ಕ್ರೀಡೆ

ಆರ್ಚರಿ ವಿಶ್ವಕಪ್​ನಲ್ಲಿ ಭಾರತಕ್ಕೆ ಚಿನ್ನ; ಒಲಿಂಪಿಕ್ಸ್​ಗೆ ಸೇರ್ಪಡೆಯಾಗಿರುವ ವಿಭಾಗದಲ್ಲೇ ಜ್ಯೋತಿ-ರಿಷಭ್​ ಸಾಧನೆ

ಅಬರ್ಂಡೇಲ್​ (ಅಮೆರಿಕ): ಭಾರತದ ಜ್ಯೋತಿ ಸುರೇಖಾ ವೆನ್ನಮ್​ ಮತ್ತು ರಿಷಭ್​ ಯಾದವ್​ ಜೋಡಿ ಆರ್ಚರಿ ವಿಶ್ವಕಪ್​ ಸ್ಟೇಜ್​&1ರಲ್ಲಿ ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ. 2028ರ ಲಾಸ್​ ಏಂಜಲೀಸ್​ ಒಲಿಂಪಿಕ್ಸ್​ಗೆ ಇತ್ತೀಚೆಗಷ್ಟೇ ಹೊಸದಾಗಿ ಸೇರ್ಪಡೆಯಾಗಿರುವ ಮಿಶ್ರ ಕಂಪೌಂಡ್​ ವಿಭಾಗದ ಸ್ಪರ್ಧೆಯಲ್ಲಿ ಭಾರತ ಈ ಸಾಧನೆ ಮಾಡಿರುವುದು ವಿಶೇಷವೆನಿಸಿದೆ.

ಸುರೇಖಾ-ರಿಷಭ್​ ಜೋಡಿ ಶನಿವಾರ ನಡೆದ ಫೈನಲ್​ ಸ್ಪರ್ಧೆಯಲ್ಲಿ ಚೀನಾ ತೈಪೆಯ ಹ್ವಾಂಗ್​ ಐ-ಜೌ ಮತ್ತು ಚೆನ್​ ಚೆಹ್​-ಲುನ್​ ಜೋಡಿಯ ಎದುರು 153-151 ಅಂಕಗಳಿಂದ ರೋಚಕ ಗೆಲುವು ಸಾಧಿಸಿತು. ಮೊದಲ 2 ಸೆಟ್​ಗಳಲ್ಲಿ 37-38, 38-39ರಿಂದ ಸೋತ ಭಾರತೀಯ ಜೋಡಿ ನಂತರದ 2 ಸೆಟ್​ಗಳಲ್ಲಿ 39-38, 39-36ರಿಂದ ಗೆಲುವು ಸಾಧಿಸಿ ತಿರುಗೇಟು ನೀಡಿತು.

ಇದಕ್ಕೆ ಮುನ್ನ ಸೆಮೀಸ್​ನಲ್ಲಿ ಸ್ಲೊವೇನಿಯಾವನ್ನು ಸೋಲಿಸುವ ಮೂಲಕ ಭಾರತ ಪದಕ ಖಾತ್ರಿಪಡಿಸಿಕೊಂಡಿತ್ತು. ಇದಕ್ಕೆ ಮುನ್ನ ಪುರುಷರ ಕಂಪೌಂಡ್​ ತಂಡ ವಿಭಾಗದ ಕಂಚಿನೊಂದಿಗೆ ಭಾರತ ಕೂಟದಲ್ಲಿ ಪದಕದ ಖಾತೆ ತೆರೆದಿತ್ತು. ಪುರುಷರ ರಿಕರ್ವ್​ ವಿಭಾಗದಲ್ಲಿ ಧೀರಜ್​, ತರುಣ್​ದೀಪ್, ಅತನು ದಾಸ್​ ಒಳಗೊಂಡ ಭಾರತ ತಂಡ ಬೆಳ್ಳಿ ಪದಕ ಗೆದ್ದುಕೊಂಡಿತು.