ಕ್ರೀಡೆ

ಏಷ್ಯಾಕಪ್​ನಲ್ಲಿ ಇಂದು ಬಾಂಗ್ಲಾ ಸವಾಲು; ಗೆಲುವಿನ ಓಟ ಕಾಯ್ದುಕೊಳ್ಳುವ ಹಂಬಲದಲ್ಲಿ ಭಾರತ

ಕೊಲಂಬೊ: ಜಂಟಿ ಆತಿಥೇಯ ದೇಶಗಳಾದ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಭರ್ಜರಿ ಗೆಲುವಿನೊಂದಿಗೆ ಈಗಾಗಲೆ ಫೈನಲ್​ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ಭಾರತ ತಂಡ ಏಷ್ಯಾಕಪ್​ ಏಕದಿನ ಟೂರ್ನಿಯ ಸೂಪರ್​-4 ಹಂತದಲ್ಲಿ ಬಾಂಗ್ಲಾದೇಶ ವಿರುದ್ಧವೂ ಗೆಲುವಿನ ಲಯ ಕಾಯ್ದುಕೊಳ್ಳುವ ಹಂಬಲದಲ್ಲಿದೆ. ಬಾಂಗ್ಲಾದೇಶ ಈಗಾಗಲೆ ಫೈನಲ್​ ರೇಸ್​ನಿಂದ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಇದೊಂದು ಔಪಚಾರಿಕ ಪಂದ್ಯವೆನಿಸಿದ್ದರೂ, ಫೈನಲ್​ಗೆ ಮುನ್ನ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಲು ರೋಹಿತ್​ ಶರ್ಮ ಪಡೆ ಮತ್ತೊಮ್ಮೆ ಸರ್ವಾಂಗೀಣ ನಿರ್ವಹಣೆ ತೋರುವತ್ತ ಗಮನಹರಿಸಲಿದೆ.

ವಿಶ್ವಕಪ್​ಗೆ ಮುನ್ನ ಭಾರತ ತಂಡದ ಮೇಲೆ ನಿರೀಕ್ಷೆಗಳು ಹೆಚ್ಚಾಗುವಂಥ ಗೆಲುವುಗಳು ಕಳೆದೆರಡು ಪಂದ್ಯಗಳಲ್ಲಿ ಬಂದಿವೆ. ಅಗ್ರ ಕ್ರಮಾಂಕದ ಬ್ಯಾಟರ್​ಗಳಾದ ನಾಯಕ ರೋಹಿತ್​ ಶರ್ಮ, ಶುಭಮಾನ್​ ಗಿಲ್​, ವಿರಾಟ್​ ಕೊಹ್ಲಿ, ಇಶಾನ್​ ಕಿಶನ್​, ಕೆಎಲ್​ ರಾಹುಲ್​ ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿದ್ದಾರೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಕೆಎಲ್​ ರಾಹುಲ್​ ಮತ್ತು ಜಸ್​ಪ್ರೀತ್​ ಬುಮ್ರಾ ಫಿಟ್ನೆಸ್​ ಸಾಬೀತು ಪಡಿಸಿರುವುದು ಮಾತ್ರವಲ್ಲದೆ, ತಂಡದ ಗೆಲುವಿನಲ್ಲೂ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಶ್ರೇಯಸ್​ ಅಯ್ಯರ್​ಗೆ ಬೆನ್ನು ನೋವು ಮರುಕಳಿಸಿದ್ದು ಮಾತ್ರ ಸಣ್ಣ ಹಿನ್ನಡೆ ಎನಿಸಿದ್ದರೂ, ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಅವರು ಮತ್ತೆ ಕಣಕ್ಕಿಳಿಯುವ ನಿರೀೆ ಇದೆ. ಶ್ರೇಯಸ್​ ಕೂಡ ಲಯ ಕಂಡುಕೊಂಡರೆ ಭಾರತ ಮತ್ತಷ್ಟು ಸದೃಢ ತಂಡವಾಗಲಿದೆ.

ಅತ್ತ ಬಾಂಗ್ಲಾದ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಟೂರ್ನಿಯಲ್ಲಿ ಇದುವರೆಗೆ ಒಂದೇ ಗೆಲುವು ಕಂಡಿರುವ ಶಕೀಬ್​ ಅಲ್​ ಹಸನ್​ ಬಳಗಕ್ಕೆ ಹಲವು ಆಟಗಾರರ ಗಾಯದ ಸಮಸ್ಯೆ ಹಿನ್ನಡೆ ತಂದಿದೆ. ತಮೀಮ್​ ಇಕ್ಬಾಲ್​, ಇಬಾದತ್​ ಹೊಸೈನ್​ ಟೂರ್ನಿಗೆ ಮೊದಲೇ ಅಲಭ್ಯರಾಗಿದ್ದರೆ, ಲಿಟನ್​ ದಾಸ್​ ಆರಂಭಿಕ ಕೆಲ ಪಂದ್ಯ ತಪ್ಪಿಸಿಕೊಂಡಿದ್ದರು. ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಆಟವಾಡಿದ ಬಳಿಕ ನಜ್ಮಲ್​ ಹೊಸೈನ್​ ಶಾಂಟೊ ಗಾಯಗೊಂಡರು. ಕೊನೇ ಹಂತದಲ್ಲಿ ಮುಶ್ಫಿಕರ್​ ರಹೀಂ ಅಲಭ್ಯರಾಗಿದ್ದಾರೆ. ಇದು ಬಾಂಗ್ಲಾ ತಂಡದ ವಿಶ್ವಕಪ್​ ಅಭ್ಯಾಸಕ್ಕೂ ಹಿನ್ನಡೆ ತಂದಿದ್ದು, ಈಗ ಭಾರತ ವಿರುದ್ಧ ನಿಕಟ ಪೈಪೋಟಿ ತೋರುವತ್ತ ಗಮನಹರಿಸಿದೆ.

ಶ್ರೇಯಸ್​ ಅಯ್ಯರ್​ ಬ್ಯಾಟಿಂಗ್​ ಅಭ್ಯಾಸ

ಅಭ್ಯಾಸದ ವೇಳೆ ಬೆನ್ನುನೋವು ಮರುಕಳಿಸಿದ ಕಾರಣ ಕಳೆದೆರಡು ಪಂದ್ಯ ತಪ್ಪಿಸಿಕೊಂಡಿದ್ದ ಶ್ರೇಯಸ್​ ಅಯ್ಯರ್​, ಗುರುವಾರ ನೆಟ್ಸ್​ನಲ್ಲಿ ಸರಾಗವಾಗಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದಾರೆ. ಹೀಗಾಗಿ ಅವರು ಪೂರ್ಣ ಫಿಟ್ನೆಸ್​ ಕಂಡುಕೊಂಡಿರುವ ನಿರೀೆ ಇದೆ. ಆಗ ಅವರು 11ರ ಬಳಗಕ್ಕೆ ಮರಳುವ ಹಾದಿಯೂ ಸುಗಮವಾಗಲಿದೆ. ಇಲ್ಲದಿದ್ದರೆ, ಈ ಔಪಚಾರಿಕ ಪಂದ್ಯದಲ್ಲಿ ಇಶಾನ್​ ಕಿಶನ್​ ಬದಲಿಗೆ ಸೂರ್ಯಕುಮಾರ್​ ಮಧ್ಯಮ ಕ್ರಮಾಂಕದ ಬ್ಯಾಟರ್​ ಆಗಿ ಸ್ಥಾನ ಪಡೆದರೆ ಅಚ್ಚರಿ ಇಲ್ಲ. ವಿಶ್ವಕಪ್​ಗೆ ಮುನ್ನ ಏಕದಿನದಲ್ಲಿ ಸಾಮರ್ಥ್ಯ ಸಾಬೀತುಪಡಿಸಲು ಸೂರ್ಯಕುಮಾರ್​ಗೆ ಇದು ಇನ್ನೊಂದು ಅವಕಾಶವೆನಿಸಲಿದೆ.

ಯಾರಿಗೆಲ್ಲ ವಿಶ್ರಾಂತಿ?

ಸತತ 3 ದಿನ ಆಡಿ ಫೈನಲ್​ ಅರ್ಹತೆ ಸಂಪಾದಿಸಿದ ಭಾರತ ತಂಡ, ಪ್ರಶಸ್ತಿ ಸುತ್ತಿನ ಹೋರಾಟಕ್ಕೆ ಮುನ್ನ ಕಾರ್ಯದೊತ್ತಡ ನಿರ್ವಹಣೆಗಾಗಿ ಕೆಲ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಬಹುದು. ಆದರೆ ಯಾರೆಲ್ಲ ವಿಶ್ರಾಂತಿ ಪಡೆಯಲಿದ್ದಾರೆ ಎಂಬುದು ಸ್ಪಷ್ಟವಿಲ್ಲ. ಅದೇ ರೀತಿ ದೊಡ್ಡ ಮಟ್ಟದ ಬದಲಾವಣೆಗಳೂ ಅನುಮಾನವೆನಿಸಿದೆ. ಬುಮ್ರಾಗೆ ವಿಶ್ರಾಂತಿ ನೀಡಬಹುದಾದರೂ, ಅವರು ಈಗಾಗಲೆ ನೇಪಾಳ ವಿರುದ್ಧ ಪಂದ್ಯದಿಂದ ಹೊರಗುಳಿದಿದ್ದರು. ಅಲ್ಲದೆ ಬುಮ್ರಾಗೆ (12 ಓವರ್​) ಹೋಲಿಸಿದರೆ ಟೂರ್ನಿಯಲ್ಲಿ ಮೊಹಮದ್​ ಸಿರಾಜ್​ (19.2) ಹೆಚ್ಚಿನ ಓವರ್​ ಎಸೆದಿದ್ದಾರೆ. ಹೀಗಾಗಿ ಬುಮ್ರಾಗೆ ಬದಲು ಸಿರಾಜ್​ಗೆ ವಿಶ್ರಾಂತಿ ನೀಡಿದರೂ ಅಚ್ಚರಿ ಇಲ್ಲ.

ಮಳೆ ಭೀತಿ ತಪ್ಪಿದ್ದಲ್ಲ...

ಹಿಂದಿನ ಪಂದ್ಯಗಳಂತೆ ಕೊಲಂಬೊದ ಆರ್​. ಪ್ರೇಮದಾಸ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಈ ಪಂದ್ಯಕ್ಕೂ ಮಳೆ ಭೀತಿ ತಪ್ಪಿದ್ದಲ್ಲ. ಆದರೆ ಇದು ಔಪಚಾರಿಕ ಪಂದ್ಯ ಆಗಿರುವುದರಿಂದ, ಉಭಯ ತಂಡಗಳು ಮಳೆ ಭೀತಿಯ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.

ಟೀಮ್​ ನ್ಯೂಸ್​:

ಭಾರತ: ಶ್ರೇಯಸ್​ ಅಯ್ಯರ್​ ಗುರುವಾರ ನೆಟ್ಸ್​ನಲ್ಲಿ ಅಭ್ಯಾಸ ನಡೆಸಿದ್ದಾರೆ. ಹೀಗಾಗಿ ಅವರು ಶೇ. 100 ಫಿಟ್​ ಆಗಿ ಮರಳುವ ನಿರೀೆ ಇದೆ. ಆಗ ಇಶಾನ್​ ಕಿಶನ್​ ಸ್ಥಾನ ಬಿಟ್ಟುಕೊಡಬಹುದು. ಇನ್ನು ಈ ಔಪಚಾರಿಕ ಪಂದ್ಯದಲ್ಲಿ ಜಸ್​ಪ್ರೀತ್​ ಬುಮ್ರಾ ಅಥವಾ ಮೊಹಮದ್​ ಸಿರಾಜ್​ ವಿಶ್ರಾಂತಿ ಪಡೆಯುವ ಸಾಧ್ಯತೆ ಇದ್ದು, ಮೊಹಮದ್​ ಶಮಿ ಬದಲಿ ವೇಗಿಯಾಗಿ ಆಡಬಹುದು. ಇನ್ನು ಪಿಚ್​ ಪರಿಶೀಲಿಸಿದ ಬಳಿಕ, ಶಾರ್ದೂಲ್​-ಅಕ್ಷರ್​ ಅವರಲ್ಲಿ ಒಬ್ಬರಿಗೆ ಸ್ಥಾನ ಸಿಗಲಿದೆ.

ಬಾಂಗ್ಲಾದೇಶ: ಪತ್ನಿ 2ನೇ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿ ಮುಶ್ಫಿಕರ್​ ರಹೀಂ ತವರಿಗೆ ಮರಳಿದ್ದು, ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಸ್ಥಾನವನ್ನು ಅಫಿಫ್​ ಹೊಸೈನ್​ ತುಂಬಬಹುದು. ಆರಂಭಿಕನಾಗಿ ಸತತ ವೈಫಲ್ಯ ಕಾಣುತ್ತಿರುವ ಮೊಹಮದ್​ ನೈಮ್​ ಸ್ಥಾನಕ್ಕೆ ತಂಜಿದ್​ ಹಸನ್​ ಬರಬಹುದು. ಮುಶ್ಫಿಕರ್​ ಬದಲಿಗೆ ಲಿಟನ್​ ದಾಸ್​ ವಿಕೆಟ್​ ಕೀಪಿಂಗ್​ ಹೊಣೆ ನಿರ್ವಹಿಸಲಿದ್ದಾರೆ.

*ಆರಂಭ: ಮಧ್ಯಾಹ್ನ 3.00

*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

200: ರವೀಂದ್ರ ಜಡೇಜಾ ಇನ್ನೊಂದು ವಿಕೆಟ್​ ಪಡೆದರೆ, ಏಕದಿನ ಕ್ರಿಕೆಟ್​ನಲ್ಲಿ 200 ವಿಕೆಟ್​ ಸಂಪಾದಿಸಿ 7ನೇ ಭಾರತೀಯ ಬೌಲರ್​ ಎನಿಸಲಿದ್ದಾರೆ. ಜತೆಗೆ ಕಪಿಲ್​ ದೇವ್​ ಬಳಿಕ 2 ಸಾವಿರ ರನ್​, 200 ವಿಕೆಟ್​ ಗಳಿಸಿದ ಮೊದಲ ಭಾರತೀಯ ಎನಿಸಲಿದ್ದಾರೆ.

04: ಭಾರತ ತಂಡ 2015ರಿಂದ ಬಾಂಗ್ಲಾ ಎದುರು ಆಡಿದ 2 ಏಕದಿನ ಸರಣಿಯಲ್ಲೂ ಸೋತಿದೆ. ಆದರೆ ಇದೇ ಅವಧಿಯಲ್ಲಿ ಐಸಿಸಿ ಟೂರ್ನಿ-ಏಷ್ಯಾಕಪ್​ಗಳಲ್ಲಿ ಆಡಿರುವ 4 ಮುಖಾಮುಖಿಗಳಲ್ಲೂ ಗೆದ್ದಿದೆ.