ಬೆಂಗಳೂರು: ವಿಶ್ವದ ಅಗ್ರ 8 ತಂಡಗಳ ರೋಚಕ ಕಾದಾಟಕ್ಕೆ ವೇದಿಕೆ ಎನಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಮತ್ತು ದುಬೈನಲ್ಲಿ ವೇದಿಕೆ ಸಜ್ಜಾಗಿದೆ. ಮಿನಿ ವಿಶ್ವಕಪ್ ಖ್ಯಾತಿಯ ಟೂರ್ನಿ 8 ವರ್ಷಗಳ ಬಳಿಕ ಮರುಆಯೋಜನೆಗೊಂಡಿದೆ. ಬುಧವಾರ ಕರಾಚಿಯಲ್ಲಿ ನಡೆಯಲಿರುವ ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಟೂರ್ನಿಗೆ ಚಾಲನೆ ದೊರೆಯಲಿದೆ. ಟೂರ್ನಿಯ ಕೆಲ ವಿಶೇಷತೆಗಳ ಸಂಪ್ತ ಮೆಲುಕು ಇಲ್ಲಿದೆ...
ಭಾರತಕ್ಕೆ ನೆಚ್ಚಿನ ಟೂರ್ನಿ
ಐಸಿಸಿ ಟೂರ್ನಿಗಳ ಪೈಕಿ ಭಾರತಕ್ಕೆ ಇದು ಅತ್ಯಂತ ನೆಚ್ಚಿನ ಟೂರ್ನಿ ಎನಿಸಿದೆ. ಈ ಹಿಂದಿನ 8 ಆವೃತ್ತಿಗಳಲ್ಲಿ 4ರಲ್ಲಿ ಫೈನಲ್ಗೇರಿರುವ ಭಾರತ 2 ಬಾರಿ (2002, 2013) ಪ್ರಶಸ್ತಿ ಜಯಿಸಿದೆ. 2000ದ ಫೈನಲ್ನಲ್ಲಿ ನ್ಯೂಜಿಲೆಂಡ್ ಮತ್ತು 2017ರ ಫೈನಲ್ನಲ್ಲಿ ಪಾಕ್ ವಿರುದ್ಧ ಮುಗ್ಗರಿಸಿತ್ತು. 2004ರಿಂದ 2009ರ ನಡುವೆ ಮಾತ್ರ ಭಾರತ ಗ್ರೂಪ್ ಹಂತದಲ್ಲೇ ನಿರ್ಗಮಿಸಿತ್ತು. ಟೂರ್ನಿಯಲ್ಲಿ ಇದುವರೆಗೆ ಆಡಿರುವ ತಂಡಗಳ ಪೈಕಿ ಭಾರತ ಗರಿಷ್ಠ 69.23 ಗೆಲವಿನ ಸರಾಸರಿ (29 ಪಂದ್ಯ, 18 ಜಯ, 8 ಸೋಲು, 3 ರದ್ದು) ಹೊಂದಿದೆ.
ಭಾರತೀಯನ ಕನಸಿನ ಕೂಸು
ಆಧುನಿಕ ಭಾರತೀಯ ಕ್ರಿಕೆಟ್ ಏಳ್ಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಜಗಮೋಹನ್ ದಾಲ್ಮಿಯಾ ಐಸಿಸಿ ಅಧ್ಯಕ್ಷರಾಗಿದ್ದ ಸಮಯದಲ್ಲಿ (1997&2000) ಜನ್ಮತಳೆದ ಟೂರ್ನಿ ಇದಾಗಿದೆ. ಏಕದಿನ ವಿಶ್ವಕಪ್ ಪ್ರತಿ 4 ವರ್ಷಕ್ಕೊಮ್ಮೆ ನಡೆಯುವ ಕಾರಣ ಅದರ ನಡುವೆಯೂ ಐಸಿಸಿಗೆ ಆದಾಯ ತರುವ ಮತ್ತು ಕ್ರಿಕೆಟ್ ಪ್ರೇಮಿಗಳಿಗೂ ಮನರಂಜನೆ ಒದಗಿಸುವ ಸಲುವಾಗಿ ಟೂರ್ನಿ ಆರಂಭಿಸಿದ್ದರು. ಅಲ್ಲದೆ ಆಗಿನ ಟೆಸ್ಟ್ ಮಾನ್ಯತೆಯ ದೇಶಗಳಿಗೂ ಕ್ರಿಕೆಟ್ ಜನಪ್ರಿಯತೆ ವಿಸ್ತರಿಸುವ ಮತ್ತು ಆರ್ಥಿಕ ಬಲ ಒದಗಿಸುವ ದೃಷ್ಟಿಯಿಂದ ಬಾಂಗ್ಲಾದೇಶಕ್ಕೆ 1998ರ ಚೊಚ್ಚಲ ಆವೃತ್ತಿಯ ಆತಿಥ್ಯ ನೀಡಲಾಗಿತ್ತು. ಆಗ ಇದನ್ನು ವಿಲ್ಸ್ ಇಂಟರ್ನ್ಯಾಷನಲ್ ಕಪ್ ಎಂದು ಕರೆಯಲಾಗಿತ್ತು. 2000ದ 2ನೇ ಆವೃತ್ತಿಗೆ ಇದು ಐಸಿಸಿ ನಾಕೌಟ್ ಟೂರ್ನಿ ಆಗಿತ್ತು. 2002ರ 3ನೇ ಆವೃತ್ತಿಗೆ ಚಾಂಪಿಯನ್ಸ್ ಟ್ರೋಫಿ ಹೆಸರು ಪಡೆದುಕೊಂಡಿತ್ತು.
ಇಬ್ಬರು ಮಾಜಿ ಚಾಂಪಿಯನ್ಗಳಿಲ್ಲ!
ಈ ಬಾರಿ 2 ಪ್ರಮುಖ ಮಾಜಿ ಚಾಂಪಿಯನ್ ತಂಡಗಳು ಟೂರ್ನಿಗೆ ಅರ್ಹತೆ ಪಡೆಯಲು ವಿಲವಾಗಿದೆ. 2004ರ ಚಾಂಪಿಯನ್ ವೆಸ್ಟ್ ಇಂಡೀಸ್ ಸತತ 2ನೇ ಬಾರಿಗೆ ಟೂರ್ನಿ ಅರ್ಹತೆ ತಪ್ಪಿಸಿಕೊಂಡಿದೆ. ಇನ್ನು 2002ರ ಜಂಟಿ ಚಾಂಪಿಯನ್ ಶ್ರೀಲಂಕಾ, 2023ರ ಏಕದಿನ ವಿಶ್ವಕಪ್ನಲ್ಲಿ ತೋರಿದ ಕಳಪೆ ನಿರ್ವಹಣೆಯಿಂದಾಗಿ ಟೂರ್ನಿಗೆ ಅರ್ಹತೆ ಪಡೆದಿಲ್ಲ. 2023ರ ವಿಶ್ವಕಪ್ನ ಅಗ್ರ 8 ತಂಡಗಳಷ್ಟೇ ಈ ಟೂರ್ನಿಯಲ್ಲಿ ಆಡಲಿವೆ.
ಆಫ್ರಿಕಾ, ಕಿವೀಸ್ಗೂ ಒಲಿದಿರುವ ಪ್ರಶಸ್ತಿ
ಸಾಮಾನ್ಯವಾಗಿ ಐಸಿಸಿ ಟೂರ್ನಿಗಳೆಂದರೆ ದಣ ಆಫ್ರಿಕಾ, ನ್ಯೂಜಿಲೆಂಡ್ಗೆ ಕೈಕೊಡುವುದೇ ಹೆಚ್ಚು. ಆದರೆ ಚಾಂಪಿಯನ್ಸ್ ಟ್ರೋಫಿಯ ಮೊದಲ 2 ಆವೃತ್ತಿಗಳಲ್ಲಿ ಇವೇ 2 ತಂಡಗಳು ಪ್ರಶಸ್ತಿ ಎತ್ತಿದ್ದವು ಎಂಬುದು ಗಮನಾರ್ಹ. ದಣ ಆಫ್ರಿಕಾ (24 ಪಂದ್ಯ, 12 ಜಯ, 11 ಸೋಲು, 1 ಟೈ) ಮತ್ತು ನ್ಯೂಜಿಲೆಂಡ್ (24 ಪಂದ್ಯ, 12 ಜಯ, 10 ಸೋಲು, 2 ರದ್ದು) ಶೇ. 50ಕ್ಕಿಂತ ಹೆಚ್ಚಿನ ಗೆಲುವಿನ ಸರಾಸರಿ ಹೊಂದಿವೆ. 2 ಬಾರಿಯ ರನ್ನರ್ಅಪ್ ಇಂಗ್ಲೆಂಡ್ (2004, 2013) ಕೂಡ ಟೂರ್ನಿಯಲ್ಲಿ ಶೇ. 50ಕ್ಕಿಂತ (25 ಪಂದ್ಯ, 14 ಜಯ, 11 ಸೋಲು) ಗೆಲುವಿನ ಸರಾಸರಿ ಹೊಂದಿದೆ.
ಆಸೀಸ್ ಸತತ 2 ಬಾರಿ ಗೆದ್ದ ಸಾಧನೆ
ಸಾಮಾನ್ಯವಾಗಿ ಐಸಿಸಿ ಟೂರ್ನಿಗಳೆಂದರೆ ಆಸೀಸ್ ಪ್ರಾಬಲ್ಯ ಇದ್ದೇ ಇರುತ್ತದೆ. ಚಾಂಪಿಯನ್ಸ್ ಟ್ರೋಫಿಯಲ್ಲೂ 2006 ಹಾಗೂ 2009ರಲ್ಲಿ ಸತತ 2 ಬಾರಿ ಪ್ರಶಸ್ತಿ ಜಯಿಸಿ ಆಸೀಸ್ ಬೀಗಿತ್ತು. ಈ ಮೂಲಕ ಚಾಂಪಿಯನ್ಸ್ ಟ್ರೋಫಿಯನ್ನು ಸತತ 2 ಬಾರಿ ಗೆದ್ದ ಏಕೈಕ ತಂಡವೆನಿಸಿದೆ. ಆದರೆ ಟೂರ್ನಿಯ ಕೊನೇ 2 ಆವೃತ್ತಿಗಳಲ್ಲಿ (2013, 2017) ಕನಿಷ್ಠ ಒಂದು ಪಂದ್ಯವನ್ನೂ ಗೆದ್ದಿರದ ಆಸೀಸ್, ಲೀಗ್ ಹಂತದಲ್ಲೇ ನಿರ್ಗಮಿಸಿತ್ತು. ಈ ಸಲವೂ ಪ್ರಮುಖ ಆಟಗಾರರ ಗೈರಿನ ಹಿನ್ನಡೆಯನ್ನು ಆಸೀಸ್ ಹೊಂದಿದೆ.
29 ವರ್ಷಗಳ ಬಳಿಕ ಪಾಕ್ನಲ್ಲಿ ಐಸಿಸಿ ಟೂರ್ನಿ
ಪಾಕಿಸ್ತಾನ ಬರೋಬ್ಬರಿ 29 ವರ್ಷಗಳ ಬಳಿಕ ಆತಿಥ್ಯ ವಹಿಸಿಕೊಳ್ಳುತ್ತಿರುವ ಐಸಿಸಿ ಟೂರ್ನಿ ಇದಾಗಿದೆ. 1996ರ ಏಕದಿನ ವಿಶ್ವಕಪ್ಗೆ ಕೊನೆಯದಾಗಿ ಪಾಕ್ ಜಂಟಿ ಆತಿಥ್ಯ ವಹಿಸಿತ್ತು. 2011ರ ಏಕದಿನ ವಿಶ್ವಕಪ್ಗೂ ಪಾಕ್ ಜಂಟಿ ಆತಿಥ್ಯ ವಹಿಸಬೇಕಿತ್ತಾದರೂ, 2008ರಲ್ಲಿ ಲಂಕಾ ಬಸ್ ಮೇಲೆ ಉಗ್ರರ ದಾಳಿ ನಡೆದ ಬಳಿಕ ಆತಿಥ್ಯ ಕಳೆದುಕೊಂಡಿತ್ತು. ಈ ಬಾರಿಯೂ ಭಾರತ ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನಕ್ಕೆ ತೆರಳುತ್ತಿಲ್ಲ. ಹೀಗಾಗಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸಲಾಗುತ್ತಿದ್ದು, ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಭಾರತ ಫೈನಲ್ಗೇರಿದರೆ ದುಬೈನಲ್ಲೇ ಪ್ರಶಸ್ತಿ ಕದನವೂ ನಡೆಯಲಿದೆ.
ಪಾಕಿಸ್ತಾನ ಹಾಲಿ ಚಾಂಪಿಯನ್
ಟೂರ್ನಿಯ ಮೊದಲ 7 ಆವೃತ್ತಿಗಳಲ್ಲಿ ಫೈನಲ್ ಪ್ರವೇಶಿಸಲು ವಿಫಲವಾಗಿದ್ದ ಪಾಕಿಸ್ತಾನ ತಂಡ 2017ರ ಕೊನೇ ಆವೃತ್ತಿಯ ಫೈನಲ್ನಲ್ಲಿ ಭಾರತವನ್ನು ಸೋಲಿಸಿ ಚೊಚ್ಚಲ ಪ್ರಶಸ್ತಿ ಗೆದ್ದಿತ್ತು. ಇದರಿಂದಾಗಿ ಪಾಕಿಸ್ತಾನ ತಂಡ ಈ ಬಾರಿ ತವರಿನಲ್ಲಿ ಹಾಲಿ ಚಾಂಪಿಯನ್ ತಂಡವಾಗಿ ಅಭಿಯಾನ ಆರಂಭಿಸುವ ಅವಕಾಶ ಪಡೆದಿದೆ.
ಜಂಟಿ ಚಾಂಪಿಯನ್ಸ್
ಜಂಟಿ ವಿಜೇತರನ್ನು ಕಂಡಿರುವ ಏಕೈಕ ಐಸಿಸಿ ಟೂರ್ನಿ ಇದಾಗಿದೆ. 2002ರಲ್ಲಿ ಭಾರತ-ಲಂಕಾ ಜಂಟಿ ಚಾಂಪಿಯನ್ ಆಗಿತ್ತು. ಫೈನಲ್ ಪಂದ್ಯದ ದಿನ ಮತ್ತು ಅದರ ಮೀಸಲು ದಿನವೂ ಮಳೆಯಿಂದಾಗಿ ಸ್ಪಷ್ಟ ಲಿತಾಂಶ ಹೊರಬಿದ್ದಿರಲಿಲ್ಲ. 2 ದಿನವೂ ಲಂಕಾ ಮೊದಲು ಬ್ಯಾಟಿಂಗ್ ಮಾಡಿ 5 ವಿಕೆಟ್ 244 ಮತ್ತು 7 ವಿಕೆಟ್ಗೆ 222 ರನ್ ಗಳಿಸಿತ್ತು. ಆದರೆ ಮಳೆ ಭಾರತದ ಚೇಸಿಂಗ್ಗೆ ಅಡ್ಡಿಪಡಿಸಿತ್ತು. ಇದರಿಂದ ಅನಿವಾರ್ಯವಾಗಿ ಐಸಿಸಿ ಜಂಟಿ ಚಾಂಪಿಯನ್ಸ್ ಘೋಷಿಸಿತ್ತು.
8 ಆವೃತ್ತಿಗಳಲ್ಲಿ 7 ವಿಜೇತರು
ವಿಶ್ವದ ಪ್ರಮುಖ 8 ತಂಡಗಳು ಆಡುವ ಟೂರ್ನಿ ಅತ್ಯಂತ ಜಿದ್ದಾಜಿದ್ದಿನ ಹೋರಾಟಕ್ಕೂ ಸಾಯಾಗಿದೆ. ಹಿಂದಿನ 8 ಆವೃತ್ತಿಗಳಲ್ಲಿ 7 ತಂಡಗಳು ಪ್ರಶಸ್ತಿಗೆ ಮುತ್ತಿಕ್ಕಿರುವುದೇ ಇದಕ್ಕೆ ಪುಷ್ಠಿ. ಟೂರ್ನಿಯ ನಿಕಟ ಸ್ಪರ್ಧಾತ್ಮಕತೆ ಮತ್ತು ಪ್ರಾಬಲ್ಯ ಮೆರೆಯುವುದು ಸುಲಭವಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಪಾಕ್ ಎದುರು ಭಾರತಕ್ಕೆ ಹಿನ್ನಡೆ
ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ ದಾಖಲೆ ಹೊಂದಿರುವ ಭಾರತ, ಟಿ20 ವಿಶ್ವಕಪ್ನಲ್ಲೂ ಬಲಿಷ್ಠವಾದ ದಾಖಲೆ ಹೊಂದಿದೆ. ಆದರೆ, ಚಾಂಪಿಯನ್ಸ್ ಟ್ರೋಫಿಯ ಒಟ್ಟಾರೆ ಯಶಸ್ಸಿನ ನಡುವೆಯೂ ಭಾರತ, ಪಾಕ್ ಎದುರು ಹಿನ್ನಡೆ ಅನುಭವಿಸಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವಿರುದ್ಧ ಆಡಿರುವ 5 ಪಂದ್ಯಗಳಲ್ಲಿ 3ರಲ್ಲಿ ಸೋತು, 2 ಪಂದ್ಯದಲ್ಲಷ್ಟೆ ಜಯ ಸಾಧಿಸಿದೆ. ಅದರಲ್ಲೂ 2017ರ ಫೈನಲ್ ಸೋಲು ಭಾರತಕ್ಕೆ ದೊಡ್ಡ ಮುಖಭಂಗವಾಗಿತ್ತು.
ಚಾಂಪಿಯನ್ಸ್
1998: ದಣ ಆಫ್ರಿಕಾ
2000: ನ್ಯೂಜಿಲೆಂಡ್
2002: ಭಾರತ-ಶ್ರೀಲಂಕಾ
2004: ವೆಸ್ಟ್ ಇಂಡೀಸ್
2006: ಆಸ್ಟ್ರೆಲಿಯಾ
2009: ಆಸ್ಟ್ರೆಲಿಯಾ
2013: ಭಾರತ
2017: ಪಾಕಿಸ್ತಾನ