ನವದೆಹಲಿ: ಭಾರತೀಯ ಹಾಕಿ ತಂಡದ "ಗೋಡೆ' ಎಂದೇ ಖ್ಯಾತರಾದ ಗೋಲು ಕೀಪರ್ ಪಿಆರ್ ಶ್ರೀಜೇಶ್, ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆಲುವಿನೊಂದಿಗೆ ವಿದಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ 16 ನಂಬರ್ ಜೆರ್ಸಿಯನ್ನೂ ನಿವೃತ್ತಿಗೊಳಿಸಿ ವಿಶೇಷ ಗೌರವವನ್ನು ಅರ್ಪಿಸಲು ಹಾಕಿ ಇಂಡಿಯಾ ನಿರ್ಧರಿಸಿದೆ. ಜತೆಗೆ ಶ್ರೀಜೇಶ್ ಅವರನ್ನು ಜೂನಿಯರ್ ಹಾಕಿ ತಂಡದ ಮುಖ್ಯ ಕೋಚ್ ಆಗಿಯೂ ನೇಮಿಸಲಾಗಿದೆ.
ಶ್ರೀಜೇಶ್ ಮತ್ತು ಭಾರತ ಹಾಕಿ ತಂಡದ ಇತರ ಆಟಗಾರರನ್ನು ಸನ್ಮಾನಿಸಿದ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಗಿದೆ. ಸೀನಿಯರ್ ರಾಷ್ಟ್ರೀಯ ತಂಡದ ಯಾವ ಆಟಗಾರರಿಗೂ ಇನ್ನು ಮುಂದೆ 16 ನಂಬರ್ ಜೆರ್ಸಿಯನ್ನು ನೀಡಲಾಗುವುದಿಲ್ಲ. ಆದರೆ ಜೂನಿಯರ್ ತಂಡದಲ್ಲಿ 16 ನಂಬರ್ ಜೆರ್ಸಿ ಪಡೆಯುವ ಅವಕಾಶವಿರುತ್ತದೆ ಎಂದು ಹಾಕಿ ಇಂಡಿಯಾದ ಕಾರ್ಯದರ್ಶಿ ಬೋಲಾನಾತ್ ತಿಳಿಸಿದರು. ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ರ್ಟಿಕಿ, ಶ್ರೀಜೇಶ್ರನ್ನು "ಆಧುನಿಕ ಭಾರತೀಯ ಹಾಕಿಯ ದೇವರು' ಎಂದು ಬಣ್ಣಿಸಿದರು.
36 ವರ್ಷದ ಶ್ರೀಜೇಶ್ 336 ಪಂದ್ಯ ಒಳಗೊಂಡ 2 ದಶಕಗಳ ವೃತ್ತೀಜಿವನವನ್ನು ಮುಕ್ತಾಯಗೊಳಿಸಿದ ಬಳಿಕ ಕಿರಿಯರಿಗೆ ಮಾರ್ಗದರ್ಶನ ನೀಡುವ ಜವಾಜ್ದಾರಿಯನ್ನೂ ವಹಿಸಲಾಗಿದೆ. ಅವರು ಇನ್ನು ಜೂನಿಯರ್ ತಂಡದಲ್ಲಿ ಮತ್ತೋರ್ವ ಶ್ರೀಜೇಶ್ನನ್ನು ಬೆಳೆಸಬೇಕಾಗಿದೆ ಎಂದು ರ್ಟಿಕಿ ಹೇಳಿದರು. 2025ರ ಡಿಸೆಂಬರ್ನಲ್ಲಿ ಭಾರತದಲ್ಲೇ ನಡೆಯಲಿರುವ ಜೂನಿಯರ್ ಹಾಕಿ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಶ್ರೀಜೇಶ್ಗೆ ಜವಾಬ್ದಾರಿ ವಹಿಸಲಾಗಿದೆ.
ಸಮಾರಂಭದಲ್ಲಿ ಕಿರಿಯ ಹಾಕಿ ಆಟಗಾರರು 16 ಜೆರ್ಸಿ ಧರಿಸಿ ಶ್ರೀಜೇಶ್ಗೆ ವಿಶೇಷ ಗೌರವ ಸಲ್ಲಿಸಿದರು. ಸಮಾರಂಭದಲ್ಲಿ ಕೇರಳದ ಶ್ರೀಜೇಶ್ ಕುಟುಂಬದ ಸದಸ್ಯರು ಮತ್ತು ಅವಳಿ ಕಂಚಿನ ಪದಕ ವಿಜೇತ ಶೂಟರ್ ಮನು ಭಾಕರ್ ಕೂಡ ಹಾಜರಿದ್ದರು.
*ಶ್ರೀಜೇಶ್ ನಮ್ಮೆಲ್ಲರ ಜೀವನದ ಪ್ರಮುಖ ಭಾಗವಾಗಿದ್ದಾರೆ. ಅವರು ಹಿರಿಯ ಅಣ್ಣನಂತೆ ನನಗೆ ಮಾರ್ಗದರ್ಶನ ನೀಡಿದರು.
| ಹರ್ಮಾನ್ಪ್ರೀತ್ ಸಿಂಗ್, ಭಾರತ ಹಾಕಿ ತಂಡದ ನಾಯಕ
*ಇದು ವಿದಾಯವಲ್ಲ, ಪಿಆರ್ ಶ್ರೀಜೇಶ್ 18 ವರ್ಷಗಳ ಕಾಲ ಭಾರತೀಯ ಹಾಕಿಗೆ ನೀಡಿರುವ ಕೊಡುಗೆಯ ಸಂಭ್ರಮಾಚರಣೆಯಾಗಿದೆ. ಅವರನ್ನು ಆಧುನಿಕ ಭಾರತೀಯ ಹಾಕಿಯ ದೇವರು ಎನ್ನಬಹುದು.
| ದಿಲೀಪ್ ರ್ಟಿಕಿ, ಹಾಕಿ ಇಂಡಿಯಾ ಅಧ್ಯಕ್ಷ
*ನಾನು ರಾಹುಲ್ ದ್ರಾವಿಡ್ ಅವರಂತೆ ಜೂನಿಯರ್ ತಂಡಕ್ಕೆ ಮಾರ್ಗದರ್ಶನ ನೀಡಿ ನಂತರ ಸೀನಿಯರ್ ತಂಡದ ಕೋಚ್ ಆಗಲು ಬಯಸಿದ್ದೇನೆ. 2032ರ ವೇಳೆಗೆ ನಾನು ಸೀನಿಯರ್ ತಂಡದ ಕೋಚ್ ಆಗಲು ಸಿದ್ಧನಾಗುವೆ. 2036ರ ಒಲಿಂಪಿಕ್ಸ್ ಭಾರತದಲ್ಲೇ ನಡೆದರೆ, ನಾನು ಭಾರತ ತಂಡದ ಕೋಚ್ ಆಗಿರಲು ಬಯಸುವೆ. ಸುದೀರ್ ಸಮಯದ ಬಳಿಕ ಗೆದ್ದಿದ್ದ ಕಾರಣ ನನಗೆ ಟೋಕಿಯೊ ಪದಕವೇ ಮಹತ್ವದ್ದಾಗಿದೆ. ಈ ಬಾರಿ ನಾವು ಪದಕ ಗೆಲ್ಲುವ ವಿಶ್ವಾಸದೊಂದಿಗೆ ಪ್ಯಾರಿಸ್ಗೆ ಹೋಗಿದ್ದೆವು. ನಾವು ಈ ಬಾರಿ ಚಿನ್ನದ ಪದಕ ಗೆಲ್ಲದಿರುವ ನಿರಾಸೆ ಇದೆ.
| ಪಿಆರ್ ಶ್ರೀಜೇಶ್