ಕ್ರೀಡೆ

ಭಾರತ ಫುಟ್‌ಬಾಲ್ ತಂಡದ ಮಾಜಿ ನಾಯಕ ಚಾಪ್‌ಮನ್ ಇನ್ನಿಲ್ಲ

ಬೆಂಗಳೂರು: ಭಾರತ ಫುಟ್‌ಬಾಲ್ ತಂಡದ ಮಾಜಿ ನಾಯಕ ಹಾಗೂ ಮಿಡ್‌ಫೀಲ್ಡರ್ ಕಾರ್ಲ್‌ಟನ್ ಚಾಪ್‌ಮನ್ ಸೋಮವಾರ ಹೃದಯಾಘಾತದಿಂದ ನಿಧನರಾದರು. ಭಾರತದ ಫುಟ್‌ಬಾಲ್ ದಂತಕಥೆಗಳಾದ ಬೈಚುಂಗ್ ಭುಟಿಯಾ ಹಾಗೂ ಐಎಂ ವಿಜಯನ್ ಅವರ ಸಮಕಾಲೀನರಾದ ಚಾಪ್‌ಮನ್‌ಗೆ 49 ವರ್ಷ ವಯಸ್ಸಾಗಿತ್ತು. ಭಾನುವಾರ ರಾತ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾತ್ತು. ಮೃತರು ಪತ್ನಿ, ಮಗ ಹಾಗೂ ಮಗಳನ್ನು ಅಗಲಿದ್ದಾರೆ. 1995ರಿಂದ 2001ರವರೆಗೆ ಭಾರತ ತಂಡದ ಸದಸ್ಯರಾಗಿದ್ದರು.

ಬೆಂಗಳೂರಿನ ಆಸ್ಟಿನ್ ನಗರದ ನಿವಾಸಿಯಾಗಿದ್ದ ಚಾಪ್‌ಮನ್, 1997ರ ಸ್ಯಾಫ್ ಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಈಸ್ಟ್ ಬೆಂಗಾಲ್ ತಂಡ ಪ್ರತಿನಿಧಿಸಿದ್ದರು. 1990ರ ದಶಕದಲ್ಲಿ ಟಾಟಾ ಫುಟ್‌ಬಾಲ್ ಅಕಾಡೆಮಿಯಲ್ಲಿ ಪಳಗಿದ ಚಾಪ್‌ಮನ್, 1993ರಲ್ಲಿ ಈಸ್ಟ್ ಬೆಂಗಾಲ್ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಅದೇ ವರ್ಷ ಏಷ್ಯಾಕಪ್ ವಿಜೇತರ ಎದುರು ನಡೆದ ಪಂದ್ಯದಲ್ಲಿ ಇರಾಕ್ ಕ್ಲಬ್ ಅಲ್ ಜಾವಾರ ಎದುರು ಹ್ಯಾಟ್ರಿಕ್ ಗೋಲು ಬಾರಿಸಿದ್ದರು. ವಿಜಯನ್, ಭುಟಿಯಾ ಜತೆಗೂಡಿ 14 ಟ್ರೋಫಿ ಜಯಿಸಿದ್ದರು. 2001ರಲ್ಲಿ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದರು.

ಬಳಿಕ ಐ-ಲೀಗ್‌ನ 2ನೇ ಡಿವಿಷನ್‌ನಲ್ಲಿ ಆಡುತ್ತಿದ್ದ ಟಾಟಾ ಫುಟ್‌ಬಾಲ್ ಅಕಾಡೆಮಿ, ಶಿಲ್ಲಾಂಗ್‌ನ ರಾಯಲ್ ವಾಹಿಂಗ್ಡೊ, ದೆಹಲಿಯ ಸುದೇವಾ ಮೂನ್‌ಲೈನ್ ಎಫ್ ಸಿ ತಂಡಗಳಿಗೆ ತರಬೇತಿ ನೀಡಿದ್ದರು.