ಮೊಹಾಲಿ: ಶಿವಂ ದುಬೆ (60* ರನ್, 40 ಎಸೆತ, 5 ಬೌಂಡರಿ, 2 ಸಿಕ್ಸರ್ ಹಾಗೂ 9ಕ್ಕೆ 1 ವಿಕೆಟ್) ಆಲ್ರೌಂಡ್ ನಿರ್ವಹಣೆಯ ಬಲದಿಂದ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಅಫ್ಘಾನಿಸ್ತಾನ ಎದುರು 6 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿದೆ. ಇದರೊಂದಿಗೆ 2024ರ ತವರು ಋತುವಿನ ಅಭಿಯಾನವನ್ನು ಜಯದೊಂದಿಗೆ ಆರಂಭಿಸಿರುವ ರೋಹಿತ್ ಶರ್ಮ ಪಡೆ, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಂಡಿದೆ.
ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಅ್ಘಾನಿಸ್ತಾನ, 5 ವಿಕೆಟ್‌ಗೆ 158 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿತು. ಪ್ರತಿಯಾಗಿ ನಾಯಕ ರೋಹಿತ್ ಶರ್ಮ ರನೌಟ್ ಎಡವಟ್ಟು ಮಾಡಿಕೊಂಡರೂ, ಶಿವಂ ದುಬೆ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮ (31) ನಡೆಸಿದ ಉಪಯುಕ್ತ ಜತೆಯಾಟದಿಂದ ಭಾರತ, 17.3 ಓವರ್‌ಗಳಲ್ಲಿ 4 ವಿಕೆಟ್‌ಗೆ 159 ರನ್‌ಗಳಿಸಿ 15 ಎಸೆತ ಬಾಕಿಯಿರುವಂತೆಯೇ ಗೆಲುವಿನ ದಡ ಸೇರಿತು.
ಶಿವಂ ದುಬೆ ಗೆಲುವಿನ ಆಟ: ರೋಹಿತ್ ನಿರ್ಗಮನದ ಬೆನ್ನಲ್ಲೇ ಕೆಲಸಮಯ ಬಿರುಸಿನಾಟಕ್ಕಿಳಿದ ಶುಭಮಾನ್ ಗಿಲ್ (23) 2ನೇ ವಿಕೆಟ್‌ಗೆ ತಿಲಕ್ ವರ್ಮ (26) ಜತೆಯಾಗಿ 28 ರನ್ ಸೇರಿಸಿದರು. 4ನೇ ಓವರ್‌ನಲ್ಲಿ ಸ್ಟಂಪ್ ಔಟಾದ ಶುಭಮಾನ್ ಡಗೌಟ್‌ಗೆ ಮರಳಿದರು. ಸಾಧಾರಣ ಆರಂಭ ಕಂಡ ಟೀಮ್‌ಇಂಡಿಯಾಗೆ ಶಿವಂ ದುಬೆ ಆಸರೆಯಾಗಿ ನಿಂತರು. 3ನೇ ವಿಕೆಟ್‌ಗೆ ತಿಲಕ್ ವರ್ಮ ಜತೆಗೂಡಿ 44 ರನ್ ಸಿಡಿಸಿ ಚೇತರಿಕೆ ನೀಡಿದರು. ಆದರೆ ತಿಲಕ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ನಂತರ ದುಬೆ ಜತೆಯಾದ ಜಿತೇಶ್ ಶರ್ಮ ಬಿರುಸಿನ ಬ್ಯಾಟಿಂಗ್ ನಡೆಸಿ ಚೇಸಿಂಗ್‌ಗೆ ಬಲ ತುಂಬಿದರು. ವಿಕೆಟ್ ಉರುಳಿದರೂ ಸರಾಗವಾಗಿ ಆ್ಘನ್ ಬೌಲರ್‌ಗಳ ದಂಡಿಸಿದ ಶಿವಂ ದುಬೆ 38 ಎಸೆತದಲ್ಲಿ ಅರ್ಧಶತಕ ಬಾರಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು. ರಿಂಕು ಸಿಂಗ್ (16*) ಸಾಥ್ ನೀಡಿದರು. ಕೊನೆಗೆ 10 ರನ್ ಅಗತ್ಯವಿದ್ದಾಗ ಸಿಕ್ಸರ್, ಬೌಂಡರಿ ಬಾರಿಸಿದ ಶಿವಂ ಜಯದ ರೂವಾರಿಯಾದರು.