ನವದೆಹಲಿ: ಭಾರತ ತಂಡ ಮುಂದಿನ ಜುಲೈನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲು ಮುಕ್ತ ಅವಕಾಶ ಹೊಂದಿದ್ದು, ಕೇಂದ್ರ ಸರ್ಕಾರ ಅನುಮತಿ ನೀಡಿದರೆ ನಿಗದಿತ ಓವರ್ಗಳ ಸರಣಿ ಆಡಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಜಾಂಚಿ ಅರುಣ್ ಧುಮಾಲ್ ತಿಳಿಸಿದ್ದಾರೆ. ಸರಣಿಯ ಭವಿಷ್ಯ ಕೇಂದ್ರ ಸರ್ಕಾರದ ಅಂಗಳದಲ್ಲಿದ್ದು, ಲಾಕ್ಡೌನ್ ಹಾಗೂ ಪ್ರಯಾಣದ ನಿರ್ಬಂಧವನ್ನು ಸಿಡಿಲಿಸಿದರೆ ಜುಲೈ ಅಂತ್ಯದಲ್ಲಿ ಭಾರತ ಲಂಕಾ ಪ್ರವಾಸ ಕೈಗೊಳ್ಳಲಿದೆ ಎಂದಿದ್ದಾರೆ.
ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳು: ಜುಲೈ ಅಂತ್ಯದಲ್ಲಿ ಆರಂಭವಾಗಲಿರುವ ಶ್ರೀಲಂಕಾ ಪ್ರವಾಸದಲ್ಲಿ ಭಾರತ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಬೇಕಿದೆ. ಸರಣಿ ಆಯೋಜನೆ ಕುರಿತು ಬಿಸಿಸಿಐಗೆ ಪತ್ರ ಬರೆದಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್ಎಲ್ಸಿ) ಖಾಲಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ಆಯೋಜಿಸುವ ಆಹ್ವಾನ ನೀಡಿದೆ. ಜತೆಗೆ ಕ್ವಾರಂಟೈನ್ ನಿಯಮವನ್ನು ಪಾಲಿಸಲಾಗುವುದು ಎಂದು ತಿಳಿಸಿದೆ. ಇದರೊಂದಿಗೆ ಕಳೆದ ಎರಡು ತಿಂಗಳಿಂದ ಲಾಕ್ಡೌನ್ನಲ್ಲಿ ಸಿಲುಕಿರುವ ಟೀಮ್ ಇಂಡಿಯಾ ಆಟಗಾರರು ಲಂಕಾ ಪ್ರವಾಸದ ಮೂಲಕ ಕ್ರಿಕೆಟ್ಗೆ ವಾಪಾಸಾಗುವ ಸಾಧ್ಯತೆಗಳಿವೆ. ಬಹುತೇಕ ಆಟಗಾರರು ಮೆಟ್ರೋ ನಗರಗಳಲ್ಲಿ ಉಳಿದುಕೊಂಡಿರುವುದರಿಂದ ದಿನನಿತ್ಯ ದೈಹಿಕ ಕಸರತ್ತಿನಲ್ಲಿ ತೊಡಗಿದ್ದಾರೆ. ಒಂದು ವೇಳೆ ಸರ್ಕಾರ ಅನುಮತಿ ನೀಡಿದರೆ ಹೊರಾಂಗಣದಲ್ಲಿ ಅಭ್ಯಾಸ ಮಾಡಲು ಅನುಮತಿ ನೀಡಲಾಗುತ್ತದೆ. ಯಾವುದೇ ಟೂರ್ನಿಗಳು ಇಲ್ಲದಿರುವುದರಿಂದ ಆಟಗಾರರಿಗೆ ಅಭ್ಯಾಸದ ದೃಷ್ಟಿಯಿಂದ ಅನುಕೂಲವಾಗುತ್ತದೆ.
ಇದನ್ನೂ ಓದಿ: ಬ್ಯಾಟು ಹಿಡಿಯುತ್ತಿದ್ದ ಧವನ್ ಕೈಯಲ್ಲಿ ಕೊಳಲು
ಎಸ್ಎಲ್ಸಿ ಬಳಿಯಿಲ್ಲ ಮಾಧ್ಯಮ ಪ್ರಸಾರದ ಹಕ್ಕು!: ಶ್ರೀಲಂಕಾ ಕ್ರಿಕೆಟ್ ಮಂಡಳಿ ಇದುವರೆಗೂ ಯಾವುದೇ ಮಾಧ್ಯಮಪ್ರಸಾರ ಹಕ್ಕು ಹೊಂದಿಲ್ಲ. ಭಾರತ ಪ್ರವಾಸ ಕೈಗೊಂಡರೆ ಮಾಧ್ಯಮ ಹಕ್ಕಿನಿಂದ ಲಂಕಾ ಮಂಡಳಿ ಉತ್ತಮ ಆದಾಯದ ನಿರೀಕ್ಷೆಯಲ್ಲಿದೆ. ಪ್ರವಾಸದ ಬಗ್ಗೆ ಬಿಸಿಸಿಐ ಹೇಳುತ್ತಿದ್ದರೂ ಅದು ಕೇವಲ ಮಾತಿಗಷ್ಟೇ ಇದೆ. ಸರಣಿ ಭವಿಷ್ಯ ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ.
ಕೊಹ್ಲಿ, ರೋಹಿತ್ ಅಭ್ಯಾಸ ಅನುಮಾನ: ಸರ್ಕಾರ ಅನುಮತಿ ನೀಡಿದರೆ ಮುಂದಿನ ವಾರದಿಂದ ಹೊರಾಂಗಣ ಟೀಮ್ ಇಂಡಿಯಾ ಅಭ್ಯಾಸ ಶುರು ಮಾಡಿದರೆ, ಅಗ್ರ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಗೆ ತರಬೇತಿಗೆ ಆಗಮಿಸುವುದು ಅನುಮಾನವಾಗಿದೆ. ಮುಂಬೈನಲ್ಲಿ ಕೊಹ್ಲಿ, ರೋಹಿತ್ ಶರ್ಮ ಉಳಿದುಕೊಂಡಿದ್ದು, ಅವರು ಮನೆಯಿಂದ ಹೊರ ಬರುವುದು ಅನುಮಾನವಾಗಿದೆ ಎಂದು ಅರುಣ್ ದುಮಾಲ್ ಹೇಳಿದ್ದಾರೆ. ಮುಂಬೈ ಮಹಾ ನಗರದಲ್ಲೇ ಇದುವರೆಗೂ ಸಾವಿರಕ್ಕೂ ಅಧಿಕ ಮಂದಿ ಕರೊನಾ ವೈರಸ್ನಿಂದ ಮೃತಪಟ್ಟಿದ್ದಾರೆ.
ಕ್ವಾರಂಟೈನ್ ಕೇಂದ್ರವಾದ ವಾಂಖೆಡೆ ಸ್ಟೇಡಿಯಂ: ಕ್ವಾರಂಟೈನ್ ಕೇಂದ್ರವನ್ನಾಗಿ ಪರಿವರ್ತಿಸಲು ವಾಂಖೆಡೆ ಸ್ಟೇಡಿಯಂ ಅನ್ನು ಹಸ್ತಾಂತರಿಸುವಂತೆ ಮುಂಬೈ ಕ್ರಿಕೆಟ್ ಸಂಸ್ಥೆಗೆ (ಎಂಸಿಎ) ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಸೂಚಿಸಿದೆ. ಮುಂಬೈ ನಗರ ಮಹಾಮಾರಿ ಕೋವಿಡ್-19 ರಿಂದ ತತ್ತರಿಸಿದ್ದು, ಈ ಕುರಿತು ಎಂಸಿಎ ಅಧಿಕಾರಿಗಳಿಗೆ ಪತ್ರ ಬರೆದಿರುವ ಬಿಎಂಸಿ ತಕ್ಷಣವೇ ಸ್ಟೇಡಿಯಂಅನ್ನು ಹಸ್ತಾಂತರಿಸುವಂತೆ ಕೇಳಿಕೊಂಡಿದೆ. ಸ್ಟೇಡಿಯಂ ಬಿಟ್ಟುಕೊಡಲು ಬಿಎಂಸಿ ಪತ್ರ ಬರೆದಿದ್ದು, ಈ ಕುರಿತು ಸ್ಥಳೀಯ ಆಡಳಿತಕ್ಕೆ ಸಹಕರಿಸುವುದಾಗಿ ಎಂಸಿಎ ಕಾರ್ಯದರ್ಶಿ ಸಂಜಯ್ ನಾಯ್್ಕ ತಿಳಿಸಿದ್ದಾರೆ. ಮೈದಾನ ಹೊರತುಪಡಿಸಿ ಸ್ಟೇಡಿಯಂ ಒಳಾಂಗಣ ಪ್ರದೇಶಗಳನ್ನು ಬಿಎಂಸಿಗೆ ಬಿಟ್ಟುಕೊಡುತ್ತಿದ್ದು, ಪ್ರೆಸ್ ಬಾಕ್ಸ್, ಪ್ರೆಸಿಡೆಂಟ್ ಬಾಕ್ಸ್, ಕಾಪೋರೇಟ್ ಬಾಕ್ಸ್ಗಳನ್ನು ನೀಡಲಾಗುತ್ತಿದೆ. ಆದರೆ, ಸ್ಟೇಡಿಯಂ ಅನ್ನು ಕ್ವಾರಂಟೈನ್ ಕೇಂದ್ರವನ್ನಾಗಿ ಮಾಡಲು ಹೊರಟಿರುವ ಬಿಎಂಸಿ ಕ್ರಮಕ್ಕೆ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಮರೀನ್ ಡ್ರೖೆವ್ ತಟದಲ್ಲಿರುವ ಸ್ಟೇಡಿಯಂ ಸುತ್ತಾಮುತ್ತಾ ಹೆಚ್ಚು ವಸತಿ ಪ್ರದೇಶಗಳಿದ್ದು, ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತದೆ ಎಂದು ಆರೋಪಿಸಿದ್ದಾರೆ. ವೊರ್ಲಿಯಲ್ಲಿರುವ ಭಾರತೀಯ ರಾಷ್ಟ್ರೀಯ ಕ್ರೀಡಾ ಕ್ಲಬ್ನ (ಎನ್ಎಸ್ಸಿಐ) ಆವರಣದಲ್ಲಿರುವ ಒಳಾಂಗಣ ಸ್ಟೇಡಿಯಂ ಹಾಗೂ ಮಾಹಾಲಕ್ಷ್ಮೀ ರೇಸ್ ಕೋರ್ಸ್ ಕೇಂದ್ರಗಳನ್ನು ಆರೋಗ್ಯ ಕೇಂದ್ರಗಳನ್ನಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.