ಕ್ರೀಡೆ

ಭಾರತೀಯ ಹಾಕಿಗೆ 100ರ ಸಂಭ್ರಮ; ಮುಂದಿನ ಒಂದು ವರ್ಷ 1,400 ಹಾಕಿ ಪಂದ್ಯ!

ನವದೆಹಲಿ: ಭಾರತೀಯ ಹಾಕಿಗೆ ಈಗ 100 ವರ್ಣರಂಜಿತ ವರ್ಷಗಳ ಸಂಭ್ರಮ. ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದ ದೇಶದೆಲ್ಲೆಡೆ ಇದರ ಸಂಭ್ರಮಾಚರಣೆ ಆರಂಭಗೊಂಡಿದ್ದು, ಮುಂದಿನ ಒಂದು ವರ್ಷದಲ್ಲಿ ದೇಶದ 550 ಜಿಲ್ಲೆಗಳಲ್ಲಿ 36 ಸಾವಿರಕ್ಕೂ ಅಧಿಕ ಆಟಗಾರರು 1,400ಕ್ಕೂ ಅಧಿಕ ಹಾಕಿ ಪಂದ್ಯಗಳನ್ನು ಆಡಲಿದ್ದಾರೆ.

ಶುಕ್ರವಾರ ಬೆಳಗ್ಗೆ ರಾಷ್ಟ್ರ ರಾಜಧಾನಿಯ ಮೇಜರ್​ ಧ್ಯಾನ್​ಚಂದ್​ ಸ್ಟೇಡಿಯಂನಲ್ಲಿ ಈ ಸಂಭ್ರಮಾಚರಣೆಯ ಮೊದಲ ಭಾಗವಾಗಿ ವಿಶೇಷ ಕಾರ್ಯಕ್ರಮ ನಡೆಯಿತು. ಈ ವೇಳೆ ಕ್ರೀಡಾ ಸಚಿವರ ಇಲೆವೆನ್​ ಮತ್ತು ಹಾಕಿ ಇಂಡಿಯಾ ಮಿಶ್ರ ಇಲೆವೆನ್​ ನಡುವೆ 30 ನಿಮಿಷಗಳ ಪ್ರದರ್ಶನ ಹಾಕಿ ಪಂದ್ಯ ನಡೆಯಿತು ಮತ್ತು ಕ್ರೀಡಾ ಸಚಿವರ ತಂಡ 3-1 ಗೋಲುಗಳಿಂದ ಜಯಿಸಿತು.

ಕ್ರೀಡಾ ಸಚಿವ ಮನ್ಸುಖ್​ ಮಾಂಡವೀಯ, ಕೇಂದ್ರ ಸಚಿವ ಕಿರಣ್​ ರಿಜಿಜು, ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್​ ರ್ಟಿಕಿ ಜತೆಗೆ ಒಲಿಂಪಿಕ್ಸ್​ ಸ್ವರ್ಣ ಪದಕ ವಿಜೇತ ಗುರ್ಬಕ್ಷ್​ ಸಿಂಗ್​, ಅಸ್ಲಾಂ ಶೇರ್​, ಅಜಿತ್​ಪಾಲ್​ ಸಿಂಗ್​, ಅಶೋಕ್​ ಕುಮಾರ್​, ಬಿಪಿ ಗೋವಿಂದ ಸಹಿತ ಹಲವು ಮಾಜಿ ಹಾಕಿ ಆಟಗಾರರು ಹಾಜರಿದ್ದರು.

ಭಾರತ ವಿಶ್ವದಲ್ಲೇ ಅತ್ಯಂತ ಯಶಸ್ವಿ ಹಾಕಿ ರಾಷ್ಟ್ರವೆನಿಸಿದ್ದು, 8 ಒಲಿಂಪಿಕ್ಸ್​ ಸ್ವರ್ಣ ಪದಕ ಮತ್ತು 13 ಬಾರಿ ಒಲಿಂಪಿಕ್ಸ್​ನಲ್ಲಿ ಪೋಡಿಯಂ ಏರಿದ ದಾಖಲೆಯನ್ನು ಹೊಂದಿದೆ. ಇದಲ್ಲದೆ 1975ರಲ್ಲಿ ಏಕೈಕ ಬಾರಿ ಹಾಕಿ ವಿಶ್ವಕಪ್​ ಜಯಿಸಿದ್ದು, ಏಷ್ಯನ್​ ಗೇಮ್ಸ್​ನಲ್ಲಿ 4 ಬಾರಿ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ. 4 ಬಾರಿ ಏಷ್ಯಾಕಪ್​ ಗೆದ್ದಿದ್ದು, 5 ಬಾರಿ ಸುಲ್ತಾನ್​ ಅಜ್ಲಾನ್​ ಷಾ ಟ್ರೋಫಿಯಲ್ಲಿ ಚಾಂಪಿಯನ್​ ಪಟ್ಟವೇರಿದೆ. ಮೇಜರ್​ ಧ್ಯಾನ್​ಚಂದ್​, ಲೆಸ್ಲಿ ಕ್ಲೌಡಿಯಸ್​, ಬಲ್ಬೀರ್​ ಸಿಂಗ್​, ಉಧಮ್​ ಸಿಂಗ್​, ಧನರಾಜ್​ ಪಿಳ್ಳೆ ಮುಂತಾದ ದಿಗ್ಗಜ ಆಟಗಾರರು, ಭಾರತೀಯ ಹಾಕಿಯನ್ನು ವಿಶ್ವಮಟ್ಟದಲ್ಲಿ ಬೆಳಗಿಸಿದ್ದಾರೆ.

1925ರ ನವೆಂಬರ್​ 7ರಂದು ಭಾರತೀಯ ಹಾಕಿ ಒಕ್ಕೂಟ (ಈಗಿನ ಹಾಕಿ ಇಂಡಿಯಾ) ರಚನೆಯಾದ ಹಿನ್ನೆಲೆಯಲ್ಲಿ ಈ ಶತಮಾನೋತ್ಸವವನ್ನು ಆಚರಿಸಲಾಗುತ್ತಿದೆ. 1928ರಲ್ಲಿ ಭಾರತ ಹಾಕಿ ತಂಡ ಮೊದಲ ಬಾರಿ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿತ್ತು.

*ಒಲಿಂಪಿಕ್ಸ್​ನಲ್ಲಿ ಹಾಕಿ ಮೂಲಕವೇ ಭಾರತ ಮೊದಲ ಬಾರಿ, ಕ್ರೀಡೆಯಲ್ಲಿ ತಾನೇನು ಸಾಧಿಸಬಲ್ಲೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿತ್ತು. ಭಾರತೀಯ ಹಾಕಿ ಇತಿಹಾಸ ಅತ್ಯಂತ ಶ್ರೀಮಂತವಾಗಿದೆ. ಭಾರತೀಯ ಹಾಕಿ ಈಗ ಮತ್ತೆ ಮೇಲೆದ್ದು ಬಂದಿದ್ದು, ಇನ್ನೊಂದು ಒಲಿಂಪಿಕ್ಸ್​ ಪದಕದ ಮೇಲೆ ಕಣ್ಣಿಟ್ಟಿದೆ.

| ಮನ್ಸುಖ್​ ಮಾಂಡವೀಯ, ಕ್ರೀಡಾ ಸಚಿವ