ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರ 2024-25ರ ಸಾಲಿನ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಬಿಸಿಸಿಐ ಸೋಮವಾರ ಬಿಡುಗಡೆಗೊಳಿಸಿದೆ. ಭಾರತ ತಂಡದ ನಾಯಕಿ ಹರ್ಮಾನ್ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂದನಾ ಮತ್ತು ಆಲ್ರೌಂಡರ್ ದೀಪ್ತಿ ಶರ್ಮ ಎ ಶ್ರೇಣಿಯ ಗುತ್ತಿಗೆ ಉಳಿಸಿಕೊಂಡಿದ್ದರೆ, ಆಲ್ರೌಂಡರ್ ಹಾಗೂ ಕನ್ನಡತಿ ಶ್ರೇಯಾಂಕಾ ಪಾಟೀಲ್ ಸಿ ಶ್ರೇಣಿಯೊಂದಿಗೆ ಮೊದಲ ಬಾರಿಗೆ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಸಂಪಾದಿಸಿದ್ದಾರೆ.
ಎ, ಬಿ, ಸಿ ಶ್ರೇಣಿ ಗುತ್ತಿಗೆ ಪಡೆದ ಆಟಗಾರ್ತಿಯರು ಕ್ರಮವಾಗಿ ವಾರ್ಷಿಕ 50, 30 ಮತ್ತು 10 ಲಕ್ಷ ರೂ. ವೇತನ ಪಡೆಯಲಿದ್ದಾರೆ. ಕಳಪೆ ಫಾರ್ಮ್ನಿಂದಾಗಿ ಇತ್ತೀಚೆಗೆ ಭಾರತ ತಂಡದಿಂದ ಹೊರಬಿದ್ದಿರುವ ಹೊರತಾಗಿಯೂ ಆರಂಭಿಕ ಬ್ಯಾಟರ್ ಶೆಫಾಲಿ ವರ್ಮ ಬಿ ಶ್ರೇಣಿಯ ಗುತ್ತಿಗೆ ಉಳಿಸಿಕೊಂಡಿದ್ದಾರೆ.
ಬಿಸಿಸಿಐ ಈ ಬಾರಿ ಒಟ್ಟು 16 ಆಟಗಾರ್ತಿಯರಿಗೆ ವಾರ್ಷಿಕ ಗುತ್ತಿಗೆ ನೀಡಿದೆ. ಹಿಂದಿನ ಗುತ್ತಿಗೆ ಪಟ್ಟಿಯಲ್ಲಿ ಬಿ ಗ್ರೇಡ್ನಲ್ಲಿದ್ದ ಆಟಗಾರ್ತಿಯರ ಪೈಕಿ ಕನ್ನಡತಿ ಹಾಗೂ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಈ ಬಾರಿ ಸ್ಥಾನ ಕಳೆದುಕೊಂಡಿದ್ದಾರೆ. ಹರ್ಲೀನ್ ಡಿಯೋಲ್, ಮೇನಾ ಸಿಂಗ್, ದೇವಿಕಾ ವೈದ್ಯ, ಎಸ್. ಮೇನಾ ಮತ್ತು ಅಂಜಲಿ ಸರ್ವಾನಿ ಗುತ್ತಿಗೆಯಿಂದ ಹೊರಬಿದ್ದಿರುವ ಇತರರು. ಶ್ರೇಯಾಂಕಾ ಜತೆಗೆ ಟಿಟಾಸ್ ಸಾಧು, ಅರುಂಧತಿ ರೆಡ್ಡಿ, ಉಮಾ ಛೇಟ್ರಿ ಮತ್ತು ಅಮನ್ಜೋತ್ ಕೌರ್ ಈ ಸಲದ ಹೊಸ ಸೇರ್ಪಡೆಯಾಗಿದ್ದಾರೆ.
ಈ ಗುತ್ತಿಗೆ ಪಟ್ಟಿ 2024ರ ಅಕ್ಟೋಬರ್ 1ರಿಂದ 2025ರ ಸೆಪ್ಟೆಂಬರ್ 30ರವರೆಗೆ ಅನ್ವಯಿಸಲಿದೆ. ಭಾರತ ತಂಡ ಇನ್ನು ಏಪ್ರಿಲ್ನಲ್ಲಿ ಶ್ರೀಲಂಕಾ, ದ. ಆಫ್ರಿಕಾ ಒಳಗೊಂಡ ತ್ರಿಕೋನ ಏಕದಿನ ಸರಣಿ ಆಡಲಿದೆ.
ಮಹಿಳಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆ ಪಟ್ಟಿ:
ಎ ಗ್ರೇಡ್: ಹರ್ಮಾನ್ಪ್ರೀತ್ ಕೌರ್, ಸ್ಮೃತಿ ಮಂದನಾ, ದೀಪ್ತಿ ಶರ್ಮ.
ಬಿ ಗ್ರೇಡ್: ರೇಣುಕಾ ಠಾಕೂರ್, ಜೆಮೀಮಾ ರೋಡ್ರಿಗಸ್, ರಿಚಾ ಘೋಷ್, ಶೆಫಾಲಿ ವರ್ಮ.
ಸಿ ಗ್ರೇಡ್: ಯಸ್ತಿಕಾ ಭಾಟಿಯಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಟಿಟಾಸ್ ಸಾಧು, ಅರುಂಧತಿ ರೆಡ್ಡಿ, ಅಮನ್ಜೋತ್ ಕೌರ್, ಉಮಾ ಛೇಟ್ರಿ, ಸ್ನೇಹಾ ರಾಣಾ, ಪೂಜಾ ವಸ್ತ್ರಾಕರ್.