ರೋಚಕ ಕಬ್ಬಡಿ ಫೈನಲ್‌ನಲ್ಲಿ ಭಾರತಕ್ಕೆ ಚಿನ್ನ
ಇರಾನ್ ವಿರುದ್ಧ ಏಷ್ಯನ್ ಗೇಮ್ಸ್ನಲ್ಲಿ ಭರ್ಜರಿ ಗೆಲುವು
Asian Games: ಆತಿಥೇಯ ಜಪಾನ್ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಇದೀಗ ಭಾರತೀಯ ಮಹಿಳಾ ಕಬಡ್ಡಿ ತಂಡವು ಸ್ವರ್ಣಕ್ಕೆ ಮುತ್ತಿಟ್ಟಿದೆ.
ಶನಿವಾರ ನಡೆದ ರೋಚಕ ಕಬ್ಬಡಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಇರಾನ್ ಪಡೆಯನ್ನು 37-34 ಅಂತರದಿಂದ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ. ಪಂದ್ಯವು ಕೊನೆಯವರೆಗೂ ತೀವ್ರ ಪೈಪೋಟಿಯಿಂದಲೇ ಸಾಗಿದ್ದು, ನಿರ್ಣಾಯಕ ಕ್ಷಣದಲ್ಲಿ ಭಾರತೀಯ ತಂಡವು ಪ್ರಾಬಲ್ಯ ಮೆರೆದು ಜಯ ಸಾಧಿಸಿತು. ಈ ಗೆಲುವಿನೊಂದಿಗೆ, ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಮಹಿಳಾ ಕಬಡ್ಡಿ ವಿಭಾಗದಲ್ಲಿ ಭಾರತವು ತನ್ನ ನಾಲ್ಕನೇ ಚಿನ್ನದ ಪದಕವನ್ನು ಗೆದ್ದಂತಾಗಿದೆ.
ಭಾರತೀಯ ಮಹಿಳಾ ತಂಡವು 2010, 2014 ಮತ್ತು 2022ರ ಏಷ್ಯನ್ ಗೇಮ್ಸ್‌ಗಳಲ್ಲೂ ಚಿನ್ನದ ಪದಕ ಗೆದ್ದಿದೆ. 2018ರಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇನ್ನು, 2022ರಲ್ಲಿ ಚೈನೀಸ್ ತೈಪೆ ವಿರುದ್ಧ 26-25 ಅಂತರದಿಂದ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದ ಮಹಿಳಾ ತಂಡ ಇದೀಗ ಈ ವರ್ಷದ ಕಬ್ಬಡಿ ಅಂತಿಮ ಹಣಾಹಣಿಯಲ್ಲೂ ಮೇಲುಗೈ ಸಾಧಿಸಿ, ಸ್ವರ್ಣವನ್ನು ಗೆದ್ದುಕೊಂಡಿದೆ.
ಇರಾನ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತೀಯ ತಂಡವು ಆರಂಭದಿಂದಲೇ ಮುನ್ನಡೆ ಸಾಧಿಸಿತು. ಮೊದಲಾರ್ಧದ ಅಂತ್ಯಕ್ಕೆ ಭಾರತ 22-16 ಅಂತರದ ಮುನ್ನಡೆಯನ್ನು ಹೊಂದಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಇರಾನ್ ತಂಡವು ಸಖತ್ ಪೈಪೋಟಿ ನೀಡಿತು. ಒಂದು ಹಂತದಲ್ಲಿ ಇರಾನ್ ಅಂತರವನ್ನು 27-26ಕ್ಕೆ ತಗ್ಗಿಸಿತು. ಇದರಿಂದಾಗಿ ಪಂದ್ಯದ ಅಂತಿಮ ನಿಮಿಷಗಳಲ್ಲಿ ಸೀಟಿನ ಅಂಚಿಗೆ ಬಂದ ವೀಕ್ಷಕರು, ಯಾರಿಗೆ ಜಯ ಎಂಬ ಕುತೂಹಲಹದಲ್ಲಿ ಕೂರುವಂತಾಯಿತು. ಒತ್ತಡವನ್ನು ಮೆಟ್ಟಿ ನಿಂತ ಭಾರತೀಯ ಆಟಗಾರ್ತಿಯರು, ಅಂತಿಮವಾಗಿ 37-34 ಅಂತರದಿಂದ ಗೆಲುವು ಸಾಧಿಸಿದರು.
ಮಹಿಳಾ ತಂಡ ಕಬ್ಬಡಿಯಲ್ಲಿ ಚಿನ್ನ ಗೆದ್ದ ಬಳಿಕ 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಒಟ್ಟು ಚಿನ್ನದ ಪದಕಗಳ ಸಂಖ್ಯೆ ಮೂರಕ್ಕೇರಿದೆ. ಇದಕ್ಕೂ ಮುನ್ನ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಚಿನ್ನದ ಪದಕ ಗೆದ್ದಿತು. ಅಂತೆಯೇ, ಶೂಟಿಂಗ್‌ನ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಸ್ಪರ್ಧೆಯಲ್ಲೂ ಭಾರತ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು. ಈಗ ಮಹಿಳೆಯರ ಕಬಡ್ಡಿ ವಿಭಾಗದ ಈ ಚಿನ್ನದ ಪದಕವು ಭಾರತಕ್ಕೆ ಮತ್ತೊಂದು ಮಹತ್ವದ ಗೆಲುವು ನೀಡಿರುವುದು ಸದ್ಯ ಭಾರತೀಯರ ಸಂತಸಕ್ಕೆ ಕಾರಣವಾಗಿದೆ,(ಏಜೆನ್ಸೀಸ್).