ಮೆಲ್ಬೋರ್ನ್: ಎಡಗೈ ಸ್ಪಿನ್ನರ್ ರಾಧಾ ಯಾದವ್ರ (23ಕ್ಕೆ 4) ಆಕರ್ಷಕ ಬೌಲಿಂಗ್ ನೆರವಿನಿಂದ ಭಾರತ ತಂಡ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ನೆರೆಯ ಶ್ರೀಲಂಕಾ ತಂಡವನ್ನು 7 ವಿಕೆಟ್ಗಳಿಂದ ಮಣಿಸಿದೆ. ಆ ಮೂಲಕ ಎ ಗುಂಪಿನಲ್ಲಿ ಅಗ್ರಸ್ಥಾನಿ ತಂಡವಾಗಿ ಸೆಮಿಫೈನಲ್ ಹಂತಕ್ಕೇರುವುದನ್ನು ಖಚಿತಪಡಿಸಿಕೊಂಡಿದೆ.
ಜಂಕ್ಷನ್ ಓವಲ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ದೊಡ್ಡ ಮೊತ್ತ ದಾಖಲಿಸಲು ವಿಫಲವಾಯಿತು. ಭಾರತದ ಬೌಲರ್ಗಳ ಶಿಸ್ತಿನ ದಾಳಿಯ ನೆರವಿನಿಂದ 9 ವಿಕೆಟ್ಗೆ 113 ರನ್ ಪೇರಿಸಿತು. ಪ್ರತಿಯಾಗಿ ಭಾರತ ತಂಡ ಯುವ ಆಟಗಾರ್ತಿ ಶೆಫಾಲಿ ವರ್ಮ (47ರನ್, 34 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತೊಂದು ಸ್ಪೋಟಕ ಇನಿಂಗ್ಸ್ ನೆರವಿನಿಂದ 14.4 ಓವರ್ಗಳಲ್ಲಿ 3 ವಿಕೆಟ್ಗೆ 116 ರನ್ ಬಾರಿಸಿ ಗೆಲುವು ಕಂಡಿತು. ಅಜೇಯವಾಗಿ ಗುಂಪು ಹಂತ ಅಭಿಯಾನ ಮುಗಿಸಿರುವ ಭಾರತ ತಂಡ, ಸೆಮಿಫೈನಲ್ ಪಂದ್ಯವನ್ನು ಸಿಡ್ನಿಯಲ್ಲಿ ಆಡಲಿದೆ. ಸೆಮಿಫೈನಲ್ನಲ್ಲಿ ಬಹುತೇಕ ಇಂಗ್ಲೆಂಡ್ ಅಥವಾ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುವ ಸವಾಲು ಭಾರತ ತಂಡಕ್ಕೆ ಸಿಗಲಿದೆ.
ಲಂಕಾಗೆ ಕಡಿವಾಣ ಹೇರಿದ ರಾಜೇಶ್ವರಿ, ರಾಧಾ: ಮೊದಲು ಬ್ಯಾಟಿಂಗ್ ಮಾಡಿದ್ದ ಲಂಕಾ 8 ಓವರ್ಗಳಲ್ಲಿ 1 ವಿಕೆಟ್ಗೆ 42 ರನ್ ಬಾರಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ, ರಾಜೇಶ್ವರಿ ಗಾಯಕ್ವಾಡ್ರ ವಿಕೆಟ್-ಮೇಡನ್ ಓವರ್ ಲಂಕಾ ತಂಡದ ಹಿನ್ನಡೆಗೆ ಕಾರಣವಾಯಿತು. ಇದರ ಬೆನ್ನಲ್ಲಿಯೇ ಅನುಭವಿ ಆಟಗಾರ್ತಿ ಚಾಮರಿ ಅಟ್ಟಪಟ್ಟು ಔಟಾದಾಗ ಲಂಕಾ ತಂಡ ಮತ್ತಷ್ಟು ಹಿನ್ನಡೆ ಕಂಡಿತು. 80 ರನ್ಗೆ 7 ವಿಕೆಟ್ ಕಳೆದುಕೊಂಡಿದ್ದ ವೇಳೆ ಲಂಕಾ ತಂಡ 100ರ ಗಡಿ ದಾಟುವುದು ಅನುಮಾನವೆನಿಸಿತ್ತು. ಆದರೆ, ಕವಿಶಾ ದಿಲ್ಹಾರಿ (25ರನ್, 16 ಎಸೆತ, 2 ಬೌಂಡರಿ) ಸ್ಪೋಟಕ ಆಟವಾಡುವ ಮೂಲಕ ತಂಡದ ಮೊತ್ತವನ್ನು 100ರ ಗಡಿ ದಾಟಿಸಲು ನೆರವಾದರು.
ಶೆಫಾಲಿಗೆ ಜೀವದಾನ
ಸ್ಪೋಟಕ ಬ್ಯಾಟುಗಾರ್ತಿ ಶೆಫಾಲಿ ವರ್ಮ 5 ರನ್ ಬಾರಿಸಿದ್ದ ವೇಳೆ ಸಸಿಕಲಾರಿಂದ ಜೀವದಾನ ಪಡೆ ದಿದ್ದರು. ಮೊದಲ ವಿಕೆಟ್ಗೆ ಸ್ಮೃತಿ ಮಂದನಾ (17) ಜತೆ 34 ರನ್ ಜತೆಯಾಟವಾಡಿದ ಬಳಿಕ, ನಾಯಕಿ ಹರ್ವನ್ಪ್ರೀತ್ ಕೌರ್ ಜತೆ 2ನೇ ವಿಕೆಟ್ಗೆ 47 ರನ್ ಜತೆಯಾಟವಾಡಿ ತಂಡದ ಸುಲಭ ಗೆಲುವಿಗೆ ನೆರವಾದರು. 11ನೇ ಓವರ್ನಲ್ಲಿ ವೈಯಕ್ತಿಕ ಅರ್ಧಶತಕದಿಂದ 3 ರನ್ನಿಂದ ದೂರವಿರುವಾಗ ಶೆಫಾಲಿ ಔಟಾದರೂ, ಜೆಮಿಮಾ, ದೀಪ್ತಿ ಶರ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.