್ಕೇರಲಿವೆ. ಇಲ್ಲಿ ಮತ್ತೆ ರೌಂಡ್ ರಾಬಿನ್ ಮಾದರಿ ಪಂದ್ಯ ನಡೆದ ಬಳಿಕ ಅಗ್ರ 4 ತಂಡಗಳು ಸೆಮಿಫೈನಲ್ಗೇರಲಿವೆ. ಟೂರ್ನಿ ಜೂನ್ 4ರಿಂದ 30ರವರೆಗೆ ನಡೆಯಲಿದೆ.
ಒಂದೇ ಗುಂಪಿನಲ್ಲಿ ಆಸೀಸ್-ಇಂಗ್ಲೆಂಡ್
ಆಶಸ್ ಎದುರಾಳಿಗಳಾದ ಆಸ್ಟ್ರೆಲಿಯಾ-ಇಂಗ್ಲೆಂಡ್ ತಂಡಗಳೂ ಟಿ20 ವಿಶ್ವಕಪ್ನಲ್ಲಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆಯಲಿವೆ ಎನ್ನಲಾಗಿದೆ. ಇಂಗ್ಲೆಂಡ್ ಹಾಲಿ ಟಿ20 ವಿಶ್ವ ಚಾಂಪಿಯನ್ ಆಗಿದ್ದರೆ, ಆಸೀಸ್ ಹಾಲಿ ಟೆಸ್ಟ್-ಏಕದಿನ ವಿಶ್ವ ಚಾಂಪಿಯನ್ ತಂಡವಾಗಿದೆ. ಹೀಗಾಗಿ ಈ ಮುಖಾಮುಖಿಯೂ ತೀವ್ರ ಕುತೂಹಲ ಕೆರಳಿಸಲಿದೆ. ಈ ಪಂದ್ಯ ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿ ನಡೆಯುವ ನಿರೀೆ ಇದೆ. ನ್ಯೂಜಿಲೆಂಡ್-ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್-ಶ್ರೀಲಂಕಾ ಮತ್ತೆರಡು ಗುಂಪಿನ ಅಗ್ರ ತಂಡಗಳಾಗಿರುವ ಸಾಧ್ಯತೆಗಳಿವೆ.