ಕ್ರೀಡೆ

ಚೆಸ್​ ಒಲಿಂಪಿಯಾಡ್​ನಲ್ಲಿ ಭಾರತಕ್ಕೆ ಐತಿಹಾಸಿಕ ಅವಳಿ ಸ್ವರ್ಣ ಸಂಭ್ರಮ

ಬುಡಾಪೆಸ್ಟ್​ (ಹಂಗೆರಿ): ಯುವ ಚದುರಂಗ ತಾರೆಯರಿಂದ ಕೂಡಿದ ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು 45ನೇ ಆವೃತ್ತಿಯ ಚೆಸ್​ ಒಲಿಂಪಿಯಾಡ್​ನಲ್ಲಿ ಮೊಟ್ಟಮೊದಲ ಬಾರಿಗೆ ಸ್ವರ್ಣ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮೆರೆದಿವೆ. ಭಾರತದ ಪುರುಷರ ತಂಡ ಒಟ್ಟು 11 ಸುತ್ತಿನ ಪಂದ್ಯಗಳ ಅಂತ್ಯಕ್ಕೆ 21 ಅಂಕಗಳನ್ನು ಕಲೆಹಾಕುವ ಮೂಲಕ ಬಂಗಾರದ ಪದಕಕ್ಕೆ ಕೊರಳೊಡ್ಡಿದರೆ, ಮಹಿಳಾ ತಂಡ ಒಟ್ಟು 19 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿತು. ಈ ಮೂಲಕ ಭಾರತ ಕೂಟದಲ್ಲಿ ಅವಳಿ ಸ್ವರ್ಣ ಪದಕದ ಸಂಭ್ರಮ ಕಂಡಿತು.

ಭಾರತದ ಪುರುಷರ ತಂಡ ಭಾನುವಾರ ನಡೆದ ಕೊನೇ ಸುತ್ತಿನ ಪಂದ್ಯದಲ್ಲಿ ಸ್ಲೊವೇನಿಯಾ ವಿರುದ್ಧ 3.5&0.5 ಅಂಕಗಳಿಂದ ಗೆಲುವು ಸಾಧಿಸಿ ಸ್ವರ್ಣ ಪದಕ ಗೆಲುವು ಖಚಿತಪಡಿಸಿಕೊಂಡಿತು. ದೊಮ್ಮರಾಜು ಗುಕೇಶ್​, ಆರ್​. ಪ್ರಜ್ಞಾನಂದ ಮತ್ತು ಅರ್ಜುನ್​ ಇರಿಗೈಸಿ ಗೆಲುವು ಸಾಧಿಸಿದರೆ, ವಿದಿತ್​ ಗುಜರಾತಿ ಡ್ರಾಕ್ಕೆ ತೃಪ್ತಿಪಟ್ಟರು. ಅನುಭವಿ ಆಟಗಾರ ಪಿ. ಹರಿಕೃಷ್ಣ ಕೊನೇ ಸುತ್ತಿನ ಕಾದಾಟದಿಂದ ವಿರಾಮ ಪಡೆದರು. ಇದಕ್ಕೆ ಮುನ್ನ 10ನೇ ಸುತ್ತಿನಲ್ಲಿ ಭಾರತ ತಂಡ ಅಮೆರಿಕ ವಿರುದ್ಧ 2.5&1.5 ಅಂತರದಿಂದ ಗೆಲುವು ಸಾಧಿಸಿತ್ತು.

ಮಹಿಳಾ ವಿಭಾಗದಲ್ಲಿ ಭಾರತ ತಂಡ ನಿರ್ಣಾಯಕ ಹೋರಾಟದಲ್ಲಿ ಅಜರ್​ಬೈಜಾನ್​ ವಿರುದ್ಧ 3.5-0.5 ಅಂತರದಿಂದ ಜಯ ಸಾಧಿಸಿ ಸ್ವರ್ಣ ಒಲಿಸಿಕೊಂಡಿತು. ದ್ರೋಣವಲ್ಲಿ ಹರಿಕಾ, ದಿವ್ಯಾ ದೇಶ್​ಮುಖ್​ ಮತ್ತು ವಂತಿಕಾ ಅಗರ್ವಾಲ್​ ಅಮೋ ಗೆಲುವು ಸಾಧಿಸಿದರೆ, ಆರ್​. ವೈಶಾಲಿ ಡ್ರಾಕ್ಕೆ ತೃಪ್ತಿಪಟ್ಟರು. 10ನೇ ಸುತ್ತಿನಲ್ಲಿ ಭಾರತ ತಂಡ ಚೀನಾ ವಿರುದ್ಧ 2.5&1.5 ಅಂಕಗಳಿಂದ ಜಯ ದಾಖಲಿಸಿತ್ತು.

ಭಾರತ ತಂಡ ಒಟ್ಟು 11 ಸುತ್ತಿನ ಪಂದ್ಯಗಳಲ್ಲಿ 10ರಲ್ಲಿ ಗೆಲುವು ಸಾಧಿಸಿದರೆ, ಹಾಲಿ ಚಾಂಪಿಯನ್​ ಆಗಿದ್ದ ಉಜ್ಬೇಕಿಸ್ತಾನ ವಿರುದ್ಧದ ಏಕೈಕ ಪಂದ್ಯದಲ್ಲಿ ಡ್ರಾಕ್ಕೆ ತೃಪ್ತಿಪಟ್ಟಿತ್ತು. ಮಹಿಳಾ ತಂಡ 11ರಲ್ಲಿ 9 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ, ಅಮೆರಿಕ ವಿರುದ್ಧ ಡ್ರಾಕ್ಕೆ ತೃಪ್ತಿಪಟ್ಟು, ಪೋಲೆಂಡ್​ ವಿರುದ್ಧದ ಏಕೈಕ ಸೋಲು ಅನುಭವಿಸಿತ್ತು.

ಇತಿಹಾಸ ಸೃಷ್ಟಿಸಿದವರು

ಪುರುಷರ ತಂಡ: ಡಿ. ಗುಕೇಶ್​, ಆರ್​. ಪ್ರಜ್ಞಾನಂದ, ವಿದಿತ್​ ಗುಜರಾತಿ, ಅರ್ಜುನ್​ ಇರಿಗೈಸಿ, ಪಿ. ಹರಿಕೃಷ್ಣ. ನಾಯಕ: ಶ್ರೀನಾಥ್​ ನಾರಾಯಣನ್​.

ಮಹಿಳಾ ತಂಡ: ದ್ರೋಣವಲ್ಲಿ ಹರಿಕಾ, ಆರ್​. ವೈಶಾಲಿ, ದಿವ್ಯಾ ದೇಶ್​ಮುಖ್​, ತಾನಿಯಾ ಸಚ್​ದೇವ್​, ವಂತಿಕಾ ಅಗರ್ವಾಲ್​. ನಾಯಕ: ಅಭಿಜಿತ್​ ಕುಂಟೆ.

4 ವೈಯಕ್ತಿಕ ಚಿನ್ನದ ಗರಿ

ಭಾರತ ತಂಡ ವಿಭಾಗದ ಅವಳಿ ಚಿನ್ನದೊಂದಿಗೆ ವೈಯಕ್ತಿಕವಾಗಿಯೂ 4 ಸ್ವರ್ಣ ಗೆದ್ದುಕೊಂಡಿತು. ಡಿ ಗುಕೇಶ್​ ಬೋರ್ಡ್​&1, ಅರ್ಜುನ್​ ಇರಿಗೈಸಿ ಬೋರ್ಡ್​&3, ದಿವ್ಯಾ ದೇಶ್​ಮುಖ್​ ಬೋರ್ಡ್​&3 ಮತ್ತು ವಂತಿಕಾ ಅಗರ್ವಾಲ್​ ಬೋರ್ಡ್​&4ರಲ್ಲಿ ಸ್ವರ್ಣ ಪದಕ ಒಲಿಸಿಕೊಂಡರು.

3 ಕಂಚು ಗೆದ್ದಿದ್ದೇ ಹಿಂದಿನ ಸಾಧನೆ

ಭಾರತ ತಂಡ 1924ರಿಂದ ನಡೆಯುತ್ತಿರುವ ಚೆಸ್​ ಒಲಿಂಪಿಯಾಡ್​ನ ಹಿಂದಿನ 44 ಆವೃತ್ತಿಗಳಲ್ಲಿ 3 ಬಾರಿ ಕಂಚಿನ ಪದಕ ಜಯಿಸಿದ್ದೇ ಶ್ರೇಷ್ಠ ಸಾಧನೆ ಎನಿಸಿತ್ತು. 2014 ಮತ್ತು 2022ರರಲ್ಲಿ ಭಾರತ ಪುರುಷರ ವಿಭಾಗದಲ್ಲಿ ಕಂಚು ಗೆದ್ದಿದ್ದರೆ, ಮಹಿಳಾ ವಿಭಾಗದಲ್ಲಿ 2022ರಲ್ಲಿ ಕಂಚು ಜಯಿಸಿತ್ತು. 2022ರಲ್ಲಿ ತವರು ನೆಲ ಚೆನ್ನೆ$ನಲ್ಲೇ ನಡೆದ ಕೂಟದಲ್ಲಿ ಭಾರತ ಪುರುಷ&ಮಹಿಳಾ ವಿಭಾಗದಲ್ಲಿ ಅವಳಿ ಕಂಚಿನ ಸಾಧನೆ ಮಾಡಿತ್ತು.

ಇದು ಚೆಸ್​ ಒಲಿಂಪಿಕ್ಸ್​!

ಒಲಿಂಪಿಕ್ಸ್​ಗೂ, ಒಲಿಂಪಿಯಾಡ್​ಗೂ ಯಾವುದೇ ಸಂಬಂಧವಿಲ್ಲ. ಆದರೆ ಇದು ಚೆಸ್​ ಕ್ರೀಡೆಯ ಒಲಿಂಪಿಕ್ಸ್​ ಇದ್ದಂತೆ. ಚೆಸ್​ ಆಟವನ್ನು ಒಲಿಂಪಿಕ್ಸ್​ಗೆ ಸೇರಿಸುವ ಪ್ರಯತ್ನ ವಿಲವಾದ ಬಳಿಕ 1924ರಲ್ಲಿ ಇದನ್ನು ಆರಂಭಿಸಲಾಯಿತು. ಆ ವರ್ಷದ ಪ್ಯಾರಿಸ್​ ಒಲಿಂಪಿಕ್ಸ್​ ಸಮಯದಲ್ಲಿ ಅಲ್ಲೇ ಮೊದಲ ಚೆಸ್​ ಒಲಿಂಪಿಯಾಡ್​ ನಡೆಸಲಾಗಿತ್ತು. ಇಲ್ಲೂ ಮೊದಲ 3 ಸ್ಥಾನ ಪಡೆದ ತಂಡಗಳಿಗೆ ಚಿನ್ನ, ಬೆಳ್ಳಿ, ಕಂಚಿನ ಪದಕ ನೀಡಲಾಗುತ್ತದೆ. ಜತೆಗೆ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಪ್ರತಿ ಬೋರ್ಡ್​ನಲ್ಲಿ (ಒಟ್ಟು 4) ಮೊದಲ ಸ್ಥಾನ ಪಡೆದವರಿಗೆ ಚಿನ್ನದ ಪದಕ ನೀಡಲಾಗುತ್ತದೆ. 1950ರಿಂದ ಪ್ರತಿ 2 ವರ್ಷಕ್ಕೊಮ್ಮೆ ಈ ಟೂರ್ನಿ ನಡೆಯುತ್ತ ಬಂದಿದೆ.

*ಭಾರತದ ಪುರುಷ, ಮಹಿಳಾ ತಂಡಗಳಿಗೆ ಅಭಿನಂದನೆ. ಇದೊಂದು ಐತಿಹಾಸಿಕ ಸಾಧನೆ ಮತ್ತು ಸ್ಫೂರ್ತಿದಾಯಕವಾಗಿದೆ. ಡಿ. ಗುಕೇಶ್​, ಅರ್ಜುನ್​ ಇರಿಗೈಸಿ ಆಟ ಸೆನ್ಸೇಶನಲ್​ ಆಗಿತ್ತು. ಮಹಿಳೆಯರಲ್ಲಿ ದಿವ್ಯಾ ದೇಶ್​ಮುಖ್​ ಮತ್ತು ವಂತಿಕಾ ಅಗರ್ವಾಲ್​ ಆಟಕ್ಕೆ ವಿಶೇಷ ಮೆಚ್ಚುಗೆ ನೀಡಬೇಕು.

| ವಿಶ್ವನಾಥನ್​ ಆನಂದ್​, 5 ಬಾರಿಯ ಚೆಸ್​ ವಿಶ್ವ ಚಾಂಪಿಯನ್​