ಕ್ರೀಡೆ

2021ರಲ್ಲಿ ಇಂಗ್ಲೆಂಡ್‌ಗೆ ಭಾರತ ತಂಡ ಪ್ರವಾಸ, 5 ಪಂದ್ಯಗಳ ಟೆಸ್ಟ್ ಸರಣಿ ನಿಗದಿ

ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ 2021ರ ಸಾಲಿನ ತವರು ಋತುವಿನ ವೇಳಾಪಟ್ಟಿ ಅಂತಿಮಗೊಂಡಿದೆ. ಇದರೊಂದಿಗೆ ಭಾರತ ತಂಡ ಮುಂದಿನ ವರ್ಷ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡು 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುವುದು ಕೂಡ ಖಚಿತಗೊಂಡಿದೆ. ಕರೊನಾ ಹಾವಳಿಯ ಬಳಿಕ ಎಂದಿನಂತೆ ಕ್ರಿಕೆಟ್ ಸರಣಿಗಳನ್ನು ಆಯೋಜಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮುಂದಾಗಿದ್ದು, ಪ್ರೇಕ್ಷಕರಿಗೂ ಪೂರ್ಣ ಪ್ರಮಾಣದಲ್ಲಿ ಪಂದ್ಯಗಳಿಗೆ ಹಾಜರಾಗುವ ಅವಕಾಶ ಕಲ್ಪಿಸಲು ಬಯಸಿದೆ.

ಭಾರತ ವಿರುದ್ಧದ ಸರಣಿಗೆ ಮುನ್ನ ಇಂಗ್ಲೆಂಡ್ ತಂಡ ಜೂನ್ ಮತ್ತು ಜುಲೈನಲ್ಲಿ ಪ್ರವಾಸಿ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ಸವಾಲು ಎದುರಿಸಲಿದೆ. ಲಂಕಾ ವಿರುದ್ಧ 3 ಏಕದಿನ ಮತ್ತು ಪಾಕಿಸ್ತಾನ ವಿರುದ್ಧ ತಲಾ 3 ಏಕದಿನ, ಟಿ20 ಪಂದ್ಯಗಳ ಸರಣಿ ನಿಗದಿಯಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ೈನಲ್ ಪಂದ್ಯದ ವೇಳಾಪಟ್ಟಿ ಅಂತಿಮಗೊಂಡ ಬಳಿಕ, ಜೂನ್‌ನಲ್ಲಿ ಲಂಕಾ ವಿರುದ್ಧ ಟಿ20 ಮತ್ತು ಟೆಸ್ಟ್ ಸರಣಿ ನಿಗದಿಯಾಗುವ ಸಾಧ್ಯತೆಯೂ ಇದೆ.

ಭಾರತ ತಂಡ ಆಗಸ್ಟ್ 4ರಿಂದ 5 ಟೆಸ್ಟ್ ಪಂದ್ಯಗಳನ್ನು ಟ್ರೆಂಟ್‌ಬ್ರಿಡ್ಜ್, ಲಾರ್ಡ್ಸ್, ಹೆಡಿಂಗ್ಲೆ, ಓವಲ್ ಮತ್ತು ಓಲ್ಡ್ ಟಾ್ರೆೆರ್ಡ್ ಮೈದಾನಗಳಲ್ಲಿ ಆಡಲಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡು 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಹೀಗಾಗಿ ಮುಂದಿನ ವರ್ಷ ಭಾರತ-ಇಂಗ್ಲೆಂಡ್ ನಡುವೆ ಒಟ್ಟು 9 ಟೆಸ್ಟ್ ಪಂದ್ಯಗಳು ನಡೆದಂತಾಗಲಿದೆ.

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ

ಟೆಸ್ಟ್ ದಿನಾಂಕ ಸ್ಥಳ

1. ಆ. 4-8 ನಾಟಿಂಗ್‌ಹ್ಯಾಂ

2. ಆ. 12-16 ಲಾರ್ಡ್ಸ್

3. ಆ. 25-29 ಲೀಡ್ಸ್

4. ಸೆ. 2-6 ಓವಲ್

5. ಸೆ. 10-14 ಮ್ಯಾಂಚೆಸ್ಟರ್