ಕ್ರೀಡೆ

PHOTOS | ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿಶೇಷ ರೆಟ್ರೋ ಜೆರ್ಸಿ ಧರಿಸಲಿದೆ ಟೀಮ್ ಇಂಡಿಯಾ!

ನವದೆಹಲಿ: ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದ ಸೀಮಿತ ಓವರ್ ಸರಣಿಯಲ್ಲಿ ರೆಟ್ರೋ ವಿನ್ಯಾಸದ ವಿನೂತನ ಜೆರ್ಸಿ ಧರಿಸಿ ಆಡಲಿದೆ ಎಂದು ವರದಿಯಾಗಿದೆ. 1992ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಧರಿಸಿದ್ದ ಕಡುನೀಲಿ ಬಣ್ಣದ ಜೆರ್ಸಿ ಇದಾಗಿರಲಿದೆ ಎನ್ನಲಾಗಿದೆ.

ಆಸ್ಟ್ರೇಲಿಯಾ ಟಿ20 ತಂಡದ ವಿಶೇಷವಾದ ಜೆರ್ಸಿ ಅನಾವರಣಗೊಳಿಸಿರುವ ಬೆನ್ನಲ್ಲೇ ಟೀಮ್ ಇಂಡಿಯಾ ಕೂಡ ಎಂದಿನ ಆಕಾಶ ನೀಲಿ ಬಣ್ಣದ ಜೆರ್ಸಿಗೆ ಬದಲಾಗಿ ನೇವಿ ಬ್ಲೂ ಜೆರ್ಸಿ ಧರಿಸಲಿದೆ ಎನ್ನಲಾಗಿದೆ. ನೈಕಿಗೆ ಬದಲಾಗಿ ಟೀಮ್ ಇಂಡಿಯಾದ ನೂತನ ಕಿಟ್ ಪ್ರಾಯೋಜಕರಾಗಿರುವ ಎಂಪಿಎಲ್ ಸ್ಪೋರ್ಟ್ಸ್ ಈ ಜೆರ್ಸಿ ವಿನ್ಯಾಸಗೊಳಿಸಿದೆ ಎನ್ನಲಾಗಿದ್ದು, ಹೊಸ ಜೆರ್ಸಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಟೀಮ್ ಇಂಡಿಯಾದ ಹೊಸ ಜೆರ್ಸಿ ಬಗ್ಗೆ ಬಿಸಿಸಿಐನಿಂದ ಮಾತ್ರ ಇದುವರೆಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ನವೆಂಬರ್ 27ರಂದು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆಡಲು ಭಾರತ ತಂಡ ಕಣಕ್ಕಿಳಿಯುವವರೆಗೆ ಹೊಸ ಜೆರ್ಸಿಯ ಬಗ್ಗೆ ಸ್ಪಷ್ಟತೆ ಸಿಗುವುದು ಅನುಮಾನವೆನಿಸಿದೆ.

ಅಂದ ಹಾಗೆ ಕ್ರಿಕೆಟ್‌ನಲ್ಲಿ ರೆಟ್ರೋ ಮಾದರಿಯ ಹೊಸ ಜೆರ್ಸಿ ಧರಿಸಿ ಆಡುವುದು ಹೊಸದೇನಲ್ಲ. ಈ ಹಿಂದೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳು ಕೂಡ ರೆಟ್ರೋ ಮಾದರಿಯ ಅಂದರೆ 90ರ ದಶಕದಲ್ಲಿ ತಮ್ಮ ರಾಷ್ಟ್ರೀಯ ತಂಡಗಳು ಧರಿಸುತ್ತಿದ್ದ ಮಾದರಿಯ ಜೆರ್ಸಿಗಳನ್ನು ಧರಿಸಿ ಆಡಿದ್ದವು.