ಕ್ರೀಡೆ

ಕಾನ್ಪುರ ಟೆಸ್ಟ್‌ನಲ್ಲಿ ನೂತನ ದಾಖಲೆ ಬರೆದ ಭಾರತ: ಟಿ20 ಸ್ಟೈಲ್‌ನಲ್ಲಿ ಗರ್ಜಿಸಿದ ರೋಹಿತ್ ಪಡೆ

ಕಾನ್ಪುರ: ಒಂದೇ ದಿನ ಬರೋಬ್ಬರಿ 18 ವಿಕೆಟ್ ಪತನ ಮತ್ತು 437 ರನ್‌ಪ್ರವಾಹ ಹರಿದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆಯೊಂದಿಗೆ ಹಲವು ದಾಖಲೆ ಬರೆದ ಭಾರತ ತಂಡ ಬಿಗಿ ಹಿಡಿತ ಸಾಧಿಸಿದೆ. ಮಂಗಳವಾರ ಪಂದ್ಯದ ಅಂತಿಮ ದಿನವಾಗಿದ್ದು, ರೋಹಿತ್ ಶರ್ಮ ಪಡೆ ಬಾಂಗ್ಲಾದೇಶವನ್ನು ಬೇಗನೆ ಕಟ್ಟಿಹಾಕಿ ಗೆಲುವು ದಾಖಲಿಸುವ ನಿರೀಕ್ಷೆ ಹರಡಿದೆ. ಜತೆಗೆ, ಭಾರತ ಡ್ರಾದೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಸತತ 3ನೇ ಬಾರಿ ೈನಲ್‌ಗೇರುವ ಆಸೆಗೆ ಹಿನ್ನಡೆಯಾಗುವುದನ್ನೂ ತಪ್ಪಿಸುವ ತವಕದಲ್ಲಿದೆ.

ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೋಮವಾರ, ಮೊದಲ ದಿನದ 3 ವಿಕೆಟ್‌ಗೆ 107 ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಬಾಂಗ್ಲಾ, ಮಾಮಿನುಲ್ ಹಕ್ (107 ರನ್, 194 ಎಸೆತ, 17 ಬೌಂಡರಿ, 1 ಸಿಕ್ಸರ್) ಶತಕದ ನೆರವಿನಿಂದ ಭೋಜನಾ ವಿರಾಮದ ಬಳಿಕ 74.2 ಓವರ್‌ಗಳಲ್ಲಿ 233 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಪ್ರತಿ ಓವರ್‌ಗೆ 8.22ರ ಸರಾಸರಿಯಲ್ಲಿ ರನ್ ಪೇರಿಸುವ ಮೂಲಕ ಬಾಂಗ್ಲಾ ಬೌಲರ್‌ಗಳನ್ನು ಬೆಂಡೆತ್ತಿದ ಭಾರತ, ದಿನದ ಆಟ ಮುಕ್ತಾಯಕ್ಕೆ ಇನ್ನೂ ಕೆಲ ಓವರ್‌ಗಳು ಬಾಕಿಯಿರುವಂತೆಯೇ 34.4 ಓವರ್‌ಗಳಲ್ಲಿ 9 ವಿಕೆಟ್‌ಗೆ 285 ರನ್‌ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ (72 ರನ್, 51 ಎಸೆತ, 12 ಬೌಂಡರಿ, 2 ಸಿಕ್ಸರ್) ಹಾಗೂ ಕನ್ನಡಿಗ ಕೆಎಲ್ ರಾಹುಲ್ (68 ರನ್, 43 ಎಸೆತ, 7 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ 52 ರನ್‌ಗಳ ಅಮೂಲ್ಯ ಮುನ್ನಡೆ ಸಾಧಿಸಿತು. ಬಾಂಗ್ಲಾ ದಿನದಂತ್ಯಕ್ಕೆ ತನ್ನ 2ನೇ ಇನಿಂಗ್ಸ್‌ನಲ್ಲಿ 11 ಓವರ್‌ಗಳಲ್ಲಿ 2 ವಿಕೆಟ್‌ಗೆ 26 ರನ್‌ಗಳಿಸಿದ್ದು, ಇನ್ನೂ 26 ರನ್ ಹಿನ್ನಡೆಯಲ್ಲಿದೆ. ಆರಂಭಿಕ ಶಾದ್ಮನ್ ಇಸ್ಲಾಂ (7*) ಜತೆ ಮಾಮಿನುಲ್ ಹಕ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪಂದ್ಯದ ಕೊನೇ ದಿನ ಮತ್ತೆ 98 ಓವರ್‌ಗಳ ಆಟ ನಿಗದಿಯಾಗಿದ್ದು, ಬಾಂಗ್ಲಾದ ಉಳಿದ 8 ವಿಕೆಟ್‌ಗಳನ್ನು ಭಾರತ ಬೇಗನೆ ಕಬಳಿಸಿದರೆ ಗೆಲುವಿನ ಹಾದಿ ಸುಗಮವಾಗಲಿದೆ.

ವೇಗದ 50, 100, 200, 250: ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವೇಗವಾಗಿ 50, 100, 150, 200 ಹಾಗೂ 250 ರನ್ ದಾಖಲಿಸಿದ ತಂಡ ಎಂಬ ದಾಖಲೆ ಬರೆಯಿತು. 3 (18 ಎಸೆತ) ಓವರ್‌ಗಳಲ್ಲಿ 50 ರನ್ ಪೂರೈಸಿದ ಭಾರತ, ಹಾಲಿ ವರ್ಷ ವೆಸ್ಟ್ ಇಂಡೀಸ್ ಎದುರು ಇಂಗ್ಲೆಂಡ್ 4.2 ಓವರ್‌ಗಳಲ್ಲಿ ಸಾಧಿಸಿದ್ದ ದಾಖಲೆ ಅಳಿಸಿಹಾಕಿತು. ಜತೆಗೆ 10.1 (61 ಎಸೆತ) ಓವರ್‌ಗಳಲ್ಲಿ ಶತಕದ ಗಡಿ ದಾಟಿದ ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧ 12.2 ಓವರ್‌ಗಳಲ್ಲಿ ಸಾಧಿಸಿದ ತನ್ನ ಹಿಂದಿನ ದಾಖಲೆ ಸುಧಾರಿಸಿಕೊಂಡಿತು. 18.2 (110 ಎಸೆತ) ಓವರ್‌ಗಳಲ್ಲಿ 150, 24.2 (146 ಎಸೆತ) ಓವರ್‌ಗಳಲ್ಲಿ 200 ಹಾಗೂ 30.1 (181 ಎಸೆತ) ಓವರ್‌ಗಳಲ್ಲಿ 250 ರನ್‌ಗಳಿಸಿ ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆಯಿತು. 2017ರಲ್ಲಿ ಪಾಕಿಸ್ತಾನ ಎದುರು ಆಸ್ಟ್ರೇಲಿಯಾ ತಂಡ 28.1 ಓವರ್‌ನಲ್ಲಿ 200 ರನ್‌ಗಳಿಸಿದ್ದು ಹಿಂದಿನ ಸಾಧನೆಯಾಗಿತ್ತು. 2022ರಲ್ಲಿ ಇಂಗ್ಲೆಂಡ್ 34 ಓವರ್‌ಗಳಲ್ಲಿ 250 ರನ್ ಗಳಿಸಿದ್ದು ಹಿಂದಿನ ಅತಿವೇಗದ ದಾಖಲೆ.