ಕ್ರೀಡೆ

Vaibhav Suryavanshi ವಿರುದ್ಧ ಕೇಳಿ ಬಂತು ಮತ್ತೊಂದು ವಂಚನೆ ಆರೋಪ; ಸಂಶಯ ವ್ಯಕ್ತಪಡಿಸಿ ಪಾಕ್​ ಮಾಜಿ ಕ್ರಿಕೆಟಿಗ

ನವದೆಹಲಿ: ಐಪಿಎಲ್​ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 1.10 ಕೋಟಿ ರೂಪಾಯಿಗೆ ಬಿಕರಿಯಾಗುವ ಮೂಲಕ ಟೂರ್ನಿಯ ಇತಿಹಾಸದಲ್ಲೇ ಕೋಟ್ಯಧಿಪತಿಯಾದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಯುವ ಕ್ರಿಕೆಟಿಗ ವೈಭವ್​ ಸೂರ್ಯವಂಶಿ (Vaibhav Suryavanshi) ಕ್ರೀಡಾ ಲೋಕದಲ್ಲಿ ಸಖತ್​ ಸೌಂಡ್​ ಮಾಡುತ್ತಿದ್ದಾರೆ.

ಈಚೆಗೆ ಮುಕ್ತಾಯಗೊಂಡ ಅಂಡರ್​-19 ಏಷ್ಯಾಕಪ್​ನಲ್ಲಿ ಭಾರತದ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ವೈಭವ್ (Vaibhav Suryavanshi) ​ ತನ್ನ ಹೊಡಿಬಡಿ ಆಟದ ಮೂಲಕ ಎದುರಾಳಿಗಳ ನಿದ್ದೆಗಡಿಸಿದ್ದರು. ಇದೀಗ ಈ ಯುವ ಕ್ರಿಕೆಟಿಗನ ವಿರುದ್ಧ ವಯಸ್ಸು ವಂಚನೆ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರು ಆರೋಪಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜುನೈದ್​ ಖಾನ್ (Junaid Khan)​, 13 ವರ್ಷದ ಬಾಲಕ ಇಷ್ಟು ದೊಡ್ಡ ಸಿಕ್ಸ್​ ಹೊಡೆಯಲು ಸಾಧ್ಯವಾ ಎಂದು ಪ್ರಶ್ನಿಸುವ ಮೂಲಕ ವೈಭವ್​ ವಯಸ್ಸಿಗೆ ಸಂಬಂಧಿಸಿದಂತೆ ಪರೋಕ್ಷವಾಗಿ ಆರೋಪವನ್ನು ಮಾಡಿದ್ದಾರೆ. ಇದರ ಜೊತೆಗೆ ವಿಡಿಯೋ ಒಂದನ್ನು ಪೋಸ್ಟ್​ ಮಾಡಿದ್ದಾರೆ.

ವೈಭವ್ ಸೂರ್ಯವಂಶಿ ಅಂಡರ್-19 ಏಷ್ಯಾಕಪ್‌ನಲ್ಲಿ 12 ಭರ್ಜರಿ ಸಿಕ್ಸರ್‌ಗಳೊಂದಿಗೆ ಒಟ್ಟು 176 ರನ್ ಕಲೆಹಾಕಿದ್ದರು. ಇದರಲ್ಲಿ 2 ಅರ್ಧಶತಕಗಳು ಸೇರಿದ್ದವು. ಈ ಎರಡು ಅರ್ಧಶತಕಗಳಲ್ಲಿ ಒಂದು ಅರ್ಧಶತಕ ಯುಎಇ ವಿರುದ್ಧ ಸಿಡಿದಿತ್ತು, ಈ ಇನ್ನಿಂಗ್ಸ್​ನಲ್ಲಿ ಅವರು 6 ಭರ್ಜರಿ ಸಿಕ್ಸರ್‌ಗಳನ್ನು ಹೊಡೆದಿದ್ದರು. ಇದಲ್ಲದೆ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧವೂ 5 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದೀಗ ವೈಭವ್ ಅವರ ಸಿಕ್ಸ್ ಹಿಟ್ಟಿಂಗ್ ಸಾಮರ್ಥ್ಯ​ದ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜುನೈದ್​ ಖಾನ್​ ಪ್ರಶ್ನೆಗಳನ್ನು ಎತ್ತಿದ್ದು, ಈ ಬಗ್ಗೆ ವೈಭವ್​ ಕುಟುಂಬಸ್ಥರು ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.

ಯಾವುದೇ ವಂಚನೆ ಎಸಗಿಲ್ಲ ಎಂದ ತಂದೆ 

ಐಪಿಎಲ್ ಮೆಗಾ ಹರಾಜು ಬಳಿಕ ವೈಭವ್​ ವಿರುದ್ಧ ವಯಸ್ಸು ವಂಚನೆ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಮಾತನಾಡಿದ್ದ ವೈಭ್​ ತಂದೆ ಸಂಜೀವ್​, ಆತ 8 ವರ್ಷದವನಿದ್ದಾಗ ಮೊದಲಿಗೆ ಬಿಸಿಸಿಐ ನಡೆಸಿದ ಬೋನ್​ ಪರೀಕ್ಷೆಯಲ್ಲಿ ಕಾಣಿಸಿಕೊಂಡನು. ಆತ ಭಾರತ  ಅಂಡರ್​-19 ಪರ ಆಡಿದ್ದಾನೆ. ಆತನನ್ನು ಮತ್ತೊಮ್ಮೆ ವಯಸ್ಸಿನ ಪರೀಕ್ಷೆಗೆ ಒಳಪಡಿಸಬಹುದು. ನಾವು ಯಾವುದಕ್ಕೂ ಹೆದರುವುದಿಲ್ಲ. ನಾವು ಯಾವುದೇ ವಂಚನೆ ಎಸಗಿಲ್ಲ ಎಂದು ವೈಭವ್​ ತಂದೆ ಸ್ಪಷ್ಟಪಡಿಸಿದ್ದಾರೆ.