ಕ್ರೀಡೆ

ಮಾಜಿ ಕ್ರಿಕೆಟಿಗರ ಲೀಗ್​ನಲ್ಲಿ ಭಾರತಕ್ಕೆ ಸತತ ಎರಡನೇ ಗೆಲುವು

ಮುಂಬೈ: ವೇಗಿಗಳಾದ ಧವಳ್​ ಕುಲಕರ್ಣಿ (21ಕ್ಕೆ 3) ಮತ್ತು ಕನ್ನಡಿಗ ಅಭಿಮನ್ಯು ಮಿಥುನ್​ (27ಕ್ಕೆ 2) ಬಿಗಿ ಬೌಲಿಂಗ್​ ಮತ್ತು ಗುರುಕೀರತ್​ ಸಿಂಗ್​ ಮಾನ್​ (63*ರನ್​, 35 ಎಸೆತ, 10 ಬೌಂಡರಿ, 1 ಸಿಕ್ಸರ್​) ಬಿರುಸಿನ ಬ್ಯಾಟಿಂಗ್​ ಬಲದಿಂದ ಭಾರತ ತಂಡ ಮಾಜಿ ಕ್ರಿಕೆಟಿಗರ ಇಂಟರ್​ನ್ಯಾಷನಲ್​ ಮಾಸ್ಟರ್ಸ್​ ಲೀಗ್​ (ಐಎಂಎಲ್​) ಟಿ20 ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ನವಿ ಮುಂಬೈನ ಡಾ. ಡಿವೈ ಪಾಟೀಲ್​ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್​ ಎದುರು 9 ವಿಕೆಟ್​ಗಳಿಂದ ಜಯ ಸಾಧಿಸಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್​ ತಂಡ ಪ್ರಮುಖ ಬ್ಯಾಟರ್​ಗಳ ವೈಫಲ್ಯದ ನಡುವೆ 8 ವಿಕೆಟ್​ಗೆ 132 ರನ್​ ಪೇರಿಸಿತು. ಪ್ರತಿಯಾಗಿ ಭಾರತ 11.4 ಓವರ್​ಗಳಲ್ಲೇ 1 ವಿಕೆಟ್​ 133 ರನ್​ ಗಳಿಸಿ ಜಯಿಸಿತು. ಗುರುಕೀರತ್​ ಮತ್ತು ನಾಯಕ ಸಚಿನ್​ ತೆಂಡುಲ್ಕರ್​ (34) ಮೊದಲ ವಿಕೆಟ್​ಗೆ 75 ರನ್​ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ನಂತರ ಯುವರಾಜ್​ ಸಿಂಗ್​ (27*) ಜತೆಗೂಡಿ ಗುರುಕೀರತ್​ ಗೆಲುವಿನ ದಡ ಸೇರಿಸಿದರು.

ಇಂಗ್ಲೆಂಡ್​ ಮಾಸ್ಟರ್ಸ್​: 8 ವಿಕೆಟ್​ಗೆ 132 (ಮಾರ್ಗನ್​ 14, ಟಿಮ್​ ಆಂಬ್ರೋಸ್​ 23, ಮ್ಯಾಡಿ 25, ಬ್ರೆಸ್ನನ್​ 16, ಸ್ಕೋಫಿಲ್ಡ್​ 18, ಟ್ರೆಮ್ಲೆಟ್​ 16, ಧವಳ್​ ಕುಲಕರ್ಣಿ 21ಕ್ಕೆ 3, ಮಿಥುನ್​ 27ಕ್ಕೆ 2, ಪವನ್​ ನೇಗಿ 16ಕ್ಕೆ 2, ವಿನಯ್​ಕುಮಾರ್​ 27ಕ್ಕೆ 1). ಇಂಡಿಯಾ ಮಾಸ್ಟರ್ಸ್​: 11.4 ಓವರ್​ಗಳಲ್ಲಿ 1 ವಿಕೆಟ್​ಗೆ 133 (ಗುರುಕೀರತ್​ 63*, ತೆಂಡುಲ್ಕರ್​ 34, ಯುವರಾಜ್​ 28*, ಸ್ಕೋಫಿಲ್ಡ್​ 33ಕ್ಕೆ 1).