ಬೆಂಗಳೂರು: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಯಾವಾಗಲೂ ಕಾವೇರಿಸುತ್ತವೆ. ಅದರಲ್ಲೂ ವಿಶ್ವಕಪ್ ವೇದಿಕೆಯಲ್ಲಂತೂ ಅದು ಮೇರೆ ಮೀರುತ್ತದೆ. ಇದರ ನಡುವೆಯೂ ಭಾರತ ಏಕದಿನ ವಿಶ್ವಕಪ್ನಲ್ಲಿ 1992ರಿಂದ ಪಾಕ್ ವಿರುದ್ಧದ ಎಲ್ಲ 7 ಮುಖಾಮುಖಿಗಳಲ್ಲಿ ಗೆದ್ದ ಅಜೇಯ ದಾಖಲೆ ಹೊಂದಿದ್ದು, ಈ ಸಲ ಅದನ್ನು 8ಕ್ಕೆ ವಿಸ್ತರಿಸುವ ಗುರಿಯಲ್ಲಿದೆ. ಶನಿವಾಋ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಸಲದ ಹೈ&ವೋಲ್ಟೇಜ್ ಪಂದ್ಯ ನಡೆಯಲಿದೆ. "ಫೈನಲ್'ನಷ್ಟೇ ಮಹತ್ವದ ಈ ಪಂದ್ಯವನ್ನು ಸ್ಟೇಡಿಯಂನಲ್ಲಿ 1.32 ಲಕ್ಷ ಮತ್ತು ಜಗತ್ತಿನೆಲ್ಲೆಡೆ 150 ಕೋಟಿಗೂ ಅಧಿಕ ಜನರು ವೀಸುವ ನಿರೀಕ್ಷೆ ಇದೆ. ಇಲ್ಲಿ ಮಿಂಚುವ ಆಟಗಾರರು ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ. ಅಜಯ್ ಜಡೇಜಾ, ವೆಂಕಟೇಶ್ ಪ್ರಸಾದ್ ನಿರ್ವಹಣೆಗಳೇ ಇದಕ್ಕೆ ಸಾಕ್ಷಿ. ಇನ್ನು ದಿಗ್ಗಜ ಆಟಗಾರರಿಗೂ ತಮ್ಮ ಹಿರಿಮೆ ತೋರಿಸಲು ಇದು ಸದಾವಕಾಶ. ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಈ ಪಂದ್ಯಗಳಲ್ಲೇ ಮಿಂಚಿ ತಮ್ಮ ಘನತೆ ಹೆಚ್ಚಿಸಿಕೊಂಡಿದ್ದಾರೆ. ಭಾರತ-ಪಾಕ್ ನಡುವಿನ ಹಿಂದಿನ 7 ವಿಶ್ವಕಪ್ ಪಂದ್ಯಗಳ ಹಿನ್ನೋಟ ಇಲ್ಲಿದೆ...
1992: ಪ್ರಥಮ ಮುಖಾಮುಖಿ
ಸಚಿನ್ 1992ರಲ್ಲಿ ಮೊದಲ ಬಾರಿ ವಿಶ್ವಕಪ್ ಆಡಿದ್ದರು. ಅದು ಆಸ್ಟ್ರೆಲಿಯಾ ನೆಲದಲ್ಲೇ. ಆಗ ಭಾರತ-ಪಾಕ್ ನಡುವಿನ ವಿಶ್ವಕಪ್ನ ಮೊದಲ ಮುಖಾಮುಖಿಗೆ ವೇದಿಕೆಯಾಗಿದ್ದು ಸಿಡ್ನಿ ಕ್ರಿಕೆಟ್ ಮೈದಾನ. ಮಾರ್ಚ್ 4ರಂದು ಅಜರುದ್ದೀನ್ ನಾಯಕತ್ವದಲ್ಲಿ ಆಡಿದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿ 49 ಓವರ್ಗಳಲ್ಲಿ 7 ವಿಕೆಟ್ಗೆ 216 ರನ್ ಪೇರಿಸಿತ್ತು. 20 ವರ್ಷದ ಹುಡುಗನಾಗಿದ್ದ ಸಚಿನ್ 62 ಎಸೆತಗಳಲ್ಲಿ 3 ಬೌಂಡರಿ ಇದ್ದ 54 ರನ್ ಬಾರಿಸಿ ಅಜೇಯರಾಗುಳಿದಿದ್ದರು. ಮೊತ್ತ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಅಮೀರ್ ಸೋಹೆಲ್ (62) ಹಾಗೂ ಜಾವೇದ್ ಮಿಯಂದಾದ್ (40) ಉತ್ತಮ ಆಟವಾಡಿದ್ದರು. 10 ಓವರ್ ಬೌಲಿಂಗ್ ಮಾಡಿದ್ದ ಸಚಿನ್ 37 ರನ್ ನೀಡಿ ಅಮೀರ್ ಸೋಹೆಲ್ರ ವಿಕೆಟ್ ಉರುಳಿಸಿದ್ದರು. ಅದರಲ್ಲೂ ಕೊನೇ 8 ವಿಕೆಟ್ಗಳನ್ನು ಪಾಕಿಸ್ತಾನ ಕೇವಲ 68 ರನ್ಗೆ ಕಳೆದುಕೊಂಡಿದ್ದರಿಂದ 48.1 ಓವರ್ಗಳಲ್ಲಿ 173 ರನ್ಗೆ ಆಲೌಟ್ ಆಗಿತ್ತು. ಭಾರತ 43 ರನ್ನಿಂದ ಗೆಲುವು ಸಾಧಿಸಿತ್ತು. ಇದೇ ಸಮಯದಲ್ಲಿ ವಿಕೆಟ್ ಕೀಪರ್ ಕಿರಣ್ ಮೋರೆಗೆ ಜಾವೆದ್ ಮಿಯಂದಾದ್ ಕೆಣಕಿ ಸುದ್ದಿಯಾಗಿದ್ದರು.
ಭಾರತ: 49 ಓವರ್ಗಳಲ್ಲಿ 7 ವಿಕೆಟ್ಗೆ 216 (ಸಚಿನ್ 54, ಜಡೇಜಾ 46, ಕಪಿಲ್ದೇವ್ 35, ಮುಷ್ತಾಕ್ ಅಹ್ಮದ್ 59ಕ್ಕೆ 3, ಅಕೀಬ್ ಜಾವೇದ್ 28ಕ್ಕೆ 2), ಪಾಕಿಸ್ತಾನ: 48.1 ಓವರ್ಗಳಲ್ಲಿ 173 (ಅಮೀರ್ ಸೋಹೆಲ್ 62, ಮಿಯಂದಾದ್ 40, ಮನೋಜ್ ಪ್ರಭಾಕರ್ 22ಕ್ಕೆ 2, ಕಪಿಲ್ದೇವ್ 30ಕ್ಕೆ 2, ಸಚಿನ್ 37ಕ್ಕೆ 1). ಪಂದ್ಯಶ್ರೇಷ್ಠ: ಸಚಿನ್ ತೆಂಡುಲ್ಕರ್
1996: ಬೆಂಗ್ಳೂರಲ್ಲಿ ಕ್ವಾರ್ಟರ್ಫೈನಲ್ ಕಾದಾಟ
2ನೇ ಬಾರಿಗೆ ಭಾರತ ವಿಶ್ವಕಪ್ನಲ್ಲಿ ಪಾಕಿಸ್ತಾನವನ್ನು ಎದುರಿಸಿದ್ದು 1996ರಲ್ಲಿ ಬೆಂಗಳೂರಿನಲ್ಲಿ ನಡೆದ ಕ್ವಾರ್ಟರ್ಫೈನಲ್ನಲ್ಲಿ. ಮೊದಲ ವಿಕೆಟ್ಗೆ ನವಜೋತ್ ಸಿಂಗ್ ಸಿಧು (93) ಜತೆಗೂಡಿ 90 ರನ್ ಪೇರಿಸಿದ್ದ ಸಚಿನ್ (31ರನ್, 59ಎಸೆತ, 3ಬೌಂಡರಿ), 5 ಓವರ್ ಬೌಲಿಂಗ್ ಕೂಡ ಮಾಡಿದ್ದರು. ಅಜಯ್ ಜಡೇಜಾ ಕೊನೇಕ್ಷಣದಲ್ಲಿ ಸಿಡಿದು 25 ಎಸೆತಗಳಲ್ಲಿ 45 ರನ್ ದೋಚಿದ ಪರಿಣಾಮ ಭಾರತ 8 ವಿಕೆಟ್ಗೆ 287 ರನ್ಗಳ ಉತ್ತಮ ಮೊತ್ತ ಪೇರಿಸಿತು. ಪ್ರತಿಯಾಗಿ ನಾಯಕ ಅಮೀರ್ ಸೋಹೆಲ್ (55) ಅರ್ಧಶತಕ ಹಾಗೂ ಸಯೀದ್ ಅನ್ಮರ್ (48) ಪ್ರತಿರೋಧ ತೋರಿದರಾದರೂ ಪಾಕ್ 49 ಓವರ್ಗಳಲ್ಲಿ 9 ವಿಕೆಟ್ಗೆ 248 ರನ್ ಬಾರಿಸಿ ಸೋಲೊಪ್ಪಿತ್ತು. ಇದು ಚಿನ್ನಸ್ವಾಮಿ ಮೈದಾನದಲ್ಲಿ ಮೊದಲ ಹಗಲು ರಾತ್ರಿ ಪಂದ್ಯವಾಗಿತ್ತು. ಜಾವೆದ್ ಮಿಯಂದಾದ್ರ ಕೊನೇ ಏಕದಿನ ಪಂದ್ಯ ಎನ್ನುವುದು ವಿಶೇಷ. ಎಲ್ಲಕ್ಕಿಂತ ಮುಖ್ಯವಾಗಿ ಅಮೀರ್ ಸೋಹೆಲ್ ಕೆಣಕ್ಕಿದ್ದಕ್ಕಾಗಿ ಮರು ಎಸೆತದಲ್ಲೇ ಅವರನ್ನು ಪೆವಿಲಿಯನ್ಗಟ್ಟಿದ ವೆಂಕಟೇಶ್ ಪ್ರಸಾದ್ರ ಅಮೋಘ "ಸೆಂಡ್ ಆಫ್' ಪ್ರಕರಣವನ್ನು ಇನ್ನೂ ಯಾರೂ ಮರೆತಿಲ್ಲ. ಭಾರತ 39 ರನ್ನಿಂದ ಪಂದ್ಯ ಜಯಿಸಿತ್ತು. ಈ ಪಂದ್ಯ ಗೆದ್ದ ಬಳಿಕ ಟೀಮ್ ಹೋಟೆಲ್ನಲ್ಲಿ ಆಟಗಾರರನ್ನು ರಾಜರಂತೆ ಸತ್ಕರಿಸಲಾಯಿತು ಎಂದು ಸಚಿನ್ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.
ಭಾರತ 8 ವಿಕೆಟ್ಗೆ 287 (ಸಿಧು 93, ಜಡೇಜಾ 45, ಅಜರುದ್ದೀನ್ 27, ವಕಾರ್ ಯೂನಿಸ್ 67ಕ್ಕೆ 2, ಮುಸ್ತಾಕ್ ಅಹ್ಮದ್ 56ಕ್ಕೆ 2). ಪಾಕಿಸ್ತಾನ: 49 ಓವರ್ಗಳಲ್ಲಿ 9 ವಿಕೆಟ್ಗೆ 248 (ಅಮೀರ್ ಸೋಹೆಲ್ 55, ಅನ್ವರ್ 48, ವೆಂಕಟೇಶ್ ಪ್ರಸಾದ್ 45ಕ್ಕೆ 3, ಅನಿಲ್ ಕುಂಬ್ಳೆ 48ಕ್ಕೆ 3). ಪಂದ್ಯಶ್ರೇಷ್ಠ: ನವಜೋತ್ ಸಿಂಗ್ ಸಿಧು
1999: ವೆಂಕಿ ದಾಳಿಗೆ ಪಾಕ್ ಮಂಕು
1999ರ ವಿಶ್ವಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೂಪರ್ ಸಿಕ್ಸ್ನಲ್ಲಿ ಮುಖಾಮುಖಿಯಾಗಿದ್ದವು. ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಜೂನ್ 8ರಂದು ಪಂದ್ಯ ನಡೆದಿತ್ತು. ಒಂದೆಡೆ ಭಾರತ&ಪಾಕ್ ಇಂಗ್ಲೆಂಡ್ನಲ್ಲಿ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದರೆ, ಇತ್ತ, ಪಾಕಿಸ್ತಾನ ಕಾಶ್ಮೀರದಲ್ಲಿ ಭಾರತದ ಮೇಲೆ ಕಾಲುಕೆರೆದು ಯುದ್ಧಕ್ಕೆ ಇಳಿದಿತ್ತು. ಹಾಗಾಗಿ ಕ್ರಿಕೆಟ್ ಮೈದಾನದಲ್ಲೂ ಬಿಗಿ ಭದ್ರತೆ ಒದಗಿಸಲಾಗಿತ್ತು. ಹಾಗಿದ್ದರೂ ಮೈದಾನದಲ್ಲಿ ಗಲಾಟೆ ಮಾಡಿದ್ದಕ್ಕಾಗಿ ಮೂವರ ಬಂಧನ ಹಾಗೂ 9 ಜನರನ್ನು ಮೈದಾನದಿಂದ ಹೊರಕಳಿಸಲಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 6 ವಿಕೆಟ್ಗೆ 227 ರನ್ ಪೇರಿಸಿತ್ತು. ಆರಂಭಿಕ ಸಚಿನ್ 45 ರನ್ ಬಾರಿಸಿದರೆ, ರಾಹುಲ್ ದ್ರಾವಿಡ್ (61) ಹಾಗೂ ನಾಯಕ ಅಜರುದ್ದೀನ್ (59) ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದ್ದರು. ಮೊತ್ತ ಬೆನ್ನಟ್ಟುವಾಗ ಸಯೀದ್ ಅನ್ವರ್ (36) ಅಬ್ಬರಿಸಿದರಾದರೂ, ವೆಂಕಟೇಶ್ ಪ್ರಸಾದ್ (27ಕ್ಕೆ 5) ಮಾರಕ ದಾಳಿ ಮುಂದೆ ವಿಶ್ವಕಪ್ನಲ್ಲಿ ಸತತ ಮೂರನೇ ಬಾರಿಗೆ ಪಾಕಿಸ್ತಾನ ತಂಡ ಭಾರತಕ್ಕೆ ಶರಣಾಯಿತು. 45.3 ಓವರ್ವರೆಗೂ ಇನಿಂಗ್ಸ್ ಬೆಳೆಸಿದ ಪಾಕಿಸ್ತಾನ 180 ರನ್ ಬಾರಿಸಿ 47 ರನ್ನಿಂದ ಸೋಲು ಕಂಡಿತು.
ಭಾರತ 6 ವಿಕೆಟ್ಗೆ 227 (ದ್ರಾವಿಡ್ 61, ಅಜರುದ್ದೀನ್ 59, ಸಚಿನ್ 45, ವಾಸಿಮ್ ಅಕ್ರಂ 27ಕ್ಕೆ 2, ಅಜರ್ ಮಹಮೂದ್ 35ಕ್ಕೆ 2), ಪಾಕಿಸ್ತಾನ: 45.3 ಓವರ್ಗಳಲ್ಲಿ 180 (ಇಂಜುಮಾಮ್ ಉಲ್ ಹಕ್ 41, ಸಯೀದ್ ಅನ್ವರ್ 36, ವೆಂಕಟೇಶ್ ಪ್ರಸಾದ್ 27ಕ್ಕೆ 5, ಜಾವಗಲ್ ಶೀನಾಥ್ 37ಕ್ಕೆ 3). ಪಂದ್ಯಶ್ರೇಷ್ಠ: ವೆಂಕಟೇಶ್ ಪ್ರಸಾದ್.
2003: ಸೆಂಚುರಿಯನ್ನಲ್ಲಿ ಸಿಡಿದ ಸಚಿನ್
ಸಂಪೂರ್ಣ ಹೊಸ ತಂಡವಾಗಿ 2003ರ ವಿಶ್ವಕಪ್ನಲ್ಲಿ ಪಾಕಿಸ್ತಾನವನ್ನು ಎದುರಿಸಿದ್ದ ಭಾರತ 6 ವಿಕೆಟ್ ಗೆಲುವು ಸಾಧಿಸಿತ್ತು. ಸೆಂಚುರಿಯನ್ನ ಸೂಪರ್ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ಮಾರ್ಚ್ 1ರಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಸಯೀದ್ ಅನ್ವರ್ (101) ಶತಕದ ನೆರವಿನಿಂದ 7 ವಿಕೆಟ್ಗೆ 273 ರನ್ ಪೇರಿಸಿತು. ಅನ್ವರ್ ಹೊರತಾಗಿ ಉಳಿದ ಯಾವ ಪಾಕಿಸ್ತಾನ ಬ್ಯಾಟ್ಸ್ಮನ್ ಕೂಡ ಈ ಪಂದ್ಯದಲ್ಲಿ 30ಕ್ಕಿಂತ ಹೆಚ್ಚಿನ ಮೊತ್ತ ಪೇರಿಸಲಿಲ್ಲ. ಮೊತ್ತ ಬೆನ್ನಟ್ಟಿದ ಭಾರತಕ್ಕೆ ಸಚಿನ್ (98ರನ್, 75ಎಸೆತ, 12ಬೌಂಡರಿ, 1ಸಿಕ್ಸರ್) ಭರ್ಜರಿ ಆರಂಭ ನೀಡಿದ್ದರು. ಕೇವಲ 2 ರನ್ನಿಂದ ಸಚಿನ್ ಶತಕವಂಚಿತರಾದರೂ ಗೆಲುವು ಎಲ್ಲ ಬೇಸರ ಮರೆಸಿತು. ಪ್ರಚಂಡ ವೇಗಿ ಶೋಯಿಬ್ ಅಖ್ತರ್ ಎಸೆತದಲ್ಲಿ ಸಚಿನ್ ಬಾರಿಸಿದಂತೆ "ಅಪ್ಪರ್ ಕಟ್' ಸಿಕ್ಸರ್ ಬಾರಿಸಿದ ವೀರೇಂದ್ರ ಸೆಹ್ವಾಗ್ ಕೂಡ ಪ್ರಖ್ಯಾತರಾದರು. ನಾಯಕ ಗಂಗೂಲಿ ಮೊದಲ ಎಸೆತದಲ್ಲೇ ಔಟಾದರೆ, ಯುವರಾಜ್ (50*) ಅರ್ಧಶತಕ ಹಾಗೂ ದ್ರಾವಿಡ್ (44*) ಆಟದಿಂದ ಭಾರತ 45.4 ಓವರ್ಗಳಲ್ಲಿ 4 ವಿಕೆಟ್ಗೆ 276 ರನ್ಗಳಿಸಿ ಗೆಲುವು ಸಾಧಿಸಿತು.
ಪಾಕಿಸ್ತಾನ: 7 ವಿಕೆಟ್ಗೆ 273 (ಅನ್ವರ್ 101, ಯೂನಿಸ್ ಖಾನ್ 32, ರಶೀದ್ ಲತೀಫ್ 29, ಜಹೀರ್ 46ಕ್ಕೆ 2, ನೆಹ್ರಾ 74ಕ್ಕೆ 2). ಭಾರತ: 45.4 ಓವರ್ಗಳಲ್ಲಿ 4 ವಿಕೆಟ್ಗೆ 276 (ಸಚಿನ್ 98, ಯುವರಾಜ್ 50*, ದ್ರಾವಿಡ್ 44*, ವಕಾರ್ ಯೂನಿಸ್ 71ಕ್ಕೆ 2) ಪಂದ್ಯಶ್ರೇಷ್ಠ: ಸಚಿನ್ ತೆಂಡುಲ್ಕರ್
2011: ಮೊಹಾಲಿಯಲ್ಲಿ ಸಚಿನ್ ಮತ್ತೆ ಸ್ಟಾರ್
ಸೆಮಿಫೈನಲ್ನಲ್ಲಿ ಏರ್ಪಟ್ಟ ಭಾರತ-ಪಾಕ್ ಮುಖಾಮುಖಿಗೆ ಉಭಯ ದೇಶಗಳ ಪ್ರಧಾನಿಗಳು ಖುದ್ದು ಹಾಜರಿದ್ದು ಪಂದ್ಯ ವೀಸಿದರು. ಧೋನಿ ನಾಯಕತ್ವದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಸಚಿನ್ಗೆ (85ರನ್, 115 ಎಸೆತ, 11 ಬೌಂಡರಿ) ಪಾಕಿಸ್ತಾನ ಫೀಲ್ಡರ್ಗಳು ನೀಡಿದ ಮೂರು ಜೀವದಾನದಿಂದಾಗಿ 9 ವಿಕೆಟ್ಗೆ 260 ರನ್ ಪೇರಿಸಿತು. ಸೆಹ್ವಾಗ್ (38) ಹಾಗೂ ಸುರೇಶ್ ರೈನಾ (36*) ಉಪಯುಕ್ತ ರನ್ಗಳಿಸಿದರು. ವಹಾಬ್ ರಿಯಾಜ್ 46ರನ್ಗೆ 5 ವಿಕೆಟ್ ಉರುಳಿಸಿದರು. ಶಾಹಿದ್ ಅಫ್ರಿದಿ ನೇತೃತ್ವದ ಪಾಕಿಸ್ತಾನ ತಂಡಕ್ಕೆ ಆರಂಭದಿಂದಲೇ ಕಡಿವಾಣ ಹಾಕಿದ ಭಾರತ, 49.5 ಓವರ್ಗಳಲ್ಲಿ 231 ರನ್ಗೆ ನಿಯಂತ್ರಿಸಿ 29 ರನ್ ಗೆಲುವು ಸಾಧಿಸಿತು. ಮಿಸ್ಬಾ ಉಲ್ ಹಕ್ (56) ಅರ್ಧಶತಕ ಬಾರಿಸಿದರು. ಭಾರತದ ಪರ ಬೌಲಿಂಗ್ ನಡೆಸಿದ ನೆಹ್ರಾ, ಜಹೀರ್, ಹರ್ಭಜನ್, ಮುನಾಫ್ ಹಾಗೂ ಯುವರಾಜ್ ತಲಾ 2 ವಿಕೆಟ್ ಉರುಳಿಸಿದರು.
ಭಾರತ: 9 ವಿಕೆಟ್ಗೆ 260 (ಸಚಿನ್ 85, ಸೆಹ್ವಾಗ್ 38, ರೈನಾ 36*, ವಹಾಬ್ 46ಕ್ಕೆ 5, ಅಜ್ಮಲ್ 44ಕ್ಕೆ 2), ಪಾಕಿಸ್ತಾನ: 49.5 ಓವರ್ಗಳಲ್ಲಿ 231 (ಮಿಸ್ಬಾ 56, ಅಫ್ರಿದಿ 19, ಹಫೀಜ್ 43, ನೆಹ್ರಾ 33ಕ್ಕೆ 2, ಮುನಾಫ್ 40ಕ್ಕೆ2), ಪಂದ್ಯಶ್ರೇಷ್ಠ: ಸಚಿನ್ ತೆಂಡುಲ್ಕರ್
2015: ಗೆಲುವು ತಂದ ಕೊಹ್ಲಿ ಶತಕ
ಭಾರತಕ್ಕೆ ಟೂರ್ನಿಯ ಮೊದಲ ಪಂದ್ಯದಲ್ಲೇ ಪಾಕಿಸ್ತಾನದ ಸವಾಲು ಎದುರಾಯಿತು. ಅಡಿಲೇಡ್ನಲ್ಲಿ ನಡೆದ ಪಂದ್ಯದಲ್ಲಿ 76 ರನ್ಗಳಿಂದ ಗೆದ್ದ ಭಾರತ ಶುಭಾರಂಭದ ಮೂಲಕ ಭರ್ಜರಿ ಲಯ ಕಂಡುಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಭಾರತಕ್ಕೆ ಶಿಖರ್ ಧವನ್ (73) ಉತ್ತಮ ಆರಂಭ ಒದಗಿಸಿಕೊಟ್ಟರು. ವಿಶ್ವಕಪ್ನಲ್ಲಿ ಮೊದಲ ಬಾರಿ ಸಚಿನ್ ತೆಂಡುಲ್ಕರ್ ಇಲ್ಲದೆ ಪಾಕಿಸ್ತಾನವನ್ನು ಎದುರಿಸಿದ ಭಾರತಕ್ಕೆ ಅವರ ಬ್ಯಾಟಿಂಗ್ ಉತ್ತರಾಧಿಕಾರಿ ವಿರಾಟ್ ಕೊಹ್ಲಿ (107) ಶತಕದ ಬಲ ತುಂಬಿದರು. 2ನೇ ವಿಕೆಟ್ಗೆ ಧವನ್ ಜತೆ 129 ರನ್ ಮತ್ತು 3ನೇ ವಿಕೆಟ್ಗೆ ಸುರೇಶ್ ರೈನಾ (74) ಜತೆ 110 ರನ್ ಸೇರಿಸಿ ಕೊಹ್ಲಿ ಭಾರತಕ್ಕೆ ಭರ್ತಿ 300 ರನ್ ಕಲೆಹಾಕಲು ನೆರವಾದರು. ಪ್ರತಿಯಾಗಿ ಪಾಕ್, ವೇಗಿ ಮೊಹಮದ್ ಶಮಿ (35ಕ್ಕೆ 4) ದಾಳಿಗೆ 47 ಓವರ್ಗಳಲ್ಲಿ 224 ರನ್ಗೆ ಕುಸಿಯಿತು. ಯೂನಿಸ್ ಖಾನ್ರನ್ನು (6) ಆರಂಭಿಕರನ್ನಾಗಿ ಕಣಕ್ಕಿಳಿಸಿದ ಪಾಕ್ ತಂತ್ರ ಕೈಗೂಡಲಿಲ್ಲ. ನಾಯಕ ಮಿಸ್ಬಾ ಉಲ್ ಹಕ್ (76) ಏಕಾಂಗಿ ಹೋರಾಟವೂ ಸಾಕಾಗಲಿಲ್ಲ.
ಭಾರತ: 7 ವಿಕೆಟ್ಗೆ 300 (ರೋಹಿತ್ 15, ಧವನ್ 73, ವಿರಾಟ್ ಕೊಹ್ಲಿ 107, ರೈನಾ 74, ಸೋಹೈಲ್ ಖಾನ್ 55ಕ್ಕೆ 5), ಪಾಕಿಸ್ತಾನ: 47 ಓವರ್ಗಳಲ್ಲಿ 224 (ಶೆಹಜಾದ್ 47, ಮಿಸ್ಬಾ 76, ಅಫ್ರಿದಿ 22, ಶಮಿ 35ಕ್ಕೆ 4, ಮೋಹಿತ್ ಶರ್ಮ 35ಕ್ಕೆ 2). ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ
2019: ರೋಹಿತ್ ಶತಕಕ್ಕೆ ಬೆಚ್ಚಿದ ಪಾಕಿಸ್ತಾನ
ಮ್ಯಾಂಚೆಸ್ಟರ್ನಲ್ಲಿ ನಡೆದ ಪಂದ್ಯ ಉಭಯ ತಂಡಗಳಿಗೂ ವಿಶ್ವಕಪ್ನ ಮೊದಲ ಪಂದ್ಯವಾಗಿತ್ತು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ತಂಡಕ್ಕೆ ರೋಹಿತ್ ಶರ್ಮ (140 ರನ್, 113 ಎಸೆತ, 14 ಬೌಂಡರಿ, 3 ಸಿಕ್ಸರ್) ಶತಕದ ಸಾಹಸದಿಂದ 5 ವಿಕೆಟ್ಗೆ 336 ರನ್ಗಳ ಬೃಹತ್ ಮೊತ್ತ ಪೇರಿಸಿತು. ಕನ್ನಡಿಗ ಕೆಎಲ್ ರಾಹುಲ್ (57) ಮತ್ತು ರೋಹಿತ್ ಮೊದಲ ವಿಕೆಟ್ಗೆ 136 ರನ್ ಪೇರಿಸಿ ಭದ್ರ ಬುನಾದಿ ಹಾಕಿಕೊಟ್ಟರೆ, ಬಳಿಕ ನಾಯಕ ವಿರಾಟ್ ಕೊಹ್ಲಿ (77) ಉಪಯುಕ್ತ ಆಟವಾಡಿ ಮೊತ್ತ ಏರಿಸಿದರು. 5ನೇ ಕ್ರಮಾಂಕಕ್ಕೆ ಬಡ್ತಿ ಪಡೆದಿದ್ದ ಧೋನಿ ಒಂದೇ ರನ್ ಗಳಿಸಿ ಔಟಾಗಿದ್ದರು. ಪ್ರತಿಯಾಗಿ ನಿಧಾನಗತಿ ಆರಂಭ ಪಡೆದ ಪಾಕಿಸ್ತಾನ, ಖರ್ ಜಮಾನ್ (62), ಬಾಬರ್ ಅಜಮ್ (48) 2ನೇ ವಿಕೆಟ್ ನಡೆಸಿದ ಶತಕದ ಜತೆಯಾಟದಿಂದ ಪ್ರತಿರೋಧ ತೋರಿತು. ಆದರೆ ಪಾಕ್ 35 ಓವರ್ಗಳಲ್ಲಿ 6 ವಿಕೆಟ್ಗೆ 166 ರನ್ ಗಳಿಸಿ ಸಂಕಷ್ಟದಲ್ಲಿದ್ದಾಗ ಮಳೆಯಿಂದಾಗಿ ಆಟ ಸ್ಥಗಿತಗೊಂಡಿತು. ಬಳಿಕ ಆಟ ಮುಂದುವರಿದಾಗ ಪಾಕ್ಗೆ ಡಕ್ವರ್ತ್-ಲೂಯಿಸ್ ನಿಯಮದನ್ವಯ 40 ಓವರ್ಗಳಲ್ಲಿ 302 ರನ್ ಗಳಿಸುವ ಸವಾಲು ಎದುರಾಯಿತು. ಅಂದರೆ ಪಾಕ್ಗೆ 30 ಎಸೆತಗಳಲ್ಲಿ 136 ರನ್ ಗಳಿಸುವ ಅಸಾಧ್ಯ ಸವಾಲು ಎದುರಾಗಿತ್ತು. ಅಂತಿಮವಾಗಿ 6 ವಿಕೆಟ್ಗೆ 212 ರನ್ ಗಳಿಸಿದ ಪಾಕ್ 89 ರನ್ಗಳಿಂದ ಶರಣಾಯಿತು.
ಭಾರತ: 50 ಓವರ್ಗಳಲ್ಲಿ 5 ವಿಕೆಟ್ಗೆ 336 (ರಾಹುಲ್ 57, ರೋಹಿತ್ 140, ಕೊಹ್ಲಿ 77, ಹಾರ್ದಿಕ್ 26, ಧೋನಿ 1, ಆಮಿರ್ 47ಕ್ಕೆ 3), ಪಾಕಿಸ್ತಾನ: 40 ಓವರ್ಗಳಲ್ಲಿ 6 ವಿಕೆಟ್ಗೆ 212 (ಖರ್ 62, ಬಾಬರ್ 48, ಹಫೀಜ್ 9, ಇಮಾದ್ 46, ಶಂಕರ್ 22ಕ್ಕೆ 2, ಹಾದಿಕ್ 44ಕ್ಕೆ 2, ಕುಲದೀಪ್ 32ಕ್ಕೆ 2). ಪಂದ್ಯಶ್ರೇಷ್ಠ: ರೋಹಿತ್ ಶರ್ಮ