ಕ್ರೀಡೆ

ಭಾರತ-ಶ್ರೀಲಂಕಾ ಪ್ರಶಸ್ತಿ ಹೋರಾಟ: ಇಂದು ತ್ರಿಕೋನ ಮಹಿಳಾ ಏಕದಿನ ಸರಣಿ ಫೈನಲ್

ಕೊಲಂಬೊ: ಆತಿಥೇಯ ಶ್ರೀಲಂಕಾ ಹಾಗೂ ಭಾರತ ತಂಡಗಳು ಮಹಿಳೆಯರ ತ್ರಿಕೋನ ಏಕದಿನ ಸರಣಿಯ ಫೈನಲ್‌ನಲ್ಲಿ ಭಾನುವಾರ ಮುಖಾಮುಖಿ ಆಗಲಿವೆ. ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಲೀಗ್‌ನಲ್ಲಿ ಆಡಿದ 4 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿ, ಅಂಕಪಟ್ಟಿಯ ಅಗ್ರಸ್ಥಾನದೊಂದಿಗೆ ಫೈನಲ್‌ಗೇರಿರುವ ಹರ್ಮಾನ್‌ಪ್ರೀತ್ ಕೌರ್ ಪಡೆ ಪ್ರಶಸ್ತಿ ಫೇವರಿಟ್ ಎನಿಸಿದೆ. ಆದರೆ ಲೀಗ್‌ನಲ್ಲಿ ಕಂಡಿರುವ ಏಕೈಕ ಸೋಲು ಲಂಕಾ ವಿರುದ್ಧವೇ ಬಂದಿರುವುದರಿಂದ ಭಾರತ ಎಚ್ಚರಿಕೆ ವಹಿಸುವುದು ಅಗತ್ಯ.

ಲೀಗ್‌ನಲ್ಲಿ ಶ್ರೀಲಂಕಾ ವಿರುದ್ಧ ಆಡಿದ 2 ಪಂದ್ಯಗಳಲ್ಲಿ ತಲಾ 1 ಗೆಲುವು-ಸೋಲು ಕಂಡಿದೆ. 4ರಲ್ಲಿ 2 ಗೆಲುವು, 2 ಸೋಲು ಕಂಡಿರುವ ಲಂಕಾ ಎರಡನೇ ಸ್ಥಾನಿಯಾಗಿ ಪ್ರಶಸ್ತಿ ಸುತ್ತಿಗೇರಿದೆ. ಮುಂಬರುವ ಮಹಿಳಾ ವಿಶ್ವಕಪ್‌ನ ಪೂರ್ವ ಸಿದ್ಧತೆಯ ಭಾಗವಾಗಿ ಎರಡೂ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ. ಭಾರತದ ಬ್ಯಾಟರ್‌ಗಳು ಭರ್ಜರಿ ಫಾರ್ಮ್‌ನಲ್ಲಿದ್ದು ಲಂಕಾ ಬೌಲರ್ಸ್‌ ನಡುವೆ ನಿಕಟ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ.

ಜೆಮೀಮಾ ರೋಡ್ರಿಗಸ್ 201 ರನ್‌ಗಳಿಸಿ ಟೂರ್ನಿಯ ಗರಿಷ್ಠ ರನ್ ಸ್ಕೋರರ್ ಎನಿಸಿದ್ದಾರೆ. ಪ್ರತೀಕಾ ರಾವಲ್ (164), ಸ್ಮತಿ ಮಂದನಾ (148), ದೀಪ್ತಿ ಶರ್ಮ (126)ಬ್ಯಾಟಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ತುಂಬಲಿದ್ದಾರೆ. ನಾಯಕಿ ಹರ್ಮಾನ್‌ಪ್ರೀತ್ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ವಿಲರಾಗಿದ್ದಾರೆ. ಸ್ನೇಹರಾಣಾ (11) ಸರಣಿಯ ಗರಿಷ್ಠ ವಿಕೆಟ್ ಟೇಕರ್ ಎನಿಸಿದ್ದಾರೆ. ಶ್ರೀಲಂಕಾದ 26 ವರ್ಷದ ಹರ್ಷಿತಾ ಸಮರವಿಕ್ರಮ ಭಾರತದ ಏಕೈಕ ಸೋಲಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಜತೆಗೆ ಕಳೆದ ವರ್ಷ ಶ್ರೀಲಂಕಾ ಟಿ20 ಏಷ್ಯಾಕಪ್​ ಫೈನಲ್ ಭಾರತ ಎದುರು ಗೆಲುವು ಸಾಧಿಸಲು ಹರ್ಷಿತಾ ಪ್ರದರ್ಶನ ಕಾರಣ ಎನಿಸಿತು.

ಆರಂಭ: ಬೆಳಗ್ಗೆ 9.30

ನೇರಪ್ರಸಾರ: ಫ್ಯಾನ್​ಕೋಡ್​ ಆ್ಯಪ್