ಕ್ರೀಡೆ

ಏಕದಿನ ಸರಣಿಯಲ್ಲಿ ಶುಭಾರಂಭ ಕಂಡ ಭಾರತ ತಂಡ, 66 ರನ್​ಗಳಿಂದ ಇಂಗ್ಲೆಂಡ್​ ವಿರುದ್ಧ ಜಯ

ಪುಣೆ: ಬ್ಯಾಟಿಂಗ್​ ಹಾಗೂ ಬೌಲಿಂಗ್​ ಎರಡೂ ವಿಭಾಗದಲ್ಲೂ ಪ್ರಾಬಲ್ಯ ಸಾಧಿಸಿದ ಭಾರತ ತಂಡ ಪ್ರವಾಸಿ ಇಂಗ್ಲೆಂಡ್​ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಶುಭಾರಂಭ ಕಂಡಿತು. ಎಂಸಿಎ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 66 ರನ್​ಗಳಿಂದ ಜಯ ದಾಖಲಿಸಿತು. ತವರು ನೆಲದಲ್ಲಿ ಟೆಸ್ಟ್​, ಟಿ20 ಸರಣಿಯಲ್ಲಿ ಆರಂಭಿಕ ಹಿನ್ನಡೆಯಿಂದ ಮೇಲೆದ್ದಿದ್ದ ವಿರಾಟ್​ ಕೊಹ್ಲಿ ಪಡೆ, ಏಕದಿನ ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿ ಆರಂಭಿಕ ಮೇಲುಗೈ ಕಂಡಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡ, ಅನುಭವಿ ಆರಂಭಿಕ ಶಿಖರ್​ ಧವನ್​ (98 ರನ್​, 106 ಎಸೆತ, 11 ಬೌಂಡರಿ, 2 ಸಿಕ್ಸರ್​) ಶತಕವಂಚಿತ ಬ್ಯಾಟಿಂಗ್​ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಕನ್ನಡಿಗ ಕೆಎಲ್​ ರಾಹುಲ್​ (62* ರನ್​ 43 ಎಸೆತ, 4 ಬೌಂಡರಿ, 4 ಸಿಕ್ಸರ್​) ಮತ್ತು ಕೃನಾಲ್​ ಪಾಂಡ್ಯ (58*ರನ್​, 31 ಎಸೆತ, 7 ಬೌಂಡರಿ, 2 ಸಿಕ್ಸರ್​) ಸ್ಫೋಟಕ ಬ್ಯಾಟಿಂಗ್​ನಿಂದ 5 ವಿಕೆಟ್​ಗೆ 317 ರನ್​ ಪೇರಿಸಿತು. ಪ್ರತಿಯಾಗಿ, ಜಾನಿ ಬೇರ್​ ಸ್ಟೋ (94 ರನ್​, 66 ಎಸೆತ, 6 ಬೌಂಡರಿ, 7 ಸಿಕ್ಸರ್​) ಶತಕವಂಚಿತ ಬ್ಯಾಟಿಂಗ್​ ನಡುವೆಯೂ ಕನ್ನಡಿಗ ಪ್ರಸಿದ್ಧ ಕೃಷ್ಣ (54ಕ್ಕೆ 4) ಹಾಗೂ ಶಾರ್ದೂಲ್​ ಠಾಕೂರ್​ (37ಕ್ಕೆ 3) ಮಾರಕ ದಾಳಿಗೆ ನಲುಗಿದ ಇಂಗ್ಲೆಂಡ್​ 42.1 ಓವರ್​ಗಳಲ್ಲಿ 251 ರನ್​ಗಳಿಗೆ ಸರ್ವಪತನ ಕಂಡಿತು.

ಭಾರತ: 5 ವಿಕೆಟ್​ಗೆ 317 (ರೋಹಿತ್​ ಶರ್ಮ 28, ಶಿಖರ್​ ಧವನ್​ 98, ವಿರಾಟ್​ ಕೊಹ್ಲಿ 56, ಕೆಎಲ್​ ರಾಹುಲ್​ 62, ಕೃನಾಲ್​ ಪಾಂಡ್ಯ 58, ಬೆನ್​ ಸ್ಟೋಕ್ಸ್​ 34ಕ್ಕೆ 3, ಮಾರ್ಕ್​ ವುಡ್​ 75ಕ್ಕೆ 2), ಇಂಗ್ಲೆಂಡ್​ : 42.1 ಓವರ್​ಗಳಲ್ಲಿ 251 (ಜಾನಿ ಬೇರ್​ಸ್ಟೋ 94, ಜೇಸನ್​ ರಾಯ್​ 46, ಮೊಯಿನ್​ ಅಲಿ 30, ಪ್ರಸಿದ್ಧ ಕೃಷ್ಣ 54ಕ್ಕೆ 4, ಶಾರ್ದೂಲ್​ ಠಾಕೂರ್​ 37ಕ್ಕೆ 3, ಭುವನೇಶ್ವರ್​ ಕುಮಾರ್​ 30ಕ್ಕೆ 2).