ಐಚಿ-ನಗೋಯಾ: ಐದನೇ ಆವೃತ್ತಿಯ ಏಷ್ಯನ್ ಪ್ಯಾರಾ ಗೇಮ್ಸ್ಗೆ ಜಪಾನ್ನ ಐಚಿ-ನಗೋಯಾದಲ್ಲಿ ಭಾನುವಾರ ವರ್ಣರಂಜಿತ ಚಾಲನೆ ನೀಡಲಾಯಿತು. "ನಾವು ಸುಂದರ ವ್ಯಕ್ತಿಗಳು' ಎಂಬ ಪರಿಕಲ್ಪನೆಯೊಂದಿಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಆತಿಥೇಯ ದೇಶದ ಕಲಾವಿದರು ವಿವಿಧ ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಿದರು. ಪಲೋಮಾ ಮಿಜುಹೊ ಸ್ಟೇಡಿಯಂನಲ್ಲಿ 2 ಗಂಟೆಗಳ ಕಾಲ ನಡೆದ ಸಮಾರಂಭದಲ್ಲಿ ಜಪಾನ್ನ ತಂತ್ರಜ್ಞಾನಗಳ ಶ್ರೀಮಂತಿಕೆಯನ್ನೂ ಪರಿಚಯಿಸಲಾಯಿತು.
7 ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟದಲ್ಲಿ 45 ದೇಶಗಳಿಂದ ಸುಮಾರು 3 ಸಾವಿರ ಪ್ಯಾರಾ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಸೋಮವಾರದಿಂದ ಪದಕ ಸ್ಪರ್ಧೆಗಳು ನಡೆಯಲಿವೆ.
ಸಿಂಧು ನಾಗರಿಕತೆ ಸ್ಫೂರ್ತಿಯ ಸಮವಸ್ತ್ರ!
ಏಷ್ಯನ್ ಪ್ಯಾರಾ ಗೇಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಭಾರತ ತಂಡದ ಸದಸ್ಯರು, ಸಿಂಧು ಕಣಿವೆ ನಾಗರಿಕತೆಯಿಂದ ಸ್ಫೂರ್ತಿ ಪಡೆದ ಸಮವಸ್ತ್ರದ ವಿನ್ಯಾಸದೊಂದಿಗೆ ಭಾಗವಹಿಸಿದ್ದು ವಿಶೇಷವಾಗಿತ್ತು. ಗಾಢ ನೀಲಿ ಬಣ್ಣದ ಬ್ಲೇಜರ್, 5 ಸಾವಿರ ವರ್ಷ ಹಳೆಯ ಸಿಂಧು ನಾಗರಿಕತೆಯ ಅತ್ಯಂತ ಪ್ರಸಿದ್ಧ ಕಲಾಕೃತಿಗಳ ಚಿನ್ನದ ಬಣ್ಣದ ಮುದ್ರಣವನ್ನು ಒಳಗೊಂಡಿತ್ತು. "ಪುರೋಹಿತ-ರಾಜ' ಶಿಲ್ಪ ಮತ್ತು "ನರ್ತಕಿ' ಪ್ರತಿಮೆಯಿಂದ ಪ್ರೇರಿತವಾದ ವಿನ್ಯಾಸವನ್ನು ಅಳವಡಿಸಲಾಗಿತ್ತು. ಅಲ್ಲದೆ ಸಿಂಧು ನಾಗರಿಕತೆಯ ವಿಶಿಷ್ಟ ಚಿಹ್ನೆಗಳು ಮತ್ತು ಲಿಪಿಯನ್ನು ಆಧರಿಸಿದ ಪ್ರಾಚಿನ ಮುದ್ರೆಗಳ ಚಿತ್ರಣಗಳನ್ನು ವಿನ್ಯಾಸದಲ್ಲಿ ಸೇರಿಸಲಾಗಿತ್ತು. ಈ ಮೂಲಕ ಕ್ರೀಡಾಪಟುಗಳ ಪಥ ಸಂಚಲನದ ವೇಳೆ ಭಾರತ ತನ್ನ ಪ್ರಾಚಿನ ಪರಂಪರೆಯನ್ನು ಪ್ರದರ್ಶಿಸಿತು. ಬ್ಲೇಜರ್ನ ಜೇಬಿನ ಮೇಲೆ ಅಂದರೆ ಹೃದಯಕ್ಕೆ ಹತ್ತಿರದಲ್ಲಿ ತ್ರಿವರ್ಣ ಧ್ವಜವಿದ್ದರೆ, ಕಾಲರ್ ಭಾಗವು ಏಳು ನದಿಗಳ ಭೂಮಿಯ "ಸಪ್ತಸಿಂಧು' ಪ್ರತಿಕವಾಗಿತ್ತು.
ಪ್ರಮೋದ್, ಸಿಮ್ರನ್ ಸಾರಥ್ಯ
ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್ ಮತ್ತು ಪ್ಯಾರಾ ಅಥ್ಲೀಟ್ ಸಿಮ್ರನ್ ಶರ್ಮ ಉದ್ಘಾಟನಾ ಸಮಾರಂಭದ ಕ್ರೀಡಾಪಟುಗಳ ಪಥ ಸಂಚಲನದಲ್ಲಿ ತ್ರಿವರ್ಣ ಧ್ವಜದೊಂದಿಗೆ 100ಕ್ಕೂ ಅಧಿಕ ಸದಸ್ಯರಿದ್ದ ಭಾರತ ತಂಡವನ್ನು ಮುನ್ನಡೆಸಿದರು. ಈ ಮುನ್ನ ಭಾರತದ ಮಹಿಳಾ ಧ್ವಜಧಾರಿಯಾಗಿ ಗುರುತಿಸಲ್ಪಟ್ಟಿದ್ದ ವೀಲ್ಚೇರ್ ಟೇಬಲ್ ಟೆನಿಸ್ ಆಟಗಾರ್ತಿ ಭವಿನಾ ಪಟೇಲ್, ಸೋಮವಾರ ನಡೆಯಲಿರುವ ತನ್ನ ಕ್ವಾರ್ಟರ್ಫೈನಲ್ ಪಂದ್ಯದತ್ತ ಹೆಚ್ಚಿನ ಗಮನಹರಿಸಲು ಬಯಸಿದ್ದರಿಂದ ಸಮಾರಂಭಕ್ಕೆ ಗೈರಾದರು. ಹೀಗಾಗಿ ಅವರ ಜವಾಬ್ದಾರಿಯನ್ನು ಕಳೆದ ಆವೃತ್ತಿಯ ಅವಳಿ ರಜತ ವಿಜೇತೆ ಸಿಮ್ರನ್ ನಿಭಾಯಿಸಿದರು.
ಪ್ರಧಾನಿ ಮೋದಿ ಶುಭಹಾರೈಕೆ
ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾಗವಹಿಸಲಿರುವ 168 ಕ್ರೀಡಾಪಟುಗಳ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. "ಪ್ಯಾರಾ ಕ್ರೀಡಾಪಟುಗಳ ಬಗ್ಗೆ ಭಾರತ ಅಪಾರವಾದ ಹೆಮ್ಮೆಯನ್ನು ಹೊಂದಿದೆ. ಅವರ ದೃಢತೆ, ಸಮರ್ಪಣಾ ಭಾವ ಮತ್ತು ಅಚಲ ಉತ್ಸಾಹವು 140 ಕೋಟಿ ಭಾರತೀಯರಿಗೆ ಸ್ಫೂರ್ತಿಯಾಗಿದೆ. ಆತ್ಮವಿಶ್ವಾಸದಿಂದ ಸ್ಪರ್ಧಿಸಿ, ಅತ್ಯುತ್ತಮ ಪ್ರದರ್ಶನ ನೀಡಿ' ಎಂದು ಮೋದಿ ಎಕ್ಸ್ನಲ್ಲಿ ಹೇಳಿದ್ದಾರೆ.
63: ಏಷ್ಯನ್ ಪ್ಯಾರಾ ಗೇಮ್ಸ್ ಪದಕ ಸ್ಪರ್ಧೆಯ ಮೊದಲ ದಿನವಾದ ಸೋಮವಾರ ಒಟ್ಟು 63 ಸ್ವರ್ಣ ಪದಕಗಳು ಪಣಕ್ಕಿವೆ. ಈಜಿನಲ್ಲಿ 23, ಅಥ್ಲೆಟಿಕ್ಸ್ನಲ್ಲಿ 13, ಸೈಕ್ಲಿಂಗ್ನಲ್ಲಿ 7, ಜುಡೋ, ಪವರ್ಲಿಫ್ಟಿಂಗ್ನಲ್ಲಿ ತಲಾ 5, ವೀಲ್ಚೇರ್ ಫೆನ್ಸಿಂಗ್ನಲ್ಲಿ 4, ಟೇಕ್ವಾಂಡೊ, ಶೂಟಿಂಗ್ನಲ್ಲಿ ತಲಾ 3 ಚಿನ್ನದ ಪದಕ ವಿಜೇತರ ನಿರ್ಧಾರವಾಗಲಿದೆ.
ಮೊದಲ ದಿನ 17 ಬಂಗಾರಕ್ಕೆ ಭಾರತ ಸ್ಪರ್ಧೆ
ಭಾರತದ ಪ್ಯಾರಾ ಕ್ರೀಡಾಪಟುಗಳು ಸೋಮವಾರ ಒಟ್ಟು 17 ಸ್ವರ್ಣ ಪದಕಗಳಿಗೆ ಸೆಣಸಲಿದ್ದಾರೆ. ಈಜಿನಲ್ಲಿ 6, ಅಥ್ಲೆಟಿಕ್ಸ್ನಲ್ಲಿ 5, ಜುಡೋ-ಪವರ್ಲಿಫ್ಟಿಂಗ್ನಲ್ಲಿ ತಲಾ ಒಂದು ಚಿನ್ನದ ಪದಕಗಳಿಗೆ ಸ್ಪರ್ಧಿಸಲಿದ್ದಾರೆ. ಅಥ್ಲೆಟಿಕ್ಸ್ನಲ್ಲಿ ಮೊದಲ ದಿನ ಭಾರತ ಕನಿಷ್ಠ 6 ಪದಕ ಗೆಲ್ಲುವ ನಿರೀಕ್ಷೆ ಇದೆ. ಶೂಟರ್ಗಳಾದ ಅವನಿ ಲೇಖರ ಮತ್ತು ಮೋನಾ ಅಗರ್ವಾಲ್ ಭಾರತದ ಪ್ರಮುಖ ಪದಕ ನಿರೀಕ್ಷೆಯಾಗಿದ್ದಾರೆ.