ಆಕ್ಲೆಂಡ್: ಇಲ್ಲಿನ ಈಡನ್ ಪಾರ್ಕ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಪ್ರಮುಖ ಆಟಗಾರರ ವೈಫಲ್ಯದಿಂದ ಪ್ರವಾಸಿ ಭಾರತ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಸುಲಭವಾಗಿ ಸೋಲಿಗೆ ಶರಣಾಯಿತು. ಈ ಮೂಲಕ ಏಕದಿನ ಸರಣಿಯನ್ನು ಕೈಚೆಲ್ಲಿತು.
ಕಿವೀಸ್ ಪಡೆ ನೀಡಿದ್ದ 274 ರನ್ ಗುರಿ ಬೆನ್ನತ್ತಿದ ಟೀಮ್ ಇಂಡಿಯಾಗೆ ಮಯಾಂಕ್ ಅಗರ್ವಾಲ್(3) ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ 24 ರನ್ ಗಳಿಸಿದ್ದ ಪೃಥ್ವಿ ಶಾ ವಿಕೆಟ್ ಒಪ್ಪಿಸಿದರೆ, 15 ರನ್ ಗಳಿಸಿ ನಾಯಕ ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದರು. ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಕೆ.ಎಲ್.ರಾಹುಲ್(4) ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ತಂಡದ ಮೊತ್ತ 74 ರನ್ ಆಗಿದ್ದಾಗಲೇ ಟೀಮ್ ಇಂಡಿಯಾ ಪ್ರಮುಖ 4 ವಿಕೆಟ್ಗಳನ್ನು ಕಡೆದುಕೊಂಡು ಸೋಲಿನ ದವಡೆಗೆ ಸಿಲುಕಿತು. ಬಳಿಕ ಬಂದ ಕೇದರ್ ಜಾಧವ್(9) ಕೂಡ ಭರವಸೆ ಮೂಡಿಸಲಿಲ್ಲ. ಇತ್ತ ಏಕಾಂಗಿಯಾಗಿ ಹೋರಾಡುತ್ತಿದ್ದ ಶ್ರೇಯಸ್ ಅಯ್ಯರ್(52) ತಂಡದ ಮೊತ್ತವನ್ನು 100ರ ಗಡಿ ದಾಟಿಸಿ, ಅರ್ಧಶತಕ ದಾಖಲಿಸಿ ಹೊರ ನಡೆದರು. ಶಾರ್ದೂಲ್ ಠಾಕೂರ್(18) ಇನ್ನಿಂಗ್ಸ್ ಕಟ್ಟುವಲ್ಲಿ ಎಡವಿದರು.
ಕೊನೆಯಲ್ಲಿ ಟೀಮ್ ಇಂಡಿಯಾಕ್ಕೆ ಆಸರೆಯಾದ ರವೀಂದ್ರ ಜಡೇಜಾ ಮತ್ತು ನವದೀಪ್ ಸೈನಿ ಉತ್ತಮ ಜತೆಯಾಟವಾಡಿ ತಂಡದ ಮೊತ್ತವನ್ನು 200 ಗಡಿ ದಾಟಿಸಿ ಗೆಲುವಿನ ಹೊಸ್ತಿಲಿಗೆ ಕೊಂಡೊಯ್ದರು. ಈ ಹಂತದಲ್ಲಿ 45 ರನ್ ಗಳಿಸಿದ್ದ ನವದೀಪ್ ಸೈನಿ ಔಟಾಗುವ ಮೂಲಕ ತಂಡಕ್ಕೆ ಮತ್ತೊಂದು ಆಘಾತವಾಯಿತು. ಇದರ ಬೆನ್ನಲ್ಲೇ ಯಜುವೇಂದ್ರ ಚಹಾಲ್(10) ಕೂಡ ರನೌಟ್ ಆದರು.
ಇತ್ತ ಏಕಾಂಗಿಯಾಗಿ ಕೊನೆಯವರೆಗೂ ಹೋರಾಡಿದ ರವೀಂದ್ರ ಜಡೇಜಾ(55) 49ನೇ ಓವರ್ನಲ್ಲಿ ಕ್ಯಾಚಿತ್ತು ನಿರ್ಗಮಿಸುವ ಮೂಲಕ ಟೀಮ್ ಇಂಡಿಯಾದ ಸೋಲು ಖಚಿತವಾಯಿತು. ಕೊನೆಯಲ್ಲಿ ಜಸ್ಪ್ರಿತ್ ಬೂಮ್ರಾ ಯಾವುದೇ ರನ್ ಖಾತೆ ತೆರೆಯದೇ ಅಜೇಯರಾಗಿ ಉಳಿದರು.
ಅಂತಿಮವಾಗಿ ಟೀಮ್ ಇಂಡಿಯಾ 48.3 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 251 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸುವ ಮೂಲಕ 2-0 ಅಂತರದಿಂದ ಸರಣಿಯನ್ನು ಕೈಚೆಲ್ಲಿತ್ತು. ಬಾಕಿ ಉಳಿದಿರುವ ಮತ್ತೊಂದು ಪಂದ್ಯದಲ್ಲಿ ಇದೇ ಮುಂದವರಿದರೆ ವೈಟ್ವಾಷ್ ಮುಖಭಂಗಕ್ಕೆ ಟೀಮ್ ಇಂಡಿಯಾ ಗುರಿಯಾಗಲಿದೆ.
ಕಿವೀಸ್ ಪರ ಹಮಿಶ್ ಬೆನೆಟ್ಟ್, ಟೀಮ್ ಸೌಥಿ, ಕೈಲೆ ಜಮೈಶನ್ ಮತ್ತು ಕೊಲಿನ್ ಗ್ರ್ಯಾಂಡ್ಹೋಮ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಜೇಮ್ಸ್ ನಿಶಾಮ್ ಒಂದು ವಿಕೆಟ್ಗೆ ತೃಪ್ತಿಪಟ್ಟರು. (ಏಜೆನ್ಸೀಸ್)