ಮುಂಬೈ: ಭಾರತ ತಂಡದ ಮುಂಬರುವ ಶ್ರೀಲಂಕಾ ಪ್ರವಾಸ ಒಂದು ದಿನದ ಮಟ್ಟಿಗೆ ಮುಂದೂಡಲ್ಪಟ್ಟಿದೆ. ವೇಳಾಪಟ್ಟಿಯಲ್ಲಿ ಸಣ್ಣ ತಿದ್ದುಪಡಿಯನ್ನು ಮಾಡಲಾಗಿದ್ದು, ಜುಲೈ 26ಕ್ಕೆ ಬದಲಾಗಿ 27ರಿಂದ ಪ್ರವಾಸ ಶುರುವಾಗಲಿದೆ.
ಪ್ರವಾಸದ ಮೊದಲ 3 ಟಿ20 ಪಂದ್ಯಗಳು ಜುಲೈ 27, 28 ಮತ್ತು 30ರಂದು ಪಲ್ಲೆಕಿಲೆಯಲ್ಲಿ ನಡೆಯಲಿವೆ. 2 ದಿನಗಳ ಹಿಂದಷ್ಟೇ ಪ್ರಕಟಗೊಂಡಿದ್ದ ವೇಳಾಪಟ್ಟಿಯಲ್ಲಿ ಈ 3 ಪಂದ್ಯಗಳು ಜುಲೈ 26, 27, 29ಕ್ಕೆ ನಿಗದಿಯಾಗಿದ್ದವು. ಏಕದಿನ ಸರಣಿ ಕೂಡ ಒಂದು ದಿನ ತಡವಾಗಿ ಶುರುವಾಗಲಿದ್ದು, ಆಗಸ್ಟ್ 1ಕ್ಕೆ ಬದಲಾಗಿ 2ರಿಂದ ಕೊಲಂಬೊದಲ್ಲಿ ನಡೆಯಲಿದೆ. ನಂತರದ 2 ಪಂದ್ಯಗಳು ಹಿಂದಿನಂತೆ ಆಗಸ್ಟ್ 4 ಮತ್ತು 7ಕ್ಕೆ ನಿಗದಿಯಾಗಿವೆ.
2021ರ ಬಳಿಕ ಭಾರತ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ದ್ವಿಪಕ್ಷೀಯ ಸರಣಿ ಆಡಲಿದೆ. ಉಭಯ ತಂಡಗಳು ಹೊಸ ಕೋಚ್ (ಗೌತಮ್ ಗಂಭೀರ್, ಸನತ್ ಜಯಸೂರ್ಯ) ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿರುವುದು ವಿಶೇಷವಾಗಿದೆ.