ಪರ್ತ್: ನ್ಯೂಜಿಲೆಂಡ್ ಎದುರು ತವರಿನಲ್ಲೇ ಮುಗ್ಗರಿಸಿದ್ದ ಭಾರತ ತಂಡವೀಗ ಕಾಂಗರೂ ನೆಲದಲ್ಲಿ ಅಮೋಘ ನಿರ್ವಹಣೆ ತೋರುವ ಮೂಲಕ ಪುಟಿದೆದ್ದಿದ್ದು, ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಐತಿಹಾಸಿಕ ಗೆಲುವಿನೊಂದಿಗೆ ಪುನರಾಗಮನ ಕಾಣುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ (161 ರನ್, 297 ಎಸೆತ, 15 ಬೌಂಡರಿ, 3 ಸಿಕ್ಸರ್) ಭರ್ಜರಿ ಶತಕದಾಟ ಹಾಗೂ ಅನುಭವಿ ವಿರಾಟ್ ಕೊಹ್ಲಿ (100* ರನ್, 143 ಎಸೆತ, 8 ಬೌಂಡರಿ, 2 ಸಿಕ್ಸರ್) ಟೆಸ್ಟ್ ಕ್ರಿಕೆಟ್‌ನಲ್ಲಿ ಸಿಡಿಸಿದ 30ನೇ ಶತಕದ ನೆರವಿನಿಂದ ಪ್ರವಾಸಿ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿಗೆ ಬೃಹತ್ ಗುರಿ ನೀಡಿದೆ. ಸತತ ಎರಡು ದಿನ ಮೈದಾನದಲ್ಲಿ ಕಳೆದ ಬಳಲಿಕೆಯ ಬಳಿಕ ದಾಖಲೆಯ ಮೊತ್ತದ ಚೇಸಿಂಗ್‌ಗೆ ಇಳಿದಿರುವ ಆಸ್ಟ್ರೇಲಿಯಾ ಆರಂಭಿಕ ಆಘಾತ ಕಂಡಿದ್ದು, ಭಾರತದ ಗೆಲುವಿಗೆ 7 ವಿಕೆಟ್ ಮಾತ್ರ ಬಾಕಿ ಉಳಿದಿವೆ. ಪ್ಯಾಟ್ ಕಮ್ಮಿನ್ಸ್ ಪಡೆ ಚೇಸಿಂಗ್‌ನಲ್ಲಿ ಈಗಾಗಲೆ 3 ವಿಕೆಟ್ ಕಳೆದುಕೊಂಡಿದ್ದು, ಜಸ್‌ಪ್ರೀತ್ ಬುಮ್ರಾ ಬಳಗ ಪಂದ್ಯದ 4ನೇ ದಿನವೇ ಗೆಲುವು ಒಲಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ೈನಲ್ ಪ್ರವೇಶದ ಆಸೆಗೆ ಮರುಜೀವ ತುಂಬಿಸಿಕೊಳ್ಳುವ ತವಕದಲ್ಲಿದೆ.
ಆಪ್ಟಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕಾದಾಟದಲ್ಲಿ ಭಾನುವಾರ ವಿಕೆಟ್ ನಷ್ಟವಿಲ್ಲದೆ 172 ರನ್‌ಗಳಿಂದ ಮೂರನೇ ದಿನದಾಟ ಆರಂಭಿಸಿದ ಭಾರತ ತಂಡ ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿ ಸಿಡಿಸಿದ ಸೆಂಚುರಿ, ಯುವ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ (37*) ಉಪಯುಕ್ತ ಬ್ಯಾಟಿಂಗ್ ಬಲದಿಂದ 134.3 ಓವರ್‌ಗಳಲ್ಲಿ 6 ವಿಕೆಟ್‌ಗೆ 487 ರನ್‌ಗಳಿಸಿ ದ್ವಿತೀಯ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ತವರಿನಲ್ಲಿ ಗೆಲುವಿಗೆ ದಾಖಲೆಯ 534 ರನ್ ಸವಾಲು ಪಡೆದಿರುವ ಆಸ್ಟ್ರೇಲಿಯಾ ದಿನದಂತ್ಯಕ್ಕೆ 4.2 ಓವರ್‌ಗಳಲ್ಲಿ 12 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದೆ. ಪಂದ್ಯದಲ್ಲಿ ಎರಡು ದಿನ ಬಾಕಿಯಿದ್ದು, ಆಸೀಸ್ ಇನ್ನೂ 522 ರನ್ ಬೇಕಿದೆ. ಆರಂಭಿಕ ಉಸ್ಮಾನ್ ಖವಾಜ (3*) ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಜಸ್‌ಪ್ರೀತ್ ಬುಮ್ರಾ ಎರಡು ಹಾಗೂ ಮೊಹಮದ್ ಸಿರಾಜ್ 1 ವಿಕೆಟ್ ಕಬಳಿಸಿದರು.