ವೆಲ್ಲಿಂಗ್ಟನ್: ಇಲ್ಲಿನ ಸ್ಕೈ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆತಿಥೇಯ ನ್ಯೂಜಿಲೆಂಡ್ ಮತ್ತು ಪ್ರವಾಸಿ ಭಾರತ ನಡುವಿನ ನಾಲ್ಕನೇ ಟಿ20 ಪಂದ್ಯದಲ್ಲಿ, ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿದಿರುವ ಟೀಮ್ ಇಂಡಿಯಾ 166 ರನ್ಗಳ ಸವಾಲಿನ ಗುರಿಯನ್ನು ಕಿವೀಸ್ ಪಡೆಗೆ ನೀಡಿದೆ.
ಐದು ಪಂದ್ಯಗಳ ಟಿ20 ಸರಣಿಯಲ್ಲಿ 3-0 ಅಂತರದಿಂದ ಟೀಮ್ ಇಂಡಿಯಾ ಈಗಾಗಲೇ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದು, ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ತಂಡದ ಪರ ರೋಹಿತ್ ಶರ್ಮಾ ಬದಲಾಗಿ ಸಂಜು ಸ್ಯಾಮ್ಸನ್ ಮತ್ತು ಕೆ.ಎಲ್. ರಾಹುಲ್ ಆರಂಭಿಕರಾಗಿ ಕಣಕ್ಕಿಳಿದರು.
ಸ್ಯಾಮ್ಸನ್ ತಮ್ಮ ಪಾಲಿಗೆ ಒದಗಿ ಬಂದ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದೇ ಕೇವಲ 8 ರನ್ ಗಳಿಸಿ ವಿಕೆಟ್ ಒಪ್ಪಿಸಿ ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ(11), ಶ್ರೇಯಸ್ ಅಯ್ಯರ್(1) ಕೂಡ ಔಟಾದರು.
ಇತ್ತ ಆರಂಭಿಕನಾಗಿ ಕಣಕ್ಕಿಳಿದು ಏಕಾಂಗಿಯಾಗಿ ಹೋರಾಡುತ್ತಿದ್ದ ರಾಹುಲ್(39)ರನ್ಗಳ ಉಪಯುಕ್ತ ಕಾಣಿಕೆ ನೀಡಿ ವಿಕೆಟ್ ಒಪ್ಪಿಸಿದರು. ರಾಹುಲ್ ಬೆನ್ನಲ್ಲೇ ಶಿವಂ ದುಬೆ(12), ವಾಷಿಂಗ್ಟನ್ ಸುಂದರ್(0) ಔಟಾದರು.
ಟೀಮ್ ಇಂಡಿಯಾ 88 ರನ್ಗೆ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ ಕನ್ನಡಿಗ ಮನಿಶ್ ಪಾಂಡೆ ಆಸರೆಯಾದರು ಕೊನೆಯವರೆಗೂ ಉಪಯುಕ್ತ ಆಟವಾಡಿದ ಪಾಂಡೆ 50 ರನ್ಗಳ ಅರ್ಧಶತಕ ಗಳಿಸಿ ಅಜೇಯರಾಗಿ ಉಳಿದರು. ಉಳಿದಂತೆ ಶಾರ್ದುಲ್ ಠಾಕೂರ್(20), ಯಜುವೇಂದ್ರ ಚಹಾಲ್(1) ರನ್ ಗಳಿಸಿ ಔಟಾದರೆ, ನವದೀಪ್ ಸೈನಿ(11) ರನ್ ಕಲೆಹಾಕಿ ಅಜೇಯರಾಗಿ ಉಳಿದರು.
ಅಂತಿಮವಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 165 ರನ್ ಕಲೆಹಾಕಿತು. ಈ ಮೂಲಕ ಕಿವೀಸ್ ಪಡೆ ಗೆಲುವಿಗೆ 166ರನ್ ಗುರಿ ನೀಡಿದೆ.
ಕಿವೀಸ್ ಪರ ಇಸ್ ಸೊಧಿ ಮೂರು ವಿಕೆಟ್ ಕಬಳಿಸಿದರೆ, ಹಮೀಶ್ ಬೆನೆಟ್ಟ್ 2 ಹಾಗೂ ಟೀಮ್ ಸೌಥಿ, ಸ್ಕಾಟ್ ಕುಗ್ಗೆಲಿಜಿನ್ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್)