ರಾಜ್‌ಕೋಟ್: ಸತತ 2 ಸೋಲಿನ ಬಳಿಕ ವಿಶಾಖಪಟ್ಟಣದಲ್ಲಿ ದಾಖಲಿಸಿದ ಗೆಲುವು ರಿಷಭ್ ಪಂತ್ ಬಳಗದ ಭಾರವನ್ನು ಸ್ವಲ್ಪಮಟ್ಟಿಗೆ ಇಳಿಸಿದೆ. ಆದರೂ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಜೀವಂತವಿರಿಸಲು ಮತ್ತು ಬೆಂಗಳೂರಿನ ಅಂತಿಮ ಪಂದ್ಯವನ್ನು ‘ಫೈನಲ್’ ಆಗಿ ಪರಿವರ್ತಿಸಲು ಟೀಮ್ ಇಂಡಿಯಾ 4ನೇ ಪಂದ್ಯದಲ್ಲೂ ಗೆಲುವು ಅನಿವಾರ‌್ಯವಾಗಿದೆ. ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯ ಭಾರತದ ಪಾಲಿಗೆ ಮತ್ತೊಂದು ಮಾಡು ಇಲ್ಲವೆ ಮಡಿ ಸೆಣಸಾಟವೇ ಆಗಿರಲಿದೆ.
ದೆಹಲಿ, ಕಟಕ್‌ನಲ್ಲಿ ನೀರಸ ಆಟವಾಡಿದ್ದ ಭಾರತ 3ನೇ ಪಂದ್ಯದಲ್ಲಿ ಅಷ್ಟೇ ಚೇತೋಹಾರಿ ನಿರ್ವಹಣೆಯ ಮೂಲಕ ಪ್ರವಾಸಿ ತಂಡಕ್ಕೆ ತಿರುಗೇಟು ನೀಡಿತ್ತು. ಇದೀಗ ಸರಣಿ ಸಮಬಲದತ್ತ ಗಮನಹರಿಸಿರುವ ಭಾರತ ತಂಡ, ಮತ್ತೊಮ್ಮೆ ಅಂಥದ್ದೇ ನಿರ್ವಹಣೆಯನ್ನು ಪುನರಾವರ್ತಿಸಬೇಕಾಗಿದೆ. ಮುಂಬರುವ ಟಿ20 ವಿಶ್ವಕಪ್‌ಗೆ ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಟಗಾರರಿಂದ ಸ್ಥಿರ ನಿರ್ವಹಣೆ ಬರಬೇಕಾಗಿದೆ.
ಆರಂಭಿಕರಾದ ಋತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಕಳೆದ ಪಂದ್ಯದಲ್ಲಿ ತೋರಿದ ನಿರ್ವಹಣೆ ಭಾರತದ ಬ್ಯಾಟಿಂಗ್ ವಿಭಾಗಕ್ಕೆ ಶಕ್ತಿ ತುಂಬಿದೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಇನ್ನಷ್ಟು ರನ್ ಗಳಿಸಬೇಕಾಗಿದೆ. ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್ ಮತ್ತು ಅಕ್ಷರ್ ಪಟೇಲ್ ಕಳೆದ ಪಂದ್ಯದಲ್ಲಿ ಸುಧಾರಿತ ಬೌಲಿಂಗ್ ಪ್ರದರ್ಶಿಸಿದ್ದರು. ರಾಜ್‌ಕೋಟ್ ಪಿಚ್ ಸ್ಪಿನ್ ಸ್ನೇಹಿಯಾಗಿರುವ ನಿರೀಕ್ಷೆ ಇರುವುದರಿಂದ ಇವರಿಬ್ಬರು ಮತ್ತೊಮ್ಮೆ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಪಂತ್ ಫಾರ್ಮ್ ಚಿಂತೆ
ಮೂರನೇ ಪಂದ್ಯದಲ್ಲಿ ಗೆಲುವಿನ ಲಯ ಕಂಡುಕೊಂಡರೂ, ಭಾರತಕ್ಕೆ ಕೆಲ ತಲೆನೋವು ಆಗಿಯೇ ಉಳಿದುಕೊಂಡಿವೆ. ಅದರಲ್ಲಿ ಪ್ರಮುಖವಾದುದು ನಾಯಕ ರಿಷಭ್ ಪಂತ್ ಅವರ ಫಾರ್ಮ್. ಮೊದಲ 3 ಪಂದ್ಯಗಳಲ್ಲಿ ಅವರು 29, 5, 6 ರನ್ ಗಳಿಸಿದ್ದು, ಶೀಘ್ರ ಬ್ಯಾಟಿಂಗ್ ಲಯಕ್ಕೆ ಮರಳಬೇಕಾದ ಒತ್ತಡ ಎದುರಿಸುತ್ತಿದ್ದಾರೆ.
ಸರಣಿ ಮೇಲೆ ಆಫ್ರಿಕಾ ಕಣ್ಣು
ಕಳೆದ ಪಂದ್ಯದ ಸೋಲಿನ ನಡುವೆಯೂ ದಕ್ಷಿಣ ಆಫ್ರಿಕಾ ತಂಡ ಸದ್ಯ ಸರಣಿಯಲ್ಲಿ 2-1ರಿಂದ ಮುನ್ನಡೆಯಲ್ಲಿದ್ದು, ಬೆಂಗಳೂರಿನ ಅಂತಿಮ ಪಂದ್ಯಕ್ಕೆ ಮೊದಲೇ ಸರಣಿ ವಶಪಡಿಸಿಕೊಳ್ಳಲು ಪ್ರಯತ್ನಿಸಲಿದೆ. ಮೊದಲೆರಡು ಪಂದ್ಯಗಳ ಭರ್ಜರಿ ಚೇಸಿಂಗ್ ಬಳಿಕ ವಿಶಾಖಪಟ್ಟಣದಲ್ಲಿ ಹರಿಣಗಳಿಗೆ ಬ್ಯಾಟಿಂಗ್ ವಿಭಾಗವೇ ಕೈಕೊಟ್ಟಿತ್ತು. ಸ್ಪಿನ್ನರ್‌ಗಳಾದ ತಬರೇಜ್ ಶಮ್ಸಿ ಮತ್ತು ಕೇಶವ್ ಮಹಾರಾಜ್‌ರನ್ನೇ ಭಾರತೀಯ ಬ್ಯಾಟರ್‌ಗಳು ಟಾರ್ಗೆಟ್ ಮಾಡಿ ಬೆಂಡೆತ್ತಿದ್ದರು. ಆದರೂ ದಕ್ಷಿಣ ಆಫ್ರಿಕಾದ ವೇಗಿಗಳು ಈಗಲೂ ಭಾರತಕ್ಕೆ ಸವಾಲೆನಿಸಿದ್ದಾರೆ.
ಟೀಮ್ ನ್ಯೂಸ್:
ಭಾರತ: ಸತತ 2 ಸೋಲುಗಳ ಹೊರತಾಗಿಯೂ 3ನೇ ಪಂದ್ಯದಲ್ಲಿ ಬದಲಾವಣೆ ಇಲ್ಲದ ತಂಡವನ್ನು ಕಣಕ್ಕಿಳಿಸಿ ಯಶಸ್ಸು ಕಂಡ ಭಾರತ, ಈ ಬಾರಿ ಒಂದು ಬದಲಾವಣೆ ಮಾಡುವ ಸಾಧ್ಯತೆ ಇದೆ. ಆಡಿದ 3 ಪಂದ್ಯಗಳಲ್ಲೂ ವಿಕೆಟ್ ಖಾತೆ ತೆರೆಯಲು ವಿಫಲರಾಗಿರುವ ವೇಗಿ ಆವೇಶ್ ಖಾನ್ ಬದಲಿಗೆ ಅರ್ಷದೀಪ್ ಸಿಂಗ್ ಅವಕಾಶ ಗಿಟ್ಟಿಸಿಕೊಳ್ಳಬಹುದು.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿಕಾಕ್ ಗಾಯದಿಂದ ಚೇತರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅವರು ಮರಳಿದರೆ ರೀಜಾ ಹೆಂಡ್ರಿಕ್ಸ್ ಹೊರಗುಳಿಯಲಿದ್ದಾರೆ. ಕೇಶವ್ ಮಹಾರಾಜ್ ಬದಲಿಗೆ ಮಾರ್ಕೋ ಜಾನ್ಸೆನ್ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಆರಂಭ: ರಾತ್ರಿ 7.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
*3: ಭಾರತ ತಂಡ ರಾಜ್‌ಕೋಟ್‌ನಲ್ಲಿ ಇದುವರೆಗೆ 3 ಟಿ20 ಪಂದ್ಯ ಆಡಿದ್ದು, 2ರಲ್ಲಿ ಗೆದ್ದು 1ರಲ್ಲಿ ಸೋತಿದೆ. ದಕ್ಷಿಣ ಆಫ್ರಿಕಾಕ್ಕೆ ಇದು ರಾಜ್‌ಕೋಟ್‌ನಲ್ಲಿ ಮೊದಲ ಟಿ20.
ಪಿಚ್ ರಿಪೋರ್ಟ್
ರಾಜ್‌ಕೋಟ್ ಪಿಚ್‌ನಲ್ಲಿ ಸಾಮಾನ್ಯವಾಗಿ ರನ್‌ಪ್ರವಾಹವೇ ಹರಿಯುತ್ತದೆ. 2013ರಲ್ಲಿ ಇಲ್ಲಿ ಆಡಿದ ಮೊದಲ ಟಿ20ಯಲ್ಲಿ ಭಾರತ 202 ರನ್ ಚೇಸ್ ಮಾಡಿ ಗೆದ್ದಿತ್ತು. ದೇಶದ ಪಶ್ಚಿಮ ಭಾಗದಲ್ಲಿರುವ ಈ ನಗರದಲ್ಲಿ ಸ್ವಲ್ಪ ಚಳಿಯ ವಾತಾವರಣವಿದ್ದು, ಇಬ್ಬನಿಯೂ ಕಾಡಬಹುದು.
ಮಾರ್ಕ್ರಮ್ ಸರಣಿಯಿಂದ ಔಟ್
ಸರಣಿ ಆರಂಭಕ್ಕೆ ಮೊದಲು ಕರೊನಾ ಸೋಂಕಿಗೆ ತುತ್ತಾಗಿದ್ದ ದಕ್ಷಿಣ ಆಫ್ರಿಕಾ ಬ್ಯಾಟರ್ ಏಡನ್ ಮಾರ್ಕ್ರಮ್ ಇದೀಗ ಸಂಪೂರ್ಣ ಪ್ರವಾಸದಿಂದಲೇ ಹೊರಬಿದ್ದಿದ್ದಾರೆ. ಕಡ್ಡಾಯ ಐಸೋಲೇಷನ್ ನಿರ್ಬಂಧಗಳಿಂದಾಗಿ ಅವರಿಗೆ ಸರಣಿಯ ಉಳಿದೆರಡು ಪಂದ್ಯಗಳಲ್ಲೂ ಆಡಲಾಗುತ್ತಿಲ್ಲ. ಆದರೆ ಅವರ ಆರೋಗ್ಯ ಚೇತರಿಕೆ ಕಂಡಿದೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ತಿಳಿಸಿದೆ.