ಕ್ರೀಡೆ

ವೆಲ್ಲಿಂಗ್ಟನ್ ಟೆಸ್ಟ್​ನಲ್ಲಿ ಸೋಲಿನತ್ತ ಭಾರತ: ಬಾಲಂಗೋಚಿಗಳ ಬ್ಯಾಟಿಂಗ್​ಗೆ ಬಸವಳಿದ ಟೀಮ್ ಇಂಡಿಯಾ

ವೆಲ್ಲಿಂಗ್ಟನ್: ಪಂದ್ಯದಲ್ಲಿ ಹಿಡಿತ ಸಾಧಿಸುವ ಅಮೂಲ್ಯ ಅವಕಾಶವನ್ನು ಕೈಯಾರೆ ಹಾಳು ಮಾಡಿಕೊಂಡ ಭಾರತ ತಂಡ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲಿನ ಭೀತಿಯಲ್ಲಿದೆ. ಕೊನೇ ಮೂರು ವಿಕೆಟ್​ಗೆ ನ್ಯೂಜಿಲೆಂಡ್ ತಂಡ 123 ರನ್ ಸೇರಿಸಲು ಅವಕಾಶ ಬಿಟ್ಟುಕೊಟ್ಟ ಭಾರತ, 2ನೇ ಇನಿಂಗ್ಸ್​ನಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಳ್ಳುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನಲ್ಲಿ ಮೊಟ್ಟಮೊದಲ ಸೋಲಿನ ಹಾದಿಯಲ್ಲಿದೆ.

ಬೇಸಿನ್ ರಿಸರ್ವ್ ಮೈದಾನದಲ್ಲಿ ಭಾನುವಾರ 5 ವಿಕೆಟ್​ಗೆ 216 ರನ್​ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ನ್ಯೂಜಿಲೆಂಡ್ ತಂಡ 100.2 ಓವರ್​ಗಳಲ್ಲಿ 348 ರನ್​ಗೆ ಆಲೌಟ್ ಆಯಿತು. ಇದರಿಂದ 183 ರನ್​ಗಳ ದೊಡ್ಡ ಹಿನ್ನಡೆ ಕಂಡ ಭಾರತ ತಂಡ, 2ನೇ ಇನಿಂಗ್ಸ್​ನಲ್ಲಿ 65 ಓವರ್​ಗಳಲ್ಲಿ 4 ವಿಕೆಟ್​ಗೆ 144 ರನ್ ಪೇರಿಸಿ 3ನೇ ದಿನದಾಟ ಮುಗಿಸಿದೆ. ತಂಡ ಇನ್ನೂ 39 ರನ್​ಗಳ ಹಿನ್ನಡೆಯಲ್ಲಿದ್ದು, ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್ ಮನ್ ಅಜಿಂಕ್ಯ ರಹಾನೆ (25* ರನ್, 67 ಎಸೆತ, 4 ಬೌಂಡರಿ) ಹಾಗೂ ಹನುಮ ವಿಹಾರಿ (15* ರನ್, 70 ಎಸೆತ, 2 ಬೌಂಡರಿ) ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಹಿನ್ನಡೆಯಲ್ಲಿ ಅಳಿಸಲು ಭಾರತ ತಂಡಕ್ಕೆ ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ದೊಡ್ಡ ಇನಿಂಗ್ಸ್ ಆಡಬೇಕಿತ್ತು. ಆದರೆ, ಆರಂಭಿಕ ಪೃಥ್ವಿ ಷಾರ ಇನ್ನೊಂದು ವೈಫಲ್ಯದಿಂದ 27 ರನ್​ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಭಾರತದ ಚೇತರಿಕೆಯ ಜವಾಬ್ದಾರಿ ಕನ್ನಡಿಗ ಮಯಾಂಕ್ ಅಗರ್ವಾಲ್ (58) ಹಾಗೂ ಅನುಭವಿ ಚೇತೇಶ್ವರ ಪೂಜಾರ (11ರನ್, 81 ಎಸೆತ) ಹೆಗಲೇರಿತ್ತು. 2ನೇ ಅವಧಿಯ ಕೊನೇ ಓವರ್​ನ ಕೊನೇ ಎಸೆತದಲ್ಲಿ ಬೌಲ್ಟ್​ರ ಇನ್​ಸ್ವಿಂಗರ್ ಅಂದಾಜಿಸುವಲ್ಲಿ ಎಡವಿದ ಪೂಜಾರ ಬೌಲ್ಡ್ ಆದರು. 2ನೇ ವಿಕೆಟ್​ಗೆ ಈ ಜೋಡಿ 51 ರನ್ ಜತೆಯಾಟವಾಡಿತ್ತು. ಅರ್ಧಶತಕ ಬಾರಿಸಿ ದೊಡ್ಡ ಇನಿಂಗ್ಸ್​ನ ಸೂಚನೆ ನೀಡಿದ್ದ ಮಯಾಂಕ್, ಸೌಥಿ ಎಸೆತವನ್ನು ಫ್ಲಿಕ್ ಮಾಡುವ ಯತ್ನದಲ್ಲಿ ಎಡವಿ ವಿಕೆಟ್ಕೀಪರ್ ಬಿಜೆ ವ್ಯಾಟ್ಲಿಂಗ್​ಗೆ ಕ್ಯಾಚ್ ನೀಡಿದರು. ಎಲ್ಲರೂ ಚೆಂಡು ಬ್ಯಾಟ್​ಗೆ ತಾಕಿದೆ ಎಂದು ಅಂದಾಜು ಮಾಡಿದ್ದರೂ, ಹಾಟ್​ಸ್ಪಾಟ್​ನಲ್ಲಿ ಚೆಂಡು ಬ್ಯಾಟ್​ಗೆ ತಾಕಿಲ್ಲದೆ ಇರುವುದು ಖಚಿತವಾಗಿತ್ತು. ತಂಡದ ಮೊತ್ತ 113 ರನ್ ಆಗಿದ್ದಾಗ ಬೌಲ್ಟ್​ರ ಬೌನ್ಸರ್​ಗೆ ಹುಕ್ ಮಾಡಲು ಯತ್ನಿಸಿದ ಕೊಹ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದಾಗ ಪಂದ್ಯದಲ್ಲಿ ಕಿವೀಸ್​ನ ಹಿಡಿತ ಮತ್ತಷ್ಟು ಗಟ್ಟಿಯಾಯಿತು. -ಏಜೆನ್ಸೀಸ್

ಭಾರತವನ್ನು ಕಾಡಿದ ಕಿವೀಸ್ ಕೆಳಸರದಿ

3ನೇ ದಿನದಾಟದಲ್ಲಿಯೇ 51 ರನ್​ಗಳ ಅಮೂಲ್ಯ ಮುನ್ನಡೆ ಸಂಪಾದಿಸಿದ್ದ ನ್ಯೂಜಿಲೆಂಡ್, ಭಾನುವಾರ ಅಂದಾಜಿಸಲಾಗದಂಥ ಮುನ್ನಡೆಯನ್ನು ಪಡೆದುಕೊಂಡಿತು. ಮೊದಲ ಇನಿಂಗ್ಸ್​ನಲ್ಲಿ ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದ ಏಳಡಿ ಎತ್ತರದ ವೇಗಿ ಕೈಲ್ ಜೇಮಿಸನ್, ಬ್ಯಾಟಿಂಗ್​ನಲ್ಲೂ ಟೀಮ್ ಇಂಡಿಯಾವನ್ನು ಕಾಡಿದರು. 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಜೇಮಿಸನ್ 45 ಎಸೆತಗಳಲ್ಲಿ 4 ಸಿಕ್ಸರ್ , 1 ಬೌಂಡರಿ ಇದ್ದ 44 ರನ್ ಸಿಡಿಸಿ ಭಾರತವನ್ನು ಕಾಡಿದರು. ಆರ್.ಅಶ್ವಿನ್​ರ ಎಸೆತಕ್ಕೆ ಜೇಮಿಸನ್, ಹನುಮ ವಿಹಾರಿಗೆ ಕ್ಯಾಚ್ ನೀಡಿದಾಗ ಕಿವೀಸ್ ಇನ್ನೂ 300ರ ಗಡಿ ದಾಟಿರಲಿಲ್ಲ. ಇನ್ನೊಬ್ಬ ವೇಗಿ ಟ್ರೆಂಟ್ ಬೌಲ್ಟ್ 24 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಇದ್ದ 38 ರನ್ ಸಿಡಿಸಿದರು. ಈ ಜತೆಯಾಟದಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದ ಆಲ್ರೌಂಡರ್ ಕಾಲಿನ್ ಡಿ ಗ್ರಾಂಡ್​ಹೋಮ್ (43 ರನ್, 74 ಎಸೆತ, 5 ಬೌಂಡರಿ) ಇವರಿಬ್ಬರಿಗೂ ಸ್ಪೋಟಕ ಆಟವಾಡಲು ಅನುವು ಮಾಡಿಕೊಟ್ಟರು. ಕೊನೇ ವಿಕೆಟ್​ಗೆ ಬೌಲ್ಟ್ ಹಾಗೂ ಅಜಾಜ್ ಪಟೇಲ್ ಜೋಡಿ 38 ರನ್ ಕೂಡಿಸಿ ತಂಡದ 183 ರನ್ ಮುನ್ನಡೆಗೆ ಕಾರಣರಾದರು.

ದಿನದ ಮೊದಲ ಎಸೆತದಲ್ಲೇ ವಿಕೆಟ್

17 ರನ್​ಗಳಿಂದ ಬ್ಯಾಟಿಂಗ್ ಮುಂದುವರಿಸಿದ ವಿಕೆಟ್ಕೀಪರ್ ಬಿಜೆ ವ್ಯಾಟ್ಲಿಂಗ್ ದಿನದ ಮೊದಲ ಎಸೆತದಲ್ಲಿಯೇ ಜಸ್​ಪ್ರೀತ್ ಬುಮ್ರಾಗೆ ವಿಕೆಟ್ ನೀಡಿದರು. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 294 ಎಸೆತಗಳ ಬಳಿಕ ಬುಮ್ರಾ ಮೊದಲ ವಿಕೆಟ್ ಸಾಧನೆ ಮಾಡಿದರು. 2ನೇ ದಿನದಾಟದ ಮೊತ್ತಕ್ಕೆ 9 ರನ್ ಸೇರಿಸಿದ ವೇಳೆಯಲ್ಲಿ 7ನೇ ವಿಕೆಟ್ ರೂಪದಲ್ಲಿ ಟಿಮ್ ಸೌಥಿ ಔಟಾದಾಗ ಭಾರತದ ಹಿನ್ನಡೆ ಕೇವಲ 60 ರನ್ ಆಗಿತ್ತು. ಆದರೆ, ಕಿವೀಸ್​ನ ಕೊನೇ ಮೂರು ವಿಕೆಟ್​ಗಳ ಜತೆಯಾಟ ಭಾರತದ ಯೋಜನೆಯನ್ನು ಉಲ್ಟಾ ಮಾಡಿತು.