ಕ್ರೀಡೆ

ಭಾರತ-ಅಫ್ಘನ್ 2ನೇ ಟಿ20 ಪಂದ್ಯಕ್ಕೆ ಮಂಜಿನ ಕಾಟ: ಹೋಳ್ಕರ್ ಸ್ಟೇಡಿಯಂ ಪಿಚ್ ಹೇಗಿದೆ? ವಿವರ ಇಲ್ಲಿದೆ..

ಇಂದೋರ್‌: ಇಲ್ಲಿನ ಹೋಳ್ಕರ್ ಕ್ರೀಡಾಂಗಣ ಬ್ಯಾಟ್ಸ್​ಮೆನ್​ಗಳ ಸ್ವರ್ಗ. ಸಣ್ಣ ಬೌಂಡರಿಗಳು ಮತ್ತು ವೈಟ್‌ ಬಾಲ್ ಕ್ರಿಕೆಟ್‌ಗೆ ಸರಿಹೊಂದುವ ವಿಕೆಟ್‌ಗಳ ಸಮತಟ್ಟಾದ ಸ್ವಭಾವದಿಂದಾಗಿ ಇಲ್ಲಿ ರನ್‌ ಮಳೆ ಹರಿದು ಬರುತ್ತದೆ. ಜ.14ರ ಭಾನುವಾರ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಎರಡನೇ ಟಿ20 ಪಂದ್ಯ ನಡೆಯುತ್ತಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಈಗಾಗಲೇ ಭಾರತ ಭರ್ಜರಿಯಾಗಿ ಗೆದ್ದಿದ್ದು, ಎರಡನೇ ಪಂದ್ಯ ಗೆದ್ದು ಸರಣಿ ಒಲಿಸಿಕೊಳ್ಳುವ ವಿಶ್ವಾಸದಲ್ಲಿ ರೋಹಿತ್ ಶರ್ಮಾ ಬಳಗವಿದೆ.

ಇದೇ ಮೈದಾನದಲ್ಲಿ ಭಾರತ ಆಡಿದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ 260 ರನ್‌ ಗಳಿಸಿತ್ತು. ತೀರಾ ಇತ್ತೀಚಿನ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ 227 ರನ್‌ ಗಳಿಸಿ ಯಶಸ್ವಿಯಾಗಿ ಡಿಫೆಂಡ್‌ ಮಾಡಿಕೊಂಡಿತ್ತು. ಇಂದೋರ್‌ನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 210 ರನ್.‌ ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವು ಎರಡು ಬಾರಿ ಗೆದ್ದರೆ, 1 ಬಾರಿ ಚೇಸಿಂಗ್ ಮಾಡಿದ ತಂಡ ಗೆದ್ದಿದೆ.

ಹವಾಮಾನ ಮುನ್ಸೂಚನೆ

ಜ.14ರಂದು ಇಂದೋರ್‌ನಲ್ಲಿ ಮಂಜಿನ ವಾತಾವರಣ ಇರಲಿದೆ. ಪಂದ್ಯದ ಆರಂಭದ ವೇಳೆ ಗರಿಷ್ಠ ತಾಪಮಾನವು 22 ಡಿಗ್ರಿ ಮತ್ತು ಮುಕ್ತಾಯದ ಹಂತದಲ್ಲಿ 17 ಡಿಗ್ರಿ ಸೆಲ್ಸಿಯಸ್ ಇರುವ ನಿರೀಕ್ಷೆಯಿದೆ. ಪಂದ್ಯದ ದಿನ ಮಳೆಯಾಗುವ ಭೀತಿ ಇಲ್ಲ. ಆದರೆ ಪಂದ್ಯಕ್ಕೆ ಮಂಜು ಅಡ್ಡಿಯಾಗಬಹುದು. ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದ ಸಮಯದಲ್ಲಿ ಸಹ ಮಂಜು ಆವರಿಸಿಕೊಂಡಿತ್ತು. ಚಳಿಯಿಂದಾಗಿ ಉಭಯ ತಂಡಗಳ ಆಟಗಾರರು ಆಡಲು ತುಸು ಕಷ್ಟಪಟ್ಟರು.

ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್‌, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್.

ಅಫ್ಘಾನಿಸ್ತಾನ ತಂಡ

ಇಬ್ರಾಹಿಂ ಜದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್‌ ಕೀಪರ್), ಇಕ್ರಮ್ ಅಲಿಖಿಲ್ (ವಿಕೆಟ್‌ ಕೀಪರ್), ಹಜರತುಲ್ಲಾ ಝಜೈ, ರಹಮತ್ ಷಾ, ನಜಿಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ, ಕರೀಂ ಜನತ್, ಅಜ್ಮತುಲ್ಲಾ ಒಮರ್ಜಾಯ್, ಶರಫುದ್ದೀನ್ ಅಶ್ರಫ್, ಮುಜೀಬ್ ಉರ್ ರಹಮಾನ್, ಫಝಲ್ಹಕ್ ಫಾರೂಕಿ, ಫರೀದ್ ಅಹ್ಮದ್, ನವೀನ್ ಉಲ್ ಹಕ್, ನೂರ್ ಅಹ್ಮದ್, ಮೊಹಮ್ಮದ್ ಸಲೀಂ, ಖೈಸ್ ಅಹ್ಮದ್, ಗುಲ್ಬದಿನ್ ನೈಬ್, ರಶೀದ್ ಖಾನ್.