ಕ್ರೀಡೆ

ಭಾರತದ ಮಹಿಳೆಯರಿಗೆ ಏಷ್ಯನ್​ ಕಬಡ್ಡಿ ಕಿರೀಟ

ಟೆಹ್ರಾನ್​ (ಇರಾನ್​): ಭಾರತದ ಮಹಿಳೆಯರ ತಂಡ ಏಷ್ಯನ್​ ಕಬಡ್ಡಿ ಚಾಂಪಿಯನ್​ಷಿಪ್​ನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿ 5ನೇ ಬಾರಿ ಚಾಂಪಿಯನ್​ ಪಟ್ಟವೇರಿದೆ. ಈ ಮೂಲಕ ಮಹಿಳಾ ದಿನದಂದು ದೇಶದ ಮಹಿಳೆಯರಿಗೆ ವಿಶೇಷ ಉಡುಗೊರೆಯನ್ನು ನೀಡಿದೆ.

ಕನ್ನಡತಿ ತೇಜಸ್ವಿನಿ ಬಾಯಿ ಮಾರ್ಗದರ್ಶನದ ಭಾರತ ತಂಡ ಶನಿವಾರ ನಡೆದ ಫೈನಲ್​ ಪಂದ್ಯದಲ್ಲಿ ಆತಿಥೇಯ ಇರಾನ್​ ವಿರುದ್ಧ 32-25 ಅಂಕಗಳಿಂದ ಹೋರಾಟಯುತ ಗೆಲುವು ದಾಖಲಿಸಿತು. ಮಾಜಿ ಏಷ್ಯನ್​ ಗೇಮ್ಸ್​ ಚಾಂಪಿಯನ್​ ಇರಾನ್​ ತಂಡ ರಕ್ಷಣಾ ವಿಭಾಗದಲ್ಲಿ ಉತ್ತಮ ಪ್ರತಿರೋಧ ತೋರಿದ ಕಾರಣ ಭಾರತ ತಂಡ ಟೂರ್ನಿಯ ಪಂದ್ಯವೊಂದರಲ್ಲಿ ಮೊದಲ ಬಾರಿಗೆ 35 ಅಂಕಗಳ ಗಡಿ ದಾಟಲು ವಿಫಲವಾಯಿತು. ಇರಾನ್​ ತಂಡ ರಜತ ಪದಕಕ್ಕೆ ತೃಪ್ತಿಪಟ್ಟರೆ, ಬಾಂಗ್ಲಾದೇಶ, ನೇಪಾಳ ತಂಡಗಳು ಕಂಚಿನ ಪದಕ ಗಳಿಸಿದವು.

ಮಹಾರಾಷ್ಟ್ರದ ಸೋನಾಲಿ ಶಿಂಗಟೆ ನೇತೃತ್ವದ ಭಾರತ ಸತತ 2ನೇ ಬಾರಿ ಏಷ್ಯನ್​ ಚಾಂಪಿಯನ್​ಷಿಪ್​ ಜಯಿಸಿತು. ಈ ಮೂಲಕ ಮುಂಬರುವ ಕಬಡ್ಡಿ ವಿಶ್ವಕಪ್​ಗೆ ಉತ್ತಮ ಸಿದ್ಧತೆ ನಡೆಸಿದೆ. ಭಾರತ ಈ ಮುನ್ನ 2005, 2007, 2008, 2017ರಲ್ಲಿ ಏಷ್ಯನ್​ ಕಬಡ್ಡಿ ಕಿರೀಟ ಗೆದ್ದಿತ್ತು.