ಕ್ರೀಡೆ

2036ರ ಒಲಿಂಪಿಕ್ಸ್​ ಆತಿಥ್ಯಕ್ಕೆ ಮೊದಲ ಹೆಜ್ಜೆ ಇಟ್ಟ ಭಾರತ; ಆಶಯ ಪತ್ರ ಸಲ್ಲಿಸಿದ ಭಾರತೀಯ ಒಲಿಂಪಿಕ್ಸ್​ ಸಂಸ್ಥೆ

ನವದೆಹಲಿ: ಭಾರತ 2036ರ ಒಲಿಂಪಿಕ್ಸ್​ ಮತ್ತು ಪ್ಯಾರಾಲಿಂಪಿಕ್ಸ್​ ಆತಿಥ್ಯದ ನಿಟ್ಟಿನಲ್ಲಿ ಮಂಗಳವಾರ ಮೊದಲ ಹೆಜ್ಜೆ ಇಟ್ಟಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿಯ (ಐಒಸಿ) ಭವಿಷ್ಯದ ಆತಿಥೇಯ ಆಯೋಗಕ್ಕೆ ಭಾರತೀಯ ಒಲಿಂಪಿಕ್ಸ್​ ಸಮಿತಿಯು (ಐಒಎ) ಆಶಯ ಪತ್ರವನ್ನು ಸಲ್ಲಿಸಿದೆ. ಈ ಮೂಲಕ 2036ರ ಒಲಿಂಪಿಕ್ಸ್​ ಆತಿಥ್ಯ ಪಡೆದುಕೊಳ್ಳುವ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಿದೆ.

ಕ್ರೀಡಾ ಸಚಿವಾಲಯದ ಮೂಲಗಳ ಪ್ರಕಾರ, ಐಒಎ ಅಕ್ಟೋಬರ್​ 1ರಂದೇ ಆಶಯ ಪತ್ರವನ್ನು ಸಲ್ಲಿಸಿದೆ. "ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ ಮತ್ತು ದೇಶದ ಯುವ ಸಬಲೀಕರಣವನ್ನು ಉತ್ತೇಜಿಸುವಂಥ ಗಣನೀಯ ಪ್ರಯೋಜನಗಳ ನಿಟ್ಟಿನಲ್ಲಿ ಇದೊಂದು ಅಪೂರ್ವ ಅವಕಾಶವಾಗಿದೆ' ಎಂದು ಮೂಲಗಳು ತಿಳಿಸಿವೆ.

ಒಲಿಂಪಿಕ್ಸ್​ ಆತಿಥೇಯರನ್ನು ಆರಿಸುವುದು ಸುಧೀರ್ಘ ಪ್ರಕ್ರಿಯೆಯಾಗಿದ್ದು, ಮೊದಲ ಹಂತದಲ್ಲಿ ಆಸಕ್ತ ದೇಶಗಳ ಅರ್ಜಿಯನ್ನು ಪರಿಶೀಲಿಸಿ ನಂತರದಲ್ಲಿ ಅಭ್ಯರ್ಥಿಗಳ ಪೈಕಿ ಅಂತಿಮ ಆಯ್ಕೆಗೆ ಮತದಾನ ನಡೆಸಲಾಗುತ್ತದೆ. ಮುಂದಿನ ವರ್ಷ ನಿಗದಿಯಾಗಿರುವ ಐಒಸಿಯ ಚುನಾವಣೆಗೆ ಮುನ್ನ ಈ ಪ್ರಕ್ರಿಯೆ ಮುಗಿಯುವ ಸಾಧ್ಯತೆ ಇಲ್ಲ.

ಒಲಿಂಪಿಕ್ಸ್​ ಆತಿಥೇಯ ಆಯ್ಕೆ ಪ್ರಕ್ರಿಯೆಯಲ್ಲಿ "ಆಶಯ ಪತ್ರ' ಸಲ್ಲಿಕೆ ಮೊದಲ ಹೆಜ್ಜೆಯಾಗಿದ್ದು, ಆಸಕ್ತ ದೇಶವು ಅನೌಪಚಾರಿಕ ಮಾತುಕತೆಯಿಂದ ನಿರಂತರ ಚರ್ಚೆಯತ್ತ ಇದು ಸಾಗಲಿದೆ. ಇದೇ ವೇಳೆ ಐಒಸಿ, ಆಸಕ್ತ ದೇಶವು ಆತಿಥ್ಯವನ್ನು ನಿರ್ವಹಿಸುವ ಕಾರ್ಯಸಾಧ್ಯತೆಯನ್ನೂ ಪರಿಶೀಲಿಸಲಿದೆ. ಆಸಕ್ತ ದೇಶದ ಆರ್ಥಿಕ ಶಕ್ತಿ, ಸಾಮಾಜಿಕ ಜವಾಬ್ದಾರಿ, ಮಾನವ ಹಕ್ಕು ಮತ್ತು ಸಾಮರ್ಥ್ಯಗಳನ್ನೂ ಐಒಸಿ ಅವಲೋಕಿಸಲಿದೆ.

ಒಲಿಂಪಿಕ್ಸ್​ ಆತಿಥ್ಯದ ಭಾರತದ ಆಸಕ್ತಿಗೆ ಐಒಸಿ ಹಾಲಿ ಅಧ್ಯಕ್ಷ ಥಾಮಸ್​ ಬಾಚ್​ ಬೆಂಬಲವಿದೆ. 2010ರ ದೆಹಲಿ ಕಾಮನ್ವೆಲ್ತ್​ ಗೇಮ್ಸ್​ ಭಾರತದಲ್ಲಿ ನಡೆದಿರುವ ಕೊನೆಯ ಪ್ರಮುಖ ಬಹುರಾಷ್ಟ್ರಗಳ ಕ್ರೀಡಾಕೂಟವಾಗಿದೆ. ಈ ನಡುವೆ 2030ರ ಯೂತ್​ ಒಲಿಂಪಿಕ್ಸ್​ ಆತಿಥ್ಯಕ್ಕೂ ಭಾರತ ಆಸಕ್ತಿ ತೋರಿದೆ. 2028 ಮತ್ತು 2032ರ ಒಲಿಂಪಿಕ್ಸ್​ ಈಗಾಗಲೆ ಲಾಸ್​ ಏಂಜಲಿಸ್​ (ಅಮೆರಿಕ) ಮತ್ತು ಬ್ರಿಸ್ಬೇನ್​ನಲ್ಲಿ (ಆಸ್ಟ್ರೆಲಿಯಾ) ನಿಗದಿಯಾಗಿವೆ.

ಸೌದಿ, ಕತಾರ್​ ಪೈಪೋಟಿ

2036ರ ಒಲಿಂಪಿಕ್ಸ್​ ಆತಿಥ್ಯ ಪಡೆಯುವ ನಿಟ್ಟಿನಲ್ಲಿ ಭಾರತಕ್ಕೆ ಸೌದಿ ಅರೇಬಿಯಾ, ಕತಾರ್​ ಮತ್ತು ಟರ್ಕಿಯಿಂದ ಪ್ರಬಲ ಪೈಪೋಟಿ ಎದುರಾಗುವ ನಿರೀೆ ಇದೆ. 2036ರ ಒಲಿಂಪಿಕ್ಸ್​ ಆತಿಥ್ಯಕ್ಕೆ ಆಸಕ್ತಿ ತೋರಿರುವ 10ನೇ ದೇಶ ಭಾರತವಾಗಿದೆ. ಕೆನಡಾ, ಇಂಡೋನೇಷ್ಯಾ, ದಣ ಆಫ್ರಿಕಾ, ಈಜಿಪ್ಟ್​, ದಣ ಕೊರಿಯಾ, ಚಿಲಿ ಇತರ ದೇಶಗಳಾಗಿವೆ.

ಅಹಮದಾಬಾದ್​ ಆತಿಥ್ಯ?

ಭಾರತದಲ್ಲಿ ಒಲಿಂಪಿಕ್ಸ್​ ನಡೆಯುವುದಾದರೆ ಗುಜರಾತ್​ನ ಅಹಮದಾಬಾದ್​ ಆತಿಥೇಯ ನಗರವಾಗಿರಲಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಹಾಲಿ ಕೇಂದ್ರ ಸರ್ಕಾರ ಮತ್ತು ಗುಜರಾತ್​ ಸರ್ಕಾರ ಅಹಮದಾಬಾದ್​ನಲ್ಲಿ ವಿವಿಧ ಕ್ರೀಡಾ ಮತ್ತು ಮೂಲ ಸೌಕರ್ಯಗಳನ್ನು ಈಗಾಗಲೆ ಅಭಿವೃದ್ಧಿಪಡಿಸುತ್ತಿದೆ.

ಪ್ರಧಾನಿ ಮೋದಿ ಕನಸು

ಭಾರತ 2036ರ ಒಲಿಂಪಿಕ್ಸ್​ಗೆ ಆತಿಥ್ಯ ವಹಿಸಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ. ಕಳೆದ ಮೊದಲ ಬಾರಿಗೆ ಅವರು ಈ ಆಸೆಯನ್ನು ವ್ಯಕ್ತಪಡಿಸಿದ್ದರು. ಕಳೆದ ಸ್ವಾತಂತ್ರೊ$್ಯತ್ಸವದ ಭಾಷಣದಲ್ಲೂ ಒಲಿಂಪಿಕ್ಸ್​ ಆತಿಥ್ಯದ ಆಶಯ ಹಂಚಿಕೊಂಡಿದ್ದರು.

ಯೋಗ, ಕಬಡ್ಡಿ ಸೇರ್ಪಡೆ?

ಭಾರತ ಆತಿಥ್ಯ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರೆ, ಯೋಗ, ಖೋಖೋ, ಕಬಡ್ಡಿಯಂಥ ಭಾರತೀಯ ಕ್ರೀಡೆಗಳ ಸೇರ್ಪಡೆಗೂ ಪ್ರಯತ್ನಿಸಲಾಗುವುದು ಎಂದು ಐಒಎ ಅಧ್ಯಕ್ಷೆ ಪಿಟಿ ಉಷಾ ಕಳೆದ ಪ್ಯಾರಿಸ್​ ಒಲಿಂಪಿಕ್ಸ್​ ವೇಳೆ ಹೇಳಿದ್ದರು. ಭಾರತೀಯ ಕ್ರೀಡಾ ಪ್ರಾಧಿಕಾರದ ಮಿಷನ್​ ಒಲಿಂಪಿಕ್​ ಸೆಲ್​ (ಎಂಒಸಿ) ಯಶಸ್ವಿ ಒಲಿಂಪಿಕ್ಸ್​ ಬಿಡ್​ಗೆ ಬೇಕಿರುವ ಕ್ರಮಗಳ ಬಗ್ಗೆ ಕ್ರೀಡಾ ಸಚಿವ ಮಾನ್ಸುಖ್​ ಮಾಂಡವೀಯಗೆ ವಿವರವಾದ ವರದಿಯನ್ನೂ ಸಲ್ಲಿಸಿತ್ತು. ಈ ವೇಳೆ ಎಂಒಸಿ, ಭಾರತದಲ್ಲಿ ಒಲಿಂಪಿಕ್ಸ್​ ನಡೆದರೆ ಸೇರಿಸಬಹುದಾದ ಕ್ರೀಡೆಗಳಲ್ಲಿ ಯೋಗ, ಖೋಖೋ, ಕಬಡ್ಡಿ ಜತೆಗೆ ಟಿ20 ಕ್ರಿಕೆಟ್​, ಚೆಸ್​ ಮತ್ತು ಸ್ಕಾ$್ವಷ್​ ಕ್ರೀಡೆಗಳನ್ನೂ ಹೆಸರಿಸಿತ್ತು.