ಕ್ರೀಡೆ

ಡಬ್ಲ್ಯುಟಿಸಿ ಫೈನಲ್ ಬಳಿಕ ಭಾರತ ತಂಡಕ್ಕೆ 20 ದಿನ ಬಿಡುವು

raghukittur

ಲಂಡನ್: ನ್ಯೂಜಿಲೆಂಡ್ ವಿರುದ್ಧದ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯ ಮುಕ್ತಾಯಗೊಂಡ ಬಳಿಕ ಸರಿಸುಮಾರು ಮೂರು ವಾರಗಳ (20 ದಿನ) ಕಾಲ ಆಟಗಾರರಿಗೆ ಬಿಡುವು ನೀಡಲು ಭಾರತ ತಂಡದ ಆಡಳಿತ ಮಂಡಳಿ ತೀರ್ಮಾನಿಸಿದೆ. ಸತತವಾಗಿ ಬಯೋಬಬಲ್‌ನಲ್ಲೇ ಇರುವ ಕಾರಣ ಆಟಗಾರರಿಗೆ ಮಾನಸಿಕ ಒತ್ತಡ ನಿವಾರಣೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಜೂನ್ 18 ರಿಂದ 22ರವರೆಗೆ ಸೌಥಾಂಪ್ಟನ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಡಬ್ಲ್ಯುಟಿಸಿ ಪಂದ್ಯ ನಡೆಯಲಿದೆ. ಇದಾದ ಬಳಿಕ ಆಟಗಾರರು ಜೂನ್ 24ರಂದು ಬಯೋಬಬಲ್ ತೊರೆಯಲಿದ್ದು, ಜುಲೈ 14ಕ್ಕೆ ವಾಪಸಾಗಲಿದ್ದಾರೆ.

ಆಗಸ್ಟ್ 4ರಂದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು, ಆಟಗಾರರು ಅದಕ್ಕೆ ಮೂರು ವಾರ ಮೊದಲು ಬಯೋಬಬಲ್‌ಗೆ ಮರುಪ್ರವೇಶ ಪಡೆಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಡಬ್ಲ್ಯುಟಿಸಿ ಫೈನಲ್ ಪಂದ್ಯದ ಬಳಿಕ ಇಂಗ್ಲೆಂಡ್ ವಿರುದ್ಧದ ಸರಣಿಗೆ 6 ವಾರಗಳ ಕಾಲ ಸಮಯವಿದೆ. ಡಬ್ಲ್ಯುಟಿಸಿ ಮುಕ್ತಾಯಗೊಂಡ ಬಳಿಕ ಆಟಗಾರರಿಗೆ ಕೆಲ ದಿನಗಳ ಮಟ್ಟಿಗೆ ಬ್ರೇಕ್ ನೀಡಲಾಗುವುದು ಎಂದು ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಇಂಗ್ಲೆಂಡ್‌ಗೆ ತೆರಳುವುದಕ್ಕೂ ಮುನ್ನ ತಿಳಿಸಿದ್ದರು. ಈ ವೇಳೆ ಆಟಗಾರರು ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಸಮಯ ಕಳೆಯಲಿದ್ದಾರೆ. ಆಟಗಾರರಿಗೆ ಈ ಮೂರು ವಾರಗಳ ಕಾಲ ಬ್ರಿಟನ್‌ನಲ್ಲಿ ಅವರಿಗೆ ಇಷ್ಟದಂತೆ ಕಾಲಕಳೆಯುವರು ಎಂದು ಹೇಳಲಾಗಿದೆ.

‘ಭಾರತದ ಬಹುತೇಕ ಕ್ರಿಕೆಟಿಗರಿಗೆ ಇಂಗ್ಲೆಂಡ್‌ನಲ್ಲಿ ಹಲವು ಸ್ನೇಹಿತರಿದ್ದು, ಎಲ್ಲ ಕಡೆ ಓಡಾಡಲಿದ್ದಾರೆ’ ಎಂದು ತಂಡದ ಮೂಲಗಳು ತಿಳಿಸಿವೆ. ಡಬ್ಲ್ಯುಟಿಸಿ ಬಳಿಕ 42 ದಿನಗಳ ಬಿಡುವು ತಂಡಕ್ಕಿದ್ದು, ಆಟಗಾರರು ಇಂಗ್ಲೆಂಡ್ ಸರಣಿಯಲ್ಲಿ ಒತ್ತಡ ರಹಿತವಾಗಿ ಆಡಲು ಮಾನಸಿಕವಾಗಿ ಸದೃಢರಾಗಬೇಕು. ಹೀಗಾಗಿ ಬಿಡುವು ಅಗತ್ಯ ಎಂದು ಕೊಹ್ಲಿ ಲಂಡನ್‌ಗೆ ಹೊರಡುವುದಕ್ಕೂ ಮುನ್ನ ಹೇಳಿದ್ದರು.