ಮೌಂಟ್ ಮೌಂಗನುಯಿ: ಮೊದಲ ಎರಡು ಪಂದ್ಯಗಳಲ್ಲಿ ಬಿಗಿ ವೇಗದ ದಾಳಿಯೊಂದಿಗೆ ನ್ಯೂಜಿಲೆಂಡ್ ತಂಡವನ್ನು ಕಟ್ಟಿಹಾಕಿದ್ದ ಭಾರತ ತಂಡ, ಕಳೆದ ಪಂದ್ಯದಲ್ಲಿ ಆತಿಥೇಯರ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿತ್ತು. ಮೌಂಟ್ ಮೌಂಗನುಯಿಯ ಬೇ ಓವಲ್ನಲ್ಲೇ ಭಾನುವಾರ ನಡೆಯಲಿರುವ ಸರಣಿಯ ನಿರ್ಣಾಯಕ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ ಆತಿಥೇಯರಿಗೆ ದಿಟ್ಟ ತಿರುಗೇಟು ನೀಡಬೇಕಾಗಿದೆ. ಇದರೊಂದಿಗೆ ಗೌತಮ್ ಗಂಭೀರ್ ಮುಖ್ಯ ಕೋಚ್ ಹುದ್ದೆ ಅಲಂಕರಿಸಿದ ಬಳಿಕ ವಿದೇಶಿ ನೆಲದಲ್ಲಿ ಮೊದಲ ಏಕದಿನ ಸರಣಿ ಜಯಿಸುವ ಅವಕಾಶ ಭಾರತದ ಮುಂದಿದೆ. ಮತ್ತೊಂದೆಡೆ ನ್ಯೂಜಿಲೆಂಡ್ 7 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋಲುವ ಮುಖಭಂಗವನ್ನು ತಪ್ಪಿಸಿಕೊಂಡು, ಸರಣಿ ಸಮಬಲ ಸಾಧಿಸಲು ಹೋರಾಡಲಿದೆ.
ನಾಲ್ಕನೇ ಏಕದಿನ ಪಂದ್ಯದಲ್ಲಿ ಚೇಸಿಂಗ್ ವೇಳೆ ಮೊದಲ ಓವರ್ನಲ್ಲೇ ಭಾರತೀಯರನ್ನು ಕಂಗೆಡಿಸಿದ್ದ ವೇಗಿ ಮ್ಯಾಟ್ ಹೆನ್ರಿ ಅಂತಿಮ ಪಂದ್ಯಕ್ಕೆ ಗೈರಾಗಲಿದ್ದಾರೆ. ಇದೇ ವೇಳೆ ಭಾರತಕ್ಕೂ, ಸರಣಿಯಲ್ಲಿ ಇದುವರೆಗೆ ಸರ್ವಾಧಿಕ 9 ವಿಕೆಟ್ ಕಬಳಿಸಿರುವ ವೇಗಿ ಗುರ್ನೂರ್ ಬ್ರಾರ್ ಅಲಭ್ಯರಾಗಿದ್ದಾರೆ. ಟೆಸ್ಟ್ ಸರಣಿಯ ಸಿದ್ಧತೆಗಾಗಿ ಇವರಿಬ್ಬರು ಏಕದಿನ ತಂಡ ತೊರೆದಿದ್ದಾರೆ. ಇದು ಉಭಯ ತಂಡಗಳ ಬ್ಯಾಟರ್ಗಳಿಗೂ ತುಸು ಸಮಾಧಾನ ತಂದಿದೆ. ಆದರೆ 4ನೇ ಏಕದಿನದಲ್ಲಿ ಕಿವೀಸ್ ಡೆರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್ ಗೈರಿನ ನಡುವೆಯೂ ಬೃಹತ್ ಮೊತ್ತ ಕಲೆಹಾಕಿದ್ದರೆ, ಭಾರತ ತಂಡ ಅನುಭವಿ ಬ್ಯಾಟರ್ಗಳಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಹಾಜರಿಯಲ್ಲೂ 100ರ ಗಡಿ ದಾಟಲು ವಿಫಲವಾಗಿತ್ತು. ಇದೀಗ ಕಿವೀಸ್ ನೆಲದ ಕೊನೇ ಪಂದ್ಯ ಆಡಲು ಸಜ್ಜಾಗಿರುವ ರೋ-ಕೊ ಇದನ್ನು ಸ್ಮರಣೀಯವಾಗಿಸಲು ಪ್ರಯತ್ನಿಸಬೇಕಾಗಿದೆ. ನ್ಯೂಜಿಲೆಂಡ್ ನೆಲದಲ್ಲಿ ಒಂದೂ ಶತಕ ಸಿಡಿಸದ ಕೊರತೆಯನ್ನು ನೀಗಿಸಿಕೊಳ್ಳಲು ರೋಹಿತ್ ಶರ್ಮಗೆ ಇದು ಕೊನೇ ಅವಕಾಶವೆನಿಸಿದೆ.
ಟೀಮ್ ನ್ಯೂಸ್:
ಭಾರತ: ಸ್ಪಿನ್ನರ್ ಕುಲದೀಪ್ ಯಾದವ್ ಆಡಿದ ಪ್ರವಾಸದ ಮೊದಲ ಪಂದ್ಯದಲ್ಲಿ ತೀವ್ರ ನಿರಾಸೆ ಮೂಡಿಸಿದ್ದರು. ಅವರು 8 ಓವರ್ಗಳಲ್ಲಿ 73 ರನ್ ನೀಡಿ ದುಬಾರಿಯಾಗಿದ್ದರು. ಆದರೂ ಅವರು 11ರ ಬಳಗದಲ್ಲಿ ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆ ಇದೆ. ವೇಗಿ ಗುರ್ನೂರ್ ಬ್ರಾರ್ ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗಿರುವುದರಿಂದ ಕೊನೇ ಏಕದಿನಕ್ಕೆ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಅನುಭವಿ ವೇಗಿ ಮೊಹಮದ್ ಸಿರಾಜ್ ಪ್ರವಾಸದ ಮೊದಲ ಪಂದ್ಯ ಆಡುವ ಅವಕಾಶ ಪಡೆಯಬಹುದು.
ನ್ಯೂಜಿಲೆಂಡ್: ವೇಗಿಗಳಾದ ಮ್ಯಾಟ್ ಹೆನ್ರಿ ಮತ್ತು ಕೈಲ್ ಜೇಮಿಸನ್ ಕಿವೀಸ್ ಟೆಸ್ಟ್ ತಂಡವನ್ನು ಕೂಡಿಕೊಳ್ಳಲು ತೆರಳಿದ್ದು, ಅಂತಿಮ ಏಕದಿನಕ್ಕೆ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಜೇಕಬ್ ಡಫಿ ಮತ್ತು ಬ್ಲೇರ್ ಟಿಕ್ನರ್ ಅಥವಾ ಬ್ರೆಟ್ ರಾಂಡೆಲ್ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಕ್ರಿಸ್ಟಿಯನ್ ಕ್ಲಾರ್ಕ್ ಸ್ಥಾನವನ್ನು ಆಲ್ರೌಂಡರ್ ಜೋಶ್ ಕ್ಲಾರ್ಕ್ಸನ್ ತುಂಬುವ ಸಾಧ್ಯತೆ ಇದೆ.
*ಆರಂಭ: ಬೆಳಗ್ಗೆ 7.30
*ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್.
ಪಿಚ್ ರಿಪೋರ್ಟ್
ನಾಲ್ಕನೇ ಏಕದಿನದಲ್ಲಿ ಎರಡು ಇನಿಂಗ್ಸ್ಗಳ ವೇಳೆ ಪಿಚ್ ಭಿನ್ನವಾಗಿ ವರ್ತಿಸಿದಂತಿತ್ತು. ಕಿವೀಸ್ ಬ್ಯಾಟರ್ಗಳಿಗೆ ಸಹಕಾರ ನೀಡಿದ್ದ ಪಿಚ್, ಭಾರತೀಯ ಬ್ಯಾಟರ್ಗಳಿಗೆ ಕಠಿಣ ಸವಾಲೊಡ್ಡಿತ್ತು. ಇದರಿಂದಾಗಿ ಇಲ್ಲಿ 4 ಪಂದ್ಯಗಳ ಬಳಿಕ ಚೇಸಿಂಗ್ ಮಾಡಿದ ತಂಡ ಸೋತಿತ್ತು. ಹೀಗಾಗಿ ಇಲ್ಲಿ ಈ ಬಾರಿ ಹೊನಲು ಬೆಳಕಿನಡಿ ಬ್ಯಾಟಿಂಗ್ ತುಸು ಸವಾಲೆನಿಸಿದೆ ಎಂಬುದು ಸ್ಪಷ್ಟ. ಪಂದ್ಯಕ್ಕೆ ಮಳೆ ಭೀತಿ ಇಲ್ಲ. ಆದರೆ ಮೋಡ ಕವಿದ ವಾತಾವರಣ ಇರಲಿರುವುದರಿಂದ ಈ ಬಾರಿ ಮೊದಲ ಇನಿಂಗ್ಸ್ನಲ್ಲೂ ಪಿಚ್ ಬೌಲರ್ಗಳಿಗೆ ಹೆಚ್ಚಿನ ಸಹಕಾರ ನೀಡಬಹುದು.
ಬ್ಯಾಟಿಂಗ್ ಸುಧಾರಣೆ ಅಗತ್ಯ
ಕೇವಲ 89 ರನ್ಗಳಿಗೆ ಆಲೌಟ್ ಆಗಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತನ್ನ 2ನೇ ಅತಿದೊಡ್ಡ ಸೋಲು ಅನುಭವಿಸಿದ ಬಳಿಕ ಭಾರತ ಬ್ಯಾಟಿಂಗ್ ವಿಭಾಗದ ನಿರ್ವಹಣೆ ಸುಧಾರಿಸಿಕೊಳ್ಳುವುದು ಅತ್ಯಗತ್ಯವೆನಿಸಿದೆ. ಮ್ಯಾಟ್ ಹೆನ್ರಿ ದಾಳಿಗೆ ಭಾರತ ಸಂಪೂರ್ಣವಾಗಿ ನೆಲಕಚ್ಚಿತ್ತು. ಇದು ಹೆಚ್ಚು ಕಳವಳಕಾರಿಯೂ ಆಗಿದೆ. ಯಾಕೆಂದರೆ ಮುಂದಿನ ವರ್ಷದ ಏಕದಿನ ವಿಶ್ವಕಪ್, ದಕ್ಷಿಣ ಆಫ್ರಿಕಾದ ಇದೇ ರೀತಿಯ ವೇಗದ ಬೌಲಿಂಗ್ ಸ್ನೇಹಿ ಪಿಚ್ಗಳಲ್ಲಿ ನಡೆಯಲಿದೆ. ಹೀಗಾಗಿ ರೋ-ಕೊ ತಮ್ಮ ಅನುಭವಕ್ಕೆ ತಕ್ಕ ನಿರ್ವಹಣೆ ತೋರಬೇಕಿದ್ದರೆ, ಶ್ರೇಯಸ್ ಅಯ್ಯರ್, ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ ಕಿವೀಸ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಲ್ಲಬೇಕಿದೆ. ಶತಕವೀರ ವಿಲ್ ಯಂಗ್ಗೆ ಆರಂಭದಲ್ಲೇ ಎರಡೆರಡು ಜೀವದಾನ ನೀಡಿ ಬೆಲೆ ತೆತ್ತಿದ್ದ ಭಾರತ, ಕ್ಯಾಚಿಂಗ್ನಲ್ಲೂ ಸುಧಾರಣೆ ಕಾಣಬೇಕಿದೆ.
ಟೆಸ್ಟ್ ತಂಡಕ್ಕೆ ಗುರ್ನೂರ್ ಸೇರ್ಪಡೆ
ಏಕದಿನ ಸರಣಿಯಲ್ಲಿ ಮಿಂಚಿದ ವೇಗಿ ಗುರ್ನೂರ್ ಬ್ರಾರ್ ಅವರನ್ನು ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಜತೆಗೆ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಟೆಸ್ಟ್ ತಂಡವನ್ನು ಕೂಡಿಕೊಳ್ಳಲು ತೆರಳಿರುವ ಗುರ್ನೂರ್ ಕೊನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಜಸ್ಪ್ರೀತ್ ಬುಮ್ರಾ, ಆಕಾಶ್ ದೀಪ್, ಮೊಹಮದ್ ಸಿರಾಜ್ ಮತ್ತು ಕನ್ನಡಿಗ ಪ್ರಸಿದ್ಧಕೃಷ್ಣ ಒಳಗೊಂಡ ಭಾರತ ಟೆಸ್ಟ್ ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ಗುರ್ನೂರ್ ಸೇರ್ಪಡೆ ಮತ್ತಷ್ಟು ಬಲ ತುಂಬಿದೆ. ಕುಲದೀಪ್ ಏಕದಿನ ಸರಣಿಯ ನಂತರ ತವರಿಗೆ ಮರಳಲಿದ್ದಾರೆ. ಗಾಯದಿಂದಾಗಿ ಭಾರತ ಎ ತಂಡದ ಚತುರ್ದಿನ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ವಿಕೆಟ್ ಕೀಪರ್&ಬ್ಯಾಟರ್ ರಿಷಭ್ ಪಂತ್, ಟೆಸ್ಟ್ ಸರಣಿಗೆ ಫಿಟ್ ಆಗಿದ್ದಾರೆ ಎನ್ನಲಾಗಿದೆ. ಅವರು ಶನಿವಾರ ಟೆಸ್ಟ್ ತಂಡವನ್ನು ಕೂಡಿಕೊಂಡಿದ್ದಾರೆ.