ಕ್ರೀಡೆ

ಪಾಕ್​ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು: ದೇಶಾದ್ಯಂತ ಸಂಭ್ರಮ- ಶುಭಾಶಯ ಸಲ್ಲಿಸಿದ ಪ್ರಧಾನಿ ಮೋದಿ, ರಾಹುಲ್​

ನವದೆಹಲಿ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ವಿಶ್ವ ಕ್ರಿಕೆಟ್​ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಭರ್ಜರಿ ಗೆಲುವಿನ ನಗೆ ಬೀರಿದ ಭಾರತಕ್ಕೆ ಶುಭಾಶಯಗಳ ಸುರಿಮಳೆಯೇ ಆಗುತ್ತಿದೆ.

ದೇಶಾದ್ಯಂತ ಈ ಜಯವನ್ನು ಭಾರತೀಯರು ವಿವಿಧ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ಭಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಪಾಕ್​ 19.5 ಓವರ್​ಗಳಲ್ಲಿ 147 ರನ್​ ಗಳಿಸಿ ಸರ್ವಪತನ ಕಂಡಿತು. ಪಾಕ್​ ನೀಡಿದ ಗುರಿ ಬೆನ್ನತ್ತಿದ ಭಾರತ 19.5 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 148 ರನ್​ ಕಲೆ ಹಾಕುವ ಮೂಲಕ ಸುಲಭವಾಗಿ ಗುರಿ ಮುಟ್ಟಿತು.

ಟೀಮ್​ ಇಂಡಿಯಾ ಪರ ಆರಂಭಿಕರಾಗಿ ನಾಯಕ ರೋಹಿತ್​ ಶರ್ಮಾ ಮತ್ತು ಕೆ.ಎಲ್​. ರಾಹುಲ್​ ಕಣಕ್ಕಿಳಿದರು. ಆದರೆ, ರಾಹುಲ್​ ಶೂನ್ಯಕ್ಕೆ ನಿರ್ಗಮಿಸುವ ಮೂಲಕ ಟೀಮ್​ ಇಂಡಿಯಾಗೆ ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ ರೋಹಿತ್​ ಶರ್ಮಾ ಕೇವಲ 12 ರನ್​ ಗಳಿಸಿ ಔಟಾಗಿದ್ದು, ಭಾರತ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು.

ಎರಡನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿದ ವಿರಾಟ್​ ಕೊಹ್ಲಿ ಕೆಲ ಹೊತ್ತು ಕ್ರೀಸ್​ನಲ್ಲಿ ನಿಂತು ಅಬ್ಬರಿಸಿದ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದ ಕೊಹ್ಲಿ 35 ರನ್​ ಗಳಿಸಿ ಔಟಾದರು. ಇದರ ಬೆನ್ನಲ್ಲೇ ಸೂರ್ಯಕುಮಾರ್​ ಯಾದವ್​ 18 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ರವೀಂದ್ರ ಜಡೇಜಾ ಮತ್ತು ಹಾರ್ದಿಕ್​ ಪಾಂಡ್ಯ ಉತ್ತಮ ಜೊತೆಯಾಟದ ಮೂಲಕ ಪಂದ್ಯದ ರನ್​ಗೆ ಚೇತರಿಕೆ ನೀಡಿದರು.

ಜಡೇಜಾ 35 ರನ್​ಗೆ ಔಟಾದರೆ, ಹಾರ್ದಿಕ್​ ಪಾಂಡ್ಯ 17 ಎಸೆತಗಳಲ್ಲಿ ಅಜೇಯ 33 ರನ್​ ಕಲೆಹಾಕುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಉಳಿದಂತೆ ದಿನೇಶ್​ ಕಾರ್ತಿಕ್​ 1 ರನ್​ ಗಳಿಸಿ ಅಜೇಯರಾಗಿ ಉಳಿದರು.

ಪಾಕ್​ ಪರ ಮೊಹಮ್ಮದ್​ ನವಾಜ್​ 3 ಹಾಗೂ ನಾಶೀಮ್​ ಶಾ 2 ವಿಕೆಟ್​ ಪಡೆದಿದ್ದನ್ನು ಬಿಟ್ಟರೆ ಉಳಿದ ಯಾವೊಬ್ಬ ಬೌಲರ್​ ಸಹ ಟೀಮ್​ ಇಂಡಿಯಾ ಆಟಗಾರರಿಗೆ ಸವಾಲಾಗಲಿಲ್ಲ.

ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಪಾಕ್​ಗೆ ಆರಂಭದಲ್ಲಿ ಆಘಾತವಾಗಿತ್ತು. ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ನಾಯಕ ಬಾಬರ್​ ಅಜಾಮ್​ ಕೇವಲ 10 ರನ್​ಗೆ ನಿರ್ಗಮಿಸುವ ಮೂಲಕ ಪಾಕ್​ಗೆ ಭಾರಿ ಹೊಡೆತ ನೀಡಿದ್ದರು. ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಫಖರ್​ ಅಹ್ಮದ್​ ಕೂಡ (10) ಭರವಸೆ ಉಳಿಸಿಕೊಳ್ಳಲಿಲ್ಲ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಇಫ್ತಿಕರ್​ ಅಹ್ಮದ್​, ಆರಂಭಿಕ ಆಟಗಾರ ಮೊಹಮ್ಮದ್​ ರಿಜ್ವಾನ್​ಗೆ ಸಾಥ್​ ನೀಡಿ, ಕೆಲ ಕಾಲ ಕ್ರೀಸ್​ನಲ್ಲಿ ಉಳಿದರು.

ಪಾಕ್​ ತಂಡದ ಮೊತ್ತ 87 ರನ್​ ಆಗಿದ್ದಾಗಿ ಇಫ್ತಿಕರ್ ಅಹ್ಮದ್​​ (28) ನಿರ್ಗಮಿಸಿದರೆ, ಅದರ ಬೆನ್ನಲ್ಲೇ ರಿಜ್ವಾನ್​ (43) ಸಹ ಹಿಂದಿರುಗಿದರು. ತಂಡದ ಮೊತ್ತ 94 ರನ್​ ಇದ್ದಾಗಲೇ ಪಾಕ್​ ತಂಡ ಪ್ರಮುಖ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಉಳಿದಂತೆ, ಖುಷ್ದಿಲ್ ಶಾ (2), ಶಾದಾಬ್ ಖಾನ್ (10), ಆಸಿಫ್ ಅಲಿ (9), ಮೊಹಮ್ಮದ್ ನವಾಜ್ (1) , ನಸೀಮ್ ಶಾ (0) ಪಾಕ್​ ತಂಡಕ್ಕೆ ನೆರವಾಗಲಿಲ್ಲ. ಕೊನೆಯಲ್ಲಿ ಅಬ್ಬರಿಸಿದ ಶಹನವಾಜ್ ದಹಾನಿ 6 ಎಸೆತಗಳಲ್ಲಿ 16 ರನ್​ ಗಳಿಸಿ ತಂಡಕ್ಕೆ ನೆರವಾದರೆ, ಹಾರಿಸ್ ರೌಫ್ 13 ರನ್​ ಗಳಿಸಿ ಅಜೇಯರಾಗಿ ಉಳಿದರು.

ಭಾರತದ ಪರ ಮಿಂಚಿನ ಬೌಲಿಂಗ್​ ದಾಳಿ ಮಾಡಿದ ಭುವನೇಶ್ವರ್​ ಪ್ರಮುಖ 4 ವಿಕೆಟ್​ ಕಬಳಿಸಿದರೆ, ಹಾರ್ದಿಕ್​ ಪಾಂಡ್ಯ 3 ವಿಕೆಟ್​ ಹಾಗೂ ಅರ್ಶದೀಪ್​ ಸಿಂಗ್​ 2 ವಿಕೆಟ್​ ಉರುಳಿಸುವ ಮೂಲಕ ಪಾಕ್ ಆಟಗಾರರನ್ನು ಕಾಡಿದರು. ಅವೇಶ್​ ಖಾನ್​ ಒಂದು ವಿಕೆಟ್​​ಗೆ ತೃಪ್ತಿಪಟ್ಟುಕೊಂಡರು. (ಏಜೆನ್ಸೀಸ್​)