ಕ್ರೀಡೆ

ಯುವ ಭಾರತದಿಂದಲೂ ಕಿವೀಸ್ ಮೇಲೆ ಸವಾರಿ

ಬ್ಲೂಮ್​ ಫಾಂಟೆನ್(ದಕ್ಷಿಣಆಫ್ರಿಕಾ): ಸ್ಪಿನ್ನರ್​ಗಳಾದ ರವಿ ಬಿಷ್ಣೋಯಿ (30ಕ್ಕೆ 4) ಹಾಗೂ ಅಥರ್ವ ಅಂಕೋಲ್ಕರ್ (28ಕ್ಕೆ 3) ಜೋಡಿಯ ಮಾರಕ ದಾಳಿ ನೆರವಿನಿಂದ ಭಾರತ ತಂಡ 19 ವಯೋಮಿತಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿತು. ಹಾಲಿ ಚಾಂಪಿಯನ್ ಭಾರತ ಶುಕ್ರವಾರ ನಡೆದ ಲೀಗ್ ಹಂತದ ತನ್ನ 3ನೇ ಹಾಗೂ ಕೊನೇ ಪಂದ್ಯದಲ್ಲಿ 44 ರನ್​ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿತು. ಈ ಗೆಲುವಿನೊಂದಿಗೆ ಭಾರತ ತಂಡ ಎ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಕ್ವಾರ್ಟರ್​ಫೈನಲ್​ಗೇರಿತು. ಎಂಟರ ಘಟ್ಟದ ಹೋರಾಟದಲ್ಲಿ ಭಾರತ ತಂಡ, ಮಂಗಳವಾರ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಮಂಗಾಂಗ್ ಓವೆಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ 21 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 103 ರನ್ ಗಳಿಸಿದಾಗ ಮಳೆ ಅಡ್ಡಿಪಡಿಸಿತು. ಬಳಿಕ ಪಂದ್ಯವನ್ನು ತಲಾ 23 ಓವರ್​ಗಳಿಗೆ ನಿಗದಿಪಡಿಸಲಾಯಿತು. ಯಶಸ್ವಿ ಜೈಸ್ವಾಲ್ (57*ರನ್, 77 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ದಿವ್ಯಾಂಶ್ ಸಕ್ಸೇನಾ (52*ರನ್, 62 ಎಸೆತ, 6 ಬೌಂಡರಿ) ಜೋಡಿ ಭರ್ಜರಿ ಬ್ಯಾಟಿಂಗ್​ನಿಂದ ಭಾರತ ವಿಕೆಟ್ ನಷ್ಟವಿಲ್ಲದೆ 115 ರನ್ ಗಳಿಸಿತು. ಬಳಿಕ ಡಕ್ವರ್ತ್-ಲೂಯಿಸ್-ಸ್ಟರ್ನ್ ನಿಯಮದನ್ವಯ ಕಿವೀಸ್​ಗೆ 192 ರನ್​ಗಳ ಪರಿಷ್ಕೃತ ಗುರಿ ನೀಡಲಾಯಿತು. ಭಾರತದ ಸ್ಪಿನ್ ಬೌಲಿಂಗ್ ಎದುರು ನಲುಗಿದ ನ್ಯೂಜಿಲೆಂಡ್ ತಂಡ 21 ಓವರ್​ಗಳಲ್ಲಿ 147 ರನ್​ಗಳಿಗೆ ಸರ್ವಪತನ ಕಂಡಿತು. ಸೋಲಿನ ನಡುವೆ ಕಿವೀಸ್ ಕೂಡ ಎಂಟರ ಘಟ್ಟಕ್ಕೇರಿದೆ.

ಭಾರತ: 23 ಓವರ್​ಗಳಿಗೆ ವಿಕೆಟ್ ನಷ್ಟವಿಲ್ಲದೆ 115 (ಯಶಸ್ವಿ ಜೈಸ್ವಾಲ್ 57*, ದಿವ್ಯಾಂಶ್ ಸಕ್ಸೇನಾ 52*), ನ್ಯೂಜಿಲೆಂಡ್: 21 ಓವರ್​ಗಳಲ್ಲಿ 147 (ರೈಯ್್ಸ ಮಾರಿಯು 42, ಫಗ್ಯೂಸ್ ಲೆಲ್ಮಾನ್ 31, ರವಿ ಬಿಷ್ಣೋಯಿ 30ಕ್ಕೆ 4, ಅಥರ್ವ 28ಕ್ಕೆ 3).