ಬೆಂಗಳೂರು: ಕಿರಿಯರ ಕ್ರಿಕೆಟ್ ಏಷ್ಯಾಕಪ್ ಮತ್ತು ಸ್ಯಾಫ್ ಫುಟ್ಬಾಲ್ ಚಾಂಪಿಯನ್ಷಿಪ್ ಬಳಿಕ ಅಂಧರ ಟಿ20 ಏಷ್ಯಾಕಪ್ನಲ್ಲೂ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವೆ ಫೈನಲ್ ಮುಖಾಮುಖಿ ನಡೆಯಲಿದೆ. ಢಾಕಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ ನಡೆದ ತನ್ನ 3ನೇ ಹಾಗೂ ಕೊನೇ ಲೀಗ್ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶವನ್ನು 8 ವಿಕೆಟ್ಗಳಿಂದ ಸೋಲಿಸುವ ಮೂಲಕ ಭಾರತ ಪ್ರಶಸ್ತಿ ಸುತ್ತಿಗೇರಿದೆ. ಶುಕ್ರವಾರ ಭಾರತ-ಪಾಕ್ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡರೆ, ಬಾಂಗ್ಲಾ 7 ವಿಕೆಟ್ಗೆ 123 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ 3 ರನೌಟ್ ಮೂಲಕ ಫೀಲ್ಡಿಂಗ್ನಲ್ಲೂ ಗಮನಸೆಳೆಯಿತು. ಭಾರತ 13.2 ಓವರ್ಗಳಲ್ಲೇ 2 ವಿಕೆಟ್ಗೆ 124 ರನ್ ಗಳಿಸಿ ಜಯ ಸಾಧಿಸಿತು. ಕನ್ನಡಿಗ ಸುನೀಲ್ ರಮೇಶ್ 41 ಎಸೆತಗಳಲ್ಲಿ 63 ರನ್ ಸಿಡಿಸಿ ಚೇಸಿಂಗ್ ಸುಲಭಗೊಳಿಸಿದರು.
ಕಳೆದ ಪಂದ್ಯದಲ್ಲಿ ಪಾಕ್ ಎದುರು 1 ವಿಕೆಟ್ ಸೋಲು ಕಂಡಿದ್ದ ಭಾರತ, ಫೈನಲ್ನಲ್ಲಿ ಸೇಡು ತೀರಿಸಿಕೊಳ್ಳುವ ಅವಕಾಶ ಪಡೆದಿದೆ.