ಹ್ಯಾಮಿಲ್ಟನ್: ಇಲ್ಲಿನ ಸೆಡಾನ್ ಪಾರ್ಕ್ನಲ್ಲಿ ನಡೆದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ನಾಯಕ ಕೇನ್ ವಿಲಿಯಮ್ಸನ್ ಅಬ್ಬರದ ಆಟದ ನಡುವೆಯೂ ಆತಿಥೇಯ ನ್ಯೂಜೆಲೆಂಡ್ ತಂಡ ಪ್ರವಾಸಿ ಭಾರತ ವಿರುದ್ಧ ಗೆಲುವು ದಾಖಲಿಸಲು ಸಾಧ್ಯವಾಗದೇ ಪಂದ್ಯವನ್ನು ಟೈ ಮಾಡಿಕೊಂಡಿತು. ಬಳಿಕ ನಡೆದ ಸೂಪರ್ ಓವರ್ ಕೂಡ ಕಿವೀಸ್ ಪಾಲಿಗೆ ವರವಾಗದೇ, ಟಿ20 ಸರಣಿಯನ್ನು ಕೈಚೆಲ್ಲಿತ್ತು.
ಟೀಮ್ ಇಂಡಿಯಾ ನೀಡಿದ್ದ 180 ರನ್ ಸವಾಲಿನ ಗುರಿ ಬೆನ್ನತ್ತಿದ ಕಿವೀಸ್ ಪಡೆಗೆ ಮಾರ್ಟಿನ್ ಗುಪ್ಟಿಲ್(31) ಮತ್ತು ಕೊಲಿನ್ ಮನ್ರೋ(14) 47 ರನ್ಗಳ ಜತೆಯಾಟವಾಡಿದರು. ತಂಡದ ಮೊತ್ತ 52 ರನ್ ಆಗಿದ್ದಾಗ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ಕಿವೀಸ್ ಪಡೆ ಸಂಕಷ್ಟಕ್ಕೆ ಸಿಲುಕಿತು.
ವಿಲಿಯಮ್ಸನ್ ಏಕಾಂಗಿ ಹೋರಾಟ
ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿದಿದ್ದ ನಾಯಕ ಕೇನ್ ವಿಲಿಯಮ್ಸನ್ (48 ಎಸೆತ, 95 ರನ್, 8 ಬೌಂಡರಿ, 6 ಸಿಕ್ಸರ್) ಕೊನೆಯವರೆಗೂ ಅಬ್ಬರದ ಆಟವಾಡಿ, ತಂಡವನ್ನು ಗೆಲುವಿನ ಹೊಸ್ತಿಲಿಗೆ ತೆಗೆದುಕೊಂಡು ಹೋದರು. ಆದರೆ, ವಿಲಿಯಮ್ಸನ್ಗೆ ಸಹ ಆಟಗಾರರು ಉತ್ತಮ ಸಾಥ್ ನೀಡಲಿಲ್ಲ.
ಟೈ ಆದ ಪಂದ್ಯ
ಉಳಿದಂತೆ ಮಿಚೆಲ್ ಸ್ಯಾಂಟ್ನರ್(9), ಕೊಲಿನ್ ಗ್ರ್ಯಾಂಡ್ಹೋಮ್(5), ರಾಸ್ ಟೇಲರ್(17) ಗಳಿಸಿ ಔಟಾದರೆ, ಟಿಮ್ ಸೈಫರ್ಟ್ ಯಾವುದೇ ರನ್ ಖಾತೆ ತೆರಯದೇ ಅಜೇಯರಾಗಿ ಉಳಿದರು. ಅಂತಿಮವಾಗಿ ಕಿವೀಸ್ ಪಡೆ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ಭಾರತ ದಾಖಲಿಸಿದ್ದ ರನ್ ಸಮನಾಗಿ ಬಂದು ನಿಂತಿತು.
ಸೂಪರ್ ಓವರ್ನಲ್ಲಿ ಸಿಗದ ಜಯ
ಪಂದ್ಯ ಟೈ ಆದ ಹಿನ್ನೆಲೆಯಲ್ಲಿ ಗೆಲುವು ನಿರ್ಣಯಿಸಲು ಬಳಿಕ ಸೂಪರ್ ಓವರ್ ನಡೆಸಲಾಯಿತು. ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಕಿವೀಸ್ ಪಡೆ ಜಸ್ಪ್ರಿತ್ ಬೂಮ್ರಾ ಎಸೆದ ಓವರ್ನಲ್ಲಿ ವಿಕೆಟ್ ನಷ್ಟವಿಲ್ಲದೆ, ಬರೋಬ್ಬರಿ 17 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಭಾರತದ ಪರ ರೋಹಿತ್ ಶರ್ಮ ಮತ್ತೊಮ್ಮೆ ವರವಾದರು. ಓವರ್ನ ಅಂತಿಮ ಎರಡು ಎಸೆತದಲ್ಲೂ ಭರ್ಜರಿ ಸಿಕ್ಸರ್ ಸಿಡಿಸಿ ಗೆಲುವಿಗೆ ಕಾರಣರಾದರು. ಒಟ್ಟು ಐದು ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ 3-0 ಅಂತರದಿಂದ ಸರಣಿ ವಶಪಡಿಸಿಕೊಂಡಿತು.
ನ್ಯೂಜಿಲೆಂಡ್ ಬೆಂಬಿಡಿದ ಸೂಪರ್ ಓವರ್ ಭೂತ
ಕಳೆದ ವರ್ಷ ಇಂಗ್ಲೆಂಡ್ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಆಂಗ್ಲರ ವಿರುದ್ಧದ ಫೈನಲ್ ಪಂದ್ಯದಲ್ಲೂ ಕಿವೀಸ್ಗೆ ಸೂಪರ್ ಓವರ್ ಕೈಕೊಟ್ಟಿತ್ತು. ವಿಪರ್ಯಾಸವೆಂದರೆ ಸೂಪರ್ ಓವರ್ ಕೂಡ ಟೈ ಆಯಿತು. ಆದರೆ ಬೌಂಡರಿ ಲೆಕ್ಕದ ಆಧಾರದ ಮೇಲೆ ಇಂಗ್ಲೆಂಡ್ಗೆ ಗೆಲುವು ನಿರ್ಣಯಿಸಲಾಗಿತ್ತು. ಇದು ವಿವಾದಕ್ಕೂ ಕಾರಣವಾಗಿತ್ತು.
ಟೀಮ್ ಇಂಡಿಯಾ ಪರ ಶಾರ್ದೂಲ್ ಠಾಕೂರ್ ಮತ್ತು ಮಹಮ್ಮದ್ ಶಮಿ ತಲಾ ಎರಡು ವಿಕೆಟ್ ಪಡೆದರೆ, ಯಜುವೇಂದ್ರ ಚಹಾಲ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ಗೆ ತೃಪ್ತಿಪಟ್ಟರು. ಆದರೆ ಸೂಪರ್ ಓವರ್ನಲ್ಲಿ ಯಾವುದೇ ವಿಕೆಟ್ ಅನ್ನು ಟೀಮ್ ಇಂಡಿಯಾ ಪಡೆಯಲಿಲ್ಲ. (ಏಜೆನ್ಸೀಸ್)