ಕ್ರೀಡೆ

ಏಷ್ಯಾಕಪ್​ ಟೂರ್ನಿಗೆ ಭಾರತ ತಂಡ ಪ್ರಕಟ; ಕನ್ನಡಿಗ ಕೆ.ಎಲ್​. ರಾಹುಲ್​, ಪ್ರಸಿದ್ಧ್​​ ಕೃಷ್ಣಗೆ ಸ್ಥಾನ

ನವದೆಹಲಿ: ಆಗಸ್ಟ್​ 30ರಿಂದ ಆರಂಭವಾಗಲಿರುವ ಏಷ್ಯಾಕಪ್​ ಕ್ರಿಕೆಟ್​ ಟೂರ್ನಿಗೆ 17 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಸೋಮವಾರ ಪ್ರಕಟಿಸಿದೆ. ಭಾರತ ತಂಡವನ್ನು ರೋಹಿತ್​ ಶರ್ಮಾ ಮುನ್ನಡೆಸಲಿದ್ದು, ಹಾರ್ದಿಕ್​ ಪಾಂಡ್ಯರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.

ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕೆ.ಎಲ್​. ರಾಹುಲ್​ ಹಾಗೂ ಶ್ರೇಯಸ್​ ಅಯ್ಯರ್​ ತಂಡಕ್ಕೆ ವಾಪಸ್​ ಆಗಿದ್ದಾರೆ. ವೆಸ್ಟ್​ ಇಂಡೀಸ್​​ ಹಾಗೂ ಐರ್ಲೆಂಡ್​ ವಿರುದ್ಧ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಬ್ಯಾಟ್ಸ್​ಮನ್​ ತಿಲಕ್​ ವರ್ಮಾರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಸಂಜು ಸ್ಯಾಮ್ಸನ್‌ ಮೀಸಲು ಆಟಗಾರನಾಗಿ ಸ್ಥಾನ ಪಡೆದಿದ್ದಾರೆ.

6 ತಂಡಗಳನ್ನು ತಲಾ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ, ನೇಪಾಳ ಎ ಗುಂಪಿನಲ್ಲಿದ್ದು, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಬಿ ಗುಂಪಿನಲ್ಲಿವೆ. ಗುಂಪು ಹಂತದಲ್ಲಿ ಪ್ರತಿ ತಂಡ ಇನ್ನುಳಿದ 2 ತಂಡದ ವಿರುದ್ಧ ಒಮ್ಮೆ ಸೆಣಸಲಿದೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆವ ತಂಡಗಳು ಸೂಪರ್‌-4 ಹಂತಕ್ಕೇರಲಿವೆ. ಸೂಪರ್‌-4ನಲ್ಲಿ ಪ್ರತಿ ತಂಡ ಇನ್ನುಳಿದ 3 ತಂಡದ ವಿರುದ್ಧ ಒಮ್ಮೆ ಆಡಲಿದ್ದು, ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಫೈನಲ್‌ಗೇರಲಿವೆ.

6 ತಂಡಗಳ ಟೂರ್ನಿ ಆಗಸ್ಟ್‌ 30ರಿಂದ ಸೆಪ್ಟೆಂಬರ್ 17ರ ವರೆಗೆ ನಡೆಯಲಿದ್ದು, ಪಾಕಿಸ್ತಾನದ ಮುಲ್ತಾನ್‌, ಲಾಹೋರ್‌, ಶ್ರೀಲಂಕಾದ ಕ್ಯಾಂಡಿ ಹಾಗೂ ಕೊಲಂಬೊದಲ್ಲಿ ಪಂದ್ಯಗಳನ್ನು ಆಯೋಜನೆ ಮಾಡಲಾಗಿದೆ. ಸೆಪ್ಟೆಂಬರ್ 19ರಂದು ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ಫೈನಲ್​​ ಪಂದ್ಯ ನಡೆಯಲಿದೆ.

17 ಸದಸ್ಯರ ಭಾರತ ತಂಡ

ರೋಹಿತ್ ಶರ್ಮಾ(ನಾಯಕ), ಶುಭ್‌ಮಾನ್ ಗಿಲ್‌, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ(ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್​ದೀಪ್​ ಯಾದವ್, ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದಾರೆ.