ಬೆಂಗಳೂರು: ಭಾರತದ ಪುರುಷರ ಕ್ರಿಕೆಟ್ ತಂಡ ಗೆದ್ದಾಗ ಹೊಗಳಿಕೆಯನ್ನು ಪಡೆಯುವಷ್ಟೇ ಸೋತಾಗ ತೆಗಳಿಕೆಗೂ ಗುರಿಯಾಗುತ್ತದೆ. ಆದರೆ ಮಹಿಳಾ ಕ್ರಿಕೆಟ್ ತಂಡ ಇದುವರೆಗೆ ಆ ರೀತಿಯ ಟೀಕೆಗಳನ್ನು ಎದುರಿಸಿರಲಿಲ್ಲ. ಇದೀಗ ತವರಿನ ಏಕದಿನ ವಿಶ್ವಕಪ್ನಲ್ಲಿ ಗೆಲ್ಲಬಹುದಾಗಿದ್ದ ಸತತ 3 ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕ ಭಾರತದ ಮಹಿಳೆಯರೂ ಕ್ರಿಕೆಟ್ ಪ್ರೇಮಿಗಳಿಂದ ಕಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಬಿಸಿಸಿಐ, ಮಹಿಳಾ ಕ್ರಿಕೆಟ್ ಅಭಿವೃದ್ಧಿಗೂ ಶ್ರಮಿಸುತ್ತಿದೆ. ಬಹುತೇಕ ಸಮಾನ ವೇತನ ಮತ್ತು ಬಹುಮಾನವನ್ನೂ ವಿತರಿಸಲಾಗುತ್ತಿದೆ. ಆದರೆ ಮಹಿಳಾ ಕ್ರಿಕೆಟ್ ತಂಡದಿಂದ ವಿಶ್ವ ಕ್ರಿಕೆಟ್ನಲ್ಲಿ ಭಾರತದ ಪುರುಷರ ತಂಡದಷ್ಟೇ ವರ್ಚಸ್ವಿ ನಿರ್ವಹಣೆ ಬಾರದಿರುವ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಭಾರತ ತಂಡ ವಿಶ್ವಕಪ್ನಲ್ಲಿ ಏಷ್ಯಾದ ತಂಡಗಳಾದ ಶ್ರೀಲಂಕಾ, ಪಾಕಿಸ್ತಾನ ವಿರುದ್ಧ ಗೆದ್ದು ಉತ್ತಮ ಆರಂಭವನ್ನೇ ಕಂಡಿತ್ತು. ಆದರೆ ನಂತರ ದಣ ಆಫ್ರಿಕಾ, ಆಸ್ಟ್ರೆಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಗೆಲ್ಲುವ ಸ್ಥಿತಿಯಲ್ಲಿದ್ದ ಪಂದ್ಯಗಳಲ್ಲಿ ಮುಗ್ಗರಿಸಿದ ರೀತಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇಂಗ್ಲೆಂಡ್ ಎದುರು 289 ರನ್ ಗುರಿ ಬೆನ್ನಟ್ಟುತ್ತಿದ್ದ ಭಾರತಕ್ಕೆ ಕೊನೇ 5 ಓವರ್ಗಳಲ್ಲಿ 36 ರನ್ಗಳಷ್ಟೇ ಬೇಕಿತ್ತು ಮತ್ತು 6 ವಿಕೆಟ್ಗಳೂ ಕೈಯಲ್ಲಿದ್ದವು. ಆದರೆ ನಂತರ 31 ರನ್ ಮಾತ್ರ ಗಳಿಸಿದ ಭಾರತ ಮತ್ತೆ 4 ವಿಕೆಟ್ಗಳನ್ನೂ ಕಳೆದುಕೊಂಡು ಸೋಲು ಅನುಭವಿಸಿತು.
ಇದಕ್ಕೆ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧವೂ 251 ರನ್ಗಳನ್ನು ರಸಿಕೊಳ್ಳುವ ಉತ್ತಮ ಅವಕಾಶ ಭಾರತದ ಮುಂದಿತ್ತು. 81 ರನ್ಗಳಿಗೆ ದ. ಆಫ್ರಿಕಾದ 5 ವಿಕೆಟ್ಗಳನ್ನೂ ಕಬಳಿಸಿತ್ತು. ಆದರೆ ಸ್ಲಾಗ್ ಓವರ್ಗಳಲ್ಲಿ ಎರಾಬಿರ್ರಿ ಬೌಲಿಂಗ್ನಿಂದ ಎಡವಿತು. ಆಸೀಸ್ ಎದುರು 330 ರನ್ಗಳ ಬೃಹತ್ ಮೊತ್ತವನ್ನು ರಕ್ಷಿಸಿಕೊಳ್ಳಲು ಭಾರತ ವಿಫಲವಾಗಿತ್ತು. 350ಕ್ಕಿಂತ ಹೆಚ್ಚಿನ ಮೊತ್ತ ಗಳಿಸುವ ಅವಕಾಶ ಕೈಚೆಲ್ಲಿದ್ದ ಭಾರತ, ನಂತರ ಆಸೀಸ್ ಬಾಲಂಗೋಚಿಗಳಿಗೆ ಕಡಿವಾಣ ಹಾಕಲು ವಿಫಲವಾಗಿತ್ತು.
ಇನ್ಸ್ಟಾಗ್ರಾಮ್ ರೀಲ್ಸ್ಗಳಲ್ಲಿ ಗಮನಸೆಳೆಯುವ ಭಾರತ ತಂಡದ ಆಟಗಾರ್ತಿಯರು, ಮೈದಾನದಲ್ಲಿ ಒತ್ತಡವನ್ನು ಎದುರಿಸಲಾಗದೆ ಮುಗ್ಗರಿಸುತ್ತಿರುವುದು ಟೀಕೆಗಳಿಗೆ ಗುರಿಯಾಗಿದೆ. ಹಲವು ರೀತಿಯ ಟ್ರೋಲ್ಗಳನ್ನೂ ಹರ್ಮಾನ್ಪ್ರೀತ್ ಕೌರ್ ಪಡೆ ಎದುರಿಸುತ್ತಿದೆ. ಕೊನೇ 2 ಲೀಗ್ ಪಂದ್ಯಗಳಲ್ಲಿ ನೈಜ ನಿರ್ವಹಣೆ ತೋರುವ ಮೂಲಕ ಭಾರತದ ಮಹಿಳೆಯರು, ಬ್ಯಾಟ್-ಚೆಂಡಿನ ಮೂಲಕವೇ ಟೀಕೆಗಳಿಗೆ ದಿಟ್ಟ ಉತ್ತರವನ್ನು ನೀಡಬೇಕಾಗಿದೆ.
ಹರ್ಮಾನ್ಪ್ರೀತ್ಗೆ ಒತ್ತಡ
ಪುರುಷರ ಕ್ರಿಕೆಟ್ ತಂಡದ ಒಂದೊಂದು ಸರಣಿಯಲ್ಲೂ ನಾಯಕನ ನಿರ್ವಹಣೆಯನ್ನು ಅಳತೆ ಮಾಡಲಾಗುತ್ತದೆ. ಆದರೆ ಮಹಿಳಾ ತಂಡದ ನಾಯಕಿಯಾಗಿ ಹರ್ಮಾನ್ಪ್ರೀತ್ ಕೌರ್ ಬಲಿಷ್ಠ ತಂಡಗಳ ಎದುರು ದೊಡ್ಡ ಮಟ್ಟದ ಯಶಸ್ಸು ಕಾಣದ ನಡುವೆಯೂ ನಾಯಕತ್ವ ಉಳಿಸಿಕೊಳ್ಳುತ್ತ ಬಂದಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್ನಲ್ಲಿ ಭಾರತವನ್ನು ನಾಕೌಟ್ ಹಂತಕ್ಕೇರಿಸಲು ವಿಫಲರಾದರೂ ನಾಯಕತ್ವ ಉಳಿಸಿಕೊಂಡಿದ್ದ ಹರ್ಮಾನ್ಪ್ರೀತ್, ಈ ಬಾರಿ ತವರಿನಲ್ಲಿ ತಂಡವನ್ನು ಸೆಮಿಫೈನಲ್ಗೇರಿಸಲು ಶಕ್ತರಾಗದಿದ್ದರೆ, ಪಟ್ಟ ಕಳೆದುಕೊಳ್ಳುವುದು ಖಚಿತವೆನಿಸಿದೆ. ನ್ಯೂಜಿಲೆಂಡ್, ಬಾಂಗ್ಲಾದೇಶ ವಿರುದ್ಧದ ಉಳಿದ 2 ಪಂದ್ಯಗಳಲ್ಲಿ ಗೆಲುವು ದಾಖಲಿಸುವ ಒತ್ತಡ ಈಗ ಭಾರತದ ಮೇಲಿದೆ.
ಸ್ತ್ರೀದ್ವೇಷದ ನಿಂದನೆಗಳಿಗೆ ಆಕ್ಷೇಪ
ಭಾರತ ಮಹಿಳಾ ತಂಡದ ವೈಫಲ್ಯದ ಬಗೆಗಿನ ಕೆಲ ಆರೋಗ್ಯಕರ ಟೀಕೆಗಳ ನಡುವೆ, ಸಾಮಾಜಿಕ ಜಾಲತಾಣದಲ್ಲಿ ಸ್ತ್ರೀದ್ವೇಷದ ನಿಂದನೆಗಳೂ ಕೇಳಿಬಂದಿವೆ. ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತಗೊಳಿಸುವ, ಸಮಾನ ವೇತನ-ಬಹುಮಾನ ನೀಡಿದ ಬಗೆಗಿನ ಟೀಕೆಗಳಿಗೆ ಆಕ್ಷೇಪಗಳೂ ವ್ಯಕ್ತವಾಗಿವೆ. ಆಟಗಾರ್ತಿಯರನ್ನು ವೈಯಕ್ತಿಕವಾಗಿ ನಿಂದಿಸುತ್ತಿರುವ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಕಾರ ಆಕಾಶ್ ಚೋಪ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೀಕೆಗಳಿಂದ ಯಾರೂ ಹೊರತಲ್ಲ, ಆದರೆ ಅದರ ಭಾಷೆ ಮತ್ತು ಮನಸ್ಥಿತಿಯ ಬಗ್ಗೆ ಎಚ್ಚರಿಕೆ ಅಗತ್ಯ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.
ಬಿಸಿಸಿಐ ಬಗ್ಗೆಯೂ ಗರಂ
ವುಮೆನ್ಸ್ ಪ್ರೀಮಿಯರ್ ಲೀಗ್ ಆರಂಭಿಸುವ ಮೂಲಕ ಬಿಸಿಸಿಐ, ಇತ್ತೀಚೆಗೆ ಮಹಿಳಾ ಕ್ರಿಕೆಟ್ ಅಭಿವೃದ್ಧಿಗೆ ನೆರವಾಗಿದೆ. ಆದರೆ ಬಿಸಿಸಿಐ ಮಹಿಳಾ ಕ್ರಿಕೆಟ್ ಅಭಿವೃದ್ಧಿಯಲ್ಲಿ ಆಸ್ಟ್ರೆಲಿಯಾದಷ್ಟು ಪ್ರಾಮುಖ್ಯತೆಯನ್ನು ನೀಡಿಲ್ಲ. ಆಸೀಸ್ ಮಾದರಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ಅಭಿವೃದ್ಧಿ ಅಗತ್ಯವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಇನ್ನೊಂದೆಡೆ, ಜಯ್ ಷಾ ಬಿಸಿಸಿಐನಿಂದ ಹೊರನಡೆದ ಬಳಿಕ ಮಹಿಳಾ ಕ್ರಿಕೆಟ್ಗೆ ಹಿಂದಿನಷ್ಟು ಪ್ರೋತ್ಸಾಹ ದೊರೆಯುತ್ತಿಲ್ಲ ಎಂದೂ ಆರೋಪಿಸಲಾಗುತ್ತಿದೆ.
ಸೋಲಿನ ಹೊಣೆ ಹೊತ್ತ ಸ್ಮೃತಿ
ಇಂಗ್ಲೆಂಡ್ ವಿರುದ್ಧದ ಚೇಸಿಂಗ್ ವೇಳೆ ಸ್ಮೃತಿ ಮಂದನಾ 88 ರನ್ ಗಳಿಸಿ ಔಟಾದ ಬಳಿಕ ಭಾರತದ ಕುಸಿತ ಆರಂಭಗೊಂಡಿತ್ತು. ಸ್ಮೃತಿ ಕ್ರೀಸ್ನಲ್ಲಿದ್ದಾಗ ಭಾರತಕ್ಕೆ ಕೊನೇ 9 ಓವರ್ಗಳಲ್ಲಿ 55 ರನ್ಗಳಷ್ಟೇ ಗಳಿಸುವ ಸುಲಭ ಸವಾಲಿತ್ತು. ಆದರೆ ದೊಡ್ಡ ಹೊಡೆತಕ್ಕೆ ಯತ್ನಿಸಿದ ಸ್ಮೃತಿ, ಬೌಂಡರಿ ಗೆರೆಗಿಂತ 5 ಮೀಟರ್ ಮುಂದೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು. ಹೀಗಾಗಿ ತಂಡದ ಸೋಲಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುವೆ ಎಂದು ಉಪನಾಯಕಿಯೂ ಆಗಿರುವ ಸ್ಮೃತಿ ಮಂದನಾ ಹೇಳಿದ್ದಾರೆ. ತಂಡದ ಇತರ ಆಟಗಾರ್ತಿಯರ ಹೊಡೆತಗಳ ಆಯ್ಕೆಯನ್ನೂ ಅವರು ದೂರಿದ್ದಾರೆ. ಮತ್ತೊಂದೆಡೆ ನಾಯಕಿ ಹರ್ಮಾನ್ಪ್ರೀತ್ ಕೌರ್ ಕೂಡ, ಸ್ಮೃತಿ ಮಂದನಾ ವಿಕೆಟ್ ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು ಎಂದು ಹೇಳಿದ್ದಾರೆ.