ಕ್ರೀಡೆ

ಬಾರ್ಡರ್-ಗಾವಸ್ಕರ್ ಟ್ರೋಫಿ: ಪಿಂಕ್‌ಬಾಲ್ ಎದುರು ಪರದಾಟ, ರೋಹಿತ್ ಪಡೆಗೆ ಸೋಲಿನ ಆತಂಕ!

ಅಡಿಲೇಡ್: ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಬೇಗನೆ ನಿಯಂತ್ರಿಸಲು ಬೌಲರ್‌ಗಳ ವಿಲವಾದ ಬಳಿಕ ಹೊನಲುಬೆಳಕಿನಡಿ ನಸುಗೆಂಪು ಬಣ್ಣದ ಚೆಂಡನ್ನು ಸಮರ್ಥವಾಗಿ ಎದುರಿಸಲು ಬ್ಯಾಟರ್‌ಗಳು ಪರದಾಡುವುದರೊಂದಿಗೆ ಭಾರತ ತಂಡ ಹಾಲಿ ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಮೊದಲ ಬಾರಿಗೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ (140 ರನ್, 141 ಎಸೆತ, 17 ಬೌಂಡರಿ, 4 ಸಿಕ್ಸರ್) ಬಿರುಸಿನ ಶತಕ ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ (33ಕ್ಕೆ 2) ಸಹಿತ ಇತರ ಬೌಲರ್‌ಗಳ ಸಂಘಟಿತ ದಾಳಿಯ ಬಲದಿಂದ ಆಸ್ಟ್ರೇಲಿಯಾ ತಂಡ ಎರಡನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಭಾರತ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ. ಮೊದಲ ಇನಿಂಗ್ಸ್‌ನ ಹಿನ್ನಡೆಯನ್ನು ಹಿಮ್ಮೆಟ್ಟಿಸುವ ಮೊದಲೇ ತಂಡದ ಅಗ್ರ ಐವರು ಬ್ಯಾಟರ್‌ಗಳನ್ನು ಕಳೆದುಕೊಂಡಿರುವ ರೋಹಿತ್ ಶರ್ಮ ಪಡೆ ಸೋಲಿನ ಆತಂಕ ಎದುರಿಸಿದೆ

ಅಡಿಲೇಡ್ ಓವಲ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶನಿವಾರ 1 ವಿಕೆಟ್‌ಗೆ 86 ರನ್‌ಗಳಿಂದ 2ನೇ ದಿನದಾಟ ಆರಂಭಿಸಿದ ಆಸೀಸ್, ಜಸ್‌ಪ್ರೀತ್ ಬುಮ್ರಾ (61ಕ್ಕೆ 4) ಹಾಗೂ ಮೊಹಮದ್ ಸಿರಾಜ್ (98ಕ್ಕೆ 4) ಬಿಗಿ ದಾಳಿಯ ನಡುವೆಯೂ ಮಾರ್ನಸ್ ಲಬುಶೇನ್ (64 ರನ್, 126 ಎಸೆತ, 9 ಬೌಂಡರಿ)- ಟ್ರಾವಿಸ್ ಹೆಡ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ 87.3 ಓವರ್‌ಗಳಲ್ಲಿ 337 ರನ್‌ಗಳಿಗೆ ಮೊದಲ ಇನಿಂಗ್ಸ್ ಕೊನೆಗೊಳಿಸಿತು.

157 ರನ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಪ್ರಮುಖ ಬ್ಯಾಟರ್‌ಗಳು ಮತ್ತೆ ಕೈಕೊಟ್ಟರು. ರೋಹಿತ್ ಶರ್ಮ ಪಡೆ ದಿನದಂತ್ಯಕ್ಕೆ 24 ಓವರ್‌ಗಳಲ್ಲಿ 5 ವಿಕೆಟ್‌ಗೆ 128 ರನ್ ಕಲೆಹಾಕಿದ್ದು, ಇನ್ನೂ 29 ರನ್ ಹಿನ್ನಡೆಯಲ್ಲಿದೆ. ಪಂದ್ಯದಲ್ಲಿ 3 ದಿನಗಳ ಆಟ ಬಾಕಿಯಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ (28*ರನ್, 25 ಎಸೆತ, 5 ಬೌಂಡರಿ) ಹಾಗೂ ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ (15*) ಜತೆಗೆ ಕೆಳ ಕ್ರಮಾಂಕದ ಬ್ಯಾಟರ್‌ಗಳ ಪ್ರದರ್ಶನ ಪಂದ್ಯದಲ್ಲಿ ಭಾರತದ ಭವಿಷ್ಯ ನಿರ್ಧರಿಸಲಿದೆ.