Lovlina Boroghain: ಭಾರತ ಬಾಕ್ಸಿಂಗ್ ಫೆಡರೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕರ್ನಲ್ ಅರುಣ್ ಮಲಿಕ್, ಜೂಮ್ ಸಭೆಯಲ್ಲಿ ತಮ್ಮೊಂದಿಗೆ ಅಗೌರವ ಮತ್ತು ಅನುಚಿತ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಭಾರತೀಯ ಮಹಿಳಾ ಬಾಕ್ಸರ್ ಮತ್ತು ಟೋಕಿಯೊ ಒಲಿಂಪಿಕ್ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಆರೋಪಿಸಿದ್ದಾರೆ.
ಈ ವಿಷಯವಾಗಿ ಕ್ರೀಡಾ ಸಚಿವರು, TOPS ವಿಭಾಗ, IOA, ಬಾಕ್ಸಿಂಗ್ ಫೆಡರೇಶನ್ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕರಿಗೆ ಪತ್ರ ಬರೆದಿರುವ ಲೊವ್ಲಿನಾ, ಒಬ್ಬ ಆಟಗಾರ್ತಿಯಾಗಿ ಮಾತ್ರವಲ್ಲದೆ ಬಾಕ್ಸಿಂಗ್ ರಿಂಗ್‌ನಲ್ಲಿ ದೇಶದ ಭರವಸೆಯನ್ನು ಹೊತ್ತ ಮಹಿಳೆಯಾಗಿಯೂ ಈ ಪತ್ರ ಬರೆಯುತ್ತಿದ್ದೇನೆ, ಜುಲೈ 8 ರಂದು ನಡೆದ TOPS ಸಭೆಯಲ್ಲಿ ಮಲಿಕ್ ಸುಮ್ಮನಿರು ಎಂದು ಕೂಗಾಡಿ, ತಲೆ ತಗ್ಗಿಸಿ ತಾವೂ ಹೇಳುವುದನ್ನಷ್ಟೆ ಮಾಡು ಎಂದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮಲಿಕ್, ಲವ್ಲಿನಾ ದೇಶದ ಹೆಮ್ಮೆಯಾಗಿದ್ದು, ಅವರ ಸಾಧನೆಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ಅವರ ಒಲಿಂಪಿಕ್ ಕಂಚಿನ ಪದಕದ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ ಎಂದರು. ಅವರು ಮಾಡಿದ ಎಲ್ಲಾ ಆರೋಪಗಳು ಸುಳ್ಳು, SAI( Sports Authority of India) ಮತ್ತು TOPS(Target Olympic Podium Scheme) ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು, ಜೂಮ್ ಕರೆಯ ರೆಕಾರ್ಡಿಂಗ್ ಎಲ್ಲಾ ಅಧಿಕಾರಿಗಳ ಬಳಿ ಇದೆ ಎಂದರು. ಲವ್ಲಿನಾ ಮಾಡಿದ ಎಲ್ಲಾ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದು, BFI ( Boxing Federation of India) ನಿಯಮಗಳ ಪ್ರಕಾರ ಪ್ರಕರಣವನ್ನು ಪರಿಹರಿಸಲಾಗುವುದೆಂದು ತಿಳಿಸಿದರು.
ಲೊವ್ಲಿನಾ ಬೊರ್ಗೊಹೈನ್ ಮಹಿಳೆಯರ ವೆಲ್ಟರ್‌ವೇಟ್ (69 ಕೆಜಿ) ಬಾಕ್ಸಿಂಗ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿರುವುದು ಅವರ ವೃತ್ತಿಜೀವನದ ಅತಿದೊಡ್ಡ ಸಾಧನೆಯಾಗಿದೆ. ಒಲಿಂಪಿಕ್ ಪದಕ ಗೆದ್ದ ಭಾರತದ ಮೂರನೇ ಬಾಕ್ಸರ್ ಆಗಿರುವ 27 ವರ್ಷದ ಲೊವ್ಲಿನಾ, ಒಲಿಂಪಿಕ್ಸ್‌ನಲ್ಲಿ ಅಸ್ಸಾಂ ರಾಜ್ಯವನ್ನು ಪ್ರತಿನಿಧಿಸಿದ ಮೊದಲ ಮಹಿಳಾ ಅಥ್ಲೀಟ್ ಮತ್ತು ಎರಡನೇ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.(ಏಜೆನ್ಸೀಸ್)