ಭುವನೇಶ್ವರ: ಭಾರತದ ಮಹಿಳಾ ತಂಡ ಎಫ್ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ಹಾಗೂ ವಿಶ್ವ ನಂ. 1 ನೆದರ್ಲೆಂಡ್ ತಂಡಕ್ಕೆ ಪೆನಾಲ್ಟಿ ಶೂಟೌಟ್ನಲ್ಲಿ ಸೋಲುಣಿಸಿ ಬೀಗಿದೆ. ಮಂಗಳವಾರ ನಡೆದ ಉಭಯ ತಂಡಗಳ 2ನೇ ಮುಖಾಮುಖಿ ನಿಗದಿತ ಸಮಯದ ವೇಳೆ 2-2ರಿಂದ ಡ್ರಾಗೊಂಡಿತು. ನಂತರ ನಡೆದ ಶೂಟೌಟ್ನಲ್ಲಿ ಭಾರತ 2-1ರಿಂದ ಗೆದ್ದುಕೊಂಡಿತು.
ಮೊದಲಾರ್ಧದಲ್ಲಿ ಭಾರತ ತಂಡ 0-2ರಿಂದ ಹಿನ್ನಡೆ ಅನುಭವಿಸಿತ್ತು. ನಂತರ ದೀಪಿಕಾ (35ನೇ ನಿಮಿಷ) ಮತ್ತು ಬಲ್ಜೀತ್ ಕೌರ್ (43) ಬಾರಿಸಿದ ಗೋಲಿನಿಂದ ಭಾರತ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಶೂಟೌಟ್ನಲ್ಲಿ ದೀಪಿಕಾ ಮತ್ತು ಮುಮ್ತಾಜ್ ಖಾನ್ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸುವಲ್ಲಿ ಯಶಸ್ವಿಯಾದರು. ಗೋಲು ಕೀಪರ್ ಸವಿತಾ ಎದುರಾಳಿಯ 4 ಹೊಡೆತಗಳನ್ನು ಯಶಸ್ವಿಯಾಗಿ ತಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರೊಂದಿಗೆ ಭಾರತ ತವರಿನ ಪ್ರೊ ಲೀಗ್ ಚರಣವನ್ನು ಗೆಲುವಿನೊಂದಿಗೆ ಮುಗಿಸಿತು. ತವರು ಚರಣದಲ್ಲಿ ಆಡಿದ ಒಟ್ಟು 8 ಪಂದ್ಯಗಳಲ್ಲಿ 3ರಲ್ಲಿ ಜಯಿಸಿದ ಭಾರತ, 5ರಲ್ಲಿ ಸೋಲು ಕಂಡಿತು.
ತಲಾ 1 ಲಕ್ಷ ರೂ. ಬಹುಮಾನ: ಒಲಿಂಪಿಕ್ಸ್ ಚಾಂಪಿಯನ್ ನೆದರ್ಲೆಂಡ್ ವಿರುದ್ಧ ಸಾಧಿಸಿದ ಅಮೋ ಗೆಲುವಿಗಾಗಿ ಭಾರತ ಮಹಿಳಾ ತಂಡದ ಪ್ರತಿ ಆಟಗಾರ್ತಿಗೆ ತಲಾ ಒಂದು ಲಕ್ಷ ರೂ. ಬಹುಮಾನ ವಿತರಿಸಲು ಹಾಕಿ ಇಂಡಿಯಾ (ಎಚ್ಐ) ನಿರ್ಧರಿಸಿದೆ. ತಂಡದ ತರಬೇತಿ ಬಳಗದ ಪ್ರತಿ ಸಿಬ್ಬಂದಿ ತಲಾ 50 ಸಾವಿರ ರೂ. ಪಡೆಯಲಿದ್ದಾರೆ ಎಂದು ಎಚ್ಐ ಘೋಷಿಸಿದೆ.