ಟೋಕಿಯೋ: ವಿಶ್ವದ ಮುಂಚೂಣಿ ಪ್ಯಾರಾ ಶಟ್ಲರ್, ಭಾರತದ ಪ್ರಮೋದ್ ಭಗತ್ ಇಂದು ಟೋಕಿಯೋದ ಪ್ಯಾರಾಲಿಂಪಿಕ್ಸ್ನ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಅಂತಿಮ ಪಂದ್ಯದಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದಾರೆ. ತನ್ಮೂಲಕ ಪ್ಯಾರಾಗೇಮ್ಸ್ನಲ್ಲಿ ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಚಿನ್ನ ಗೆದ್ದ ಮೊದಲ ಕ್ರೀಡಾಪಟುವೆಂಬ ಮನ್ನಣೆ ಗಳಿಸಿದ್ದಾರೆ.
ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಎಸ್ಎಲ್3 ಕ್ಯಾಟಗರಿಯ ಅಂತಿಮ ಪಂದ್ಯದಲ್ಲಿ ಭಗತ್, ಗ್ರೇಟ್ ಬ್ರಿಟೇನ್ನ ಡೇನಿಯಲ್ ಬೆಥೆಲ್ ಅವರನ್ನು ಪರಾಜಯಗೊಳಿಸಿದರು. 21-14, 21-17 ಸ್ಕೋರ್ನ ಎರಡು ನೇರ ಸೆಟ್ಗಳ ಮೂಲಕ ಅವರು ಈ ಸಾಧನೆ ಮೆರೆದರು. ಪ್ರಮೋದ್ ಭಗತ್ ಗೆದ್ದಿರುವ ಈ ಚಿನ್ನದ ಪದಕ ಟೋಕಿಯೋ ಪ್ಯಾರಾಲಿಂಪಿಕ್ಸ್ 2020ರಲ್ಲಿ ಭಾರತದ ನಾಲ್ಕನೇ ಚಿನ್ನದ ಪದಕವಾಗಿದೆ.
ಎಸ್ಎಲ್3 ಕ್ಯಾಟಗರಿಯಲ್ಲೇ ನಡೆದ ಮತ್ತೊಂದು ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತದ ಮನೋಜ್ ಸರ್ಕಾರ್ ಅವರು, ಜಪಾನಿನ ಡೈಸುಕೆ ಫ್ಯೂಜಿಹರ ಅವರನ್ನು ಪರಾಭವಗೊಳಿಸಿ ಕಂಚಿನ ಪದಕ ಗೆದ್ದಿದ್ದಾರೆ. ತನ್ಮೂಲಕ ಒಂದೇ ಈವೆಂಟ್ನ ಎರಡು ಪದಕಗಳು ಭಾರತದ ಮಡಿಲಿಗೆ ಬಿದ್ದಿವೆ. ಸರ್ಕಾರ್, 22-20 ಮತ್ತು 21-13 ಸ್ಕೋರಿನ ಎರಡು ನೇರ ಸೆಟ್ಗಳೊಂದಿಗೆ ವಿಜೇತರಾದರು.
ಇಂದಿನ ಸ್ಪರ್ಧೆಗಳ ಕೊನೆಗೆ, ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತಕ್ಕೆ ಈವರೆಗೆ 17 ಪದಕಗಳು ಸಂದಿವೆ. (ಏಜೆನ್ಸೀಸ್)