ಧರ್ಮಶಾಲಾ: ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್ ನಡುವಿನ ಸುದೀರ್ಘ ಟೆಸ್ಟ್ ಸರಣಿ ಇದೀಗ ಕೊನೇ ಟ್ಟಕ್ಕೆ ಬಂದಿದ್ದು, ಹಿಮಾಲಯ ಪರ್ವತಗಳ ನಡುವಿನ ಎಚ್ಪಿಸಿಎ ಸ್ಟೇಡಿಯಂನಲ್ಲಿ ಗುರುವಾರದಿಂದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ರೋಹಿತ್ ಶರ್ಮ ಪಡೆ ರಾಂಚಿಯಲ್ಲಿ ನಡೆದ 4ನೇ ಟೆಸ್ಟ್ನಲ್ಲೇ ಸರಣಿ ವಶಪಡಿಸಿಕೊಂಡಿದ್ದರೂ, ಇದು ಕೇವಲ ಔಪಚಾರಿಕ ಪಂದ್ಯವೆನಿಸಿಲ್ಲ. ಭಾರತದ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಮತ್ತು ಪ್ರವಾಸಿ ಇಂಗ್ಲೆಂಡ್ ತಂಡದ ಜಾನಿ ಬೇರ್ಸ್ಟೋಗೆ ಇದು 100ನೇ ಟೆಸ್ಟ್ ಪಂದ್ಯವಾಗಿರುವುದು ವಿಶೇಷವಾಗಿದೆ. ಜತೆಗೆ ಪಂದ್ಯದಲ್ಲಿ ಹಲವಾರು ದಾಖಲೆಗಳ ನಿರೀೆ ಇದೆ. ಭಾರತವೂ ಸತತ 4ನೇ ಜಯದೊಂದಿಗೆ 4-1ರಿಂದ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದ್ದರೆ, ಇಂಗ್ಲೆಂಡ್ ತಂಡ ಸಮಾಧಾನಕರ ಗೆಲುವಿನೊಂದಿಗೆ ಭಾರತ ಪ್ರವಾಸವನ್ನು ಮುಗಿಸುವ ಹಂಬಲದಲ್ಲಿದೆ. ಈ ಪಂದ್ಯದ ಬಳಿಕ ಐಪಿಎಲ್, ವಿಶ್ವಕಪ್ ಮೂಲಕ ಭಾರತೀಯ ಕ್ರಿಕೆಟ್ ಪ್ರೇಮಿಗಳನ್ನು ಟಿ20 ಹಬ್ಬ ಸಂಪೂರ್ಣವಾಗಿ ಆವರಿಸಲಿದೆ.
9 ದಿನಗಳ ಬಿಡುವಿನ ಬಳಿಕ ಸರಣಿ ಮುಂದುವರಿಯಲಿದ್ದು, ಧರ್ಮಶಾಲಾದ ಚಳಿಯ ವಾತಾವರಣ ಭಾರತಕ್ಕಿಂತ ಪ್ರವಾಸಿ ತಂಡದ ಆಟಗಾರರಿಗೆ ಹೆಚ್ಚು ಅನುಕೂಲಕರವೆನಿಸಿದೆ. ಯಾಕೆಂದರೆ ಇಂಗ್ಲೆಂಡ್ನಲ್ಲೂ ಬಹುತೇಕ ಇದೇ ರೀತಿಯ ವಾತಾವರಣವಿರುತ್ತದೆ. ಹೀಗಾಗಿ ಹಿಮಾಲಯದ ವಾತಾವರಣಕ್ಕೆ ಹೊಂದಿಕೊಳ್ಳುವುದು ಭಾರತದ ಆಟಗಾರರಿಗೆ ದೊಡ್ಡ ಸವಾಲೆನಿಸಿದೆ. ಪಂದ್ಯದ ಮೊದಲ 2 ದಿನಗಳಲ್ಲಿ ಗರಿಷ್ಠ 10 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ.
ಹೈದರಾಬಾದ್ ಟೆಸ್ಟ್ನಲ್ಲಿ ಗೆದ್ದು ಸರಣಿಯಲ್ಲಿ ಶುಭಾರಂಭ ಕಂಡಿದ್ದರೂ, ನಂತರದಲ್ಲಿ ಸತತ 3 ಸೋಲಿನೊಂದಿಗೆ ಸರಣಿ ಕಳೆದುಕೊಂಡಿರುವ ಇಂಗ್ಲೆಂಡ್ ತಂಡದ ಬಾಜ್ಬಾಲ್ ಆಕ್ರಮಣವೂ ಭಾರತದಲ್ಲಿ ಕೈಕೊಟ್ಟಿದೆ. ಹೀಗಾಗಿ ಕೊನೇ ಟೆಸ್ಟ್ನಲ್ಲಿ ಆಂಗ್ಲರ ಕಾರ್ಯತಂತ್ರ ಬದಲಾಗುವುದೇ ಎಂಬ ಕುತೂಹಲವಿದೆ. ಇದರ ನಡುವೆ ಸರಣಿ ಸೋಲಿನ ಅಂತರವನ್ನು 2-3ಕ್ಕೆ ತಗ್ಗಿಸಿಕೊಳ್ಳಲು ಬೆನ್ ಸ್ಟೋಕ್ಸ್ ಪಡೆ ಪ್ರಯತ್ನಿಸಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ದೃಷ್ಟಿಯಿಂದ ಭಾರತಕ್ಕೆ ಈ ಪಂದ್ಯ ಮಹತ್ವದ್ದಾಗಿದೆ.
ಪಿಚ್ ರಿಪೋರ್ಟ್
ಚಳಿಯ ವಾತಾವರಣದಿಂದಾಗಿ ಎಚ್ಪಿಸಿಎ ಸ್ಟೇಡಿಯಂನ ಪಿಚ್ ಪ್ರತಿದಿನ ಬೆಳಗ್ಗೆ ವೇಗದ ಬೌಲರ್ಗಳಿಗೆ ಹೆಚ್ಚು ನೆರವು ನೀಡುವ ನಿರೀಕ್ಷೆ ಇದೆ. ಅಲ್ಲದೆ ಸಾಂಪ್ರದಾಯಿಕವಾಗಿಯೂ ಇಲ್ಲಿನ ಪಿಚ್ ವೇಗದ ಬೌಲಿಂಗ್ ಸ್ನೇಹಿಯಾಗಿದ್ದು, ಇತ್ತೀಚೆಗೆ ಇಲ್ಲಿ ನಡೆದ ಹಿ. ಪ್ರದೇಶ&ದೆಹಲಿ ನಡುವಿನ ರಣಜಿ ಪಂದ್ಯದಲ್ಲಿ 36 ವಿಕೆಟ್ ವೇಗಿಗಳ ಪಾಲಾಗಿತ್ತು. ಹಾಗೆಂದು ಸ್ಪಿನ್ನರ್ಗಳಿಗೂ ಯಶ ಸಿಗದು ಎಂದೇನಿಲ್ಲ. 2017ರಲ್ಲಿ ಇಲ್ಲಿ ನಡೆದ ಏಕೈಕ ಟೆಸ್ಟ್ನಲ್ಲಿ ಭಾರತ&ಆಸೀಸ್ ಸ್ಪಿನ್ನರ್ಗಳಿಗೆ ಉತ್ತಮ ಯಶ ಲಭಿಸಿತ್ತು. ಜತೆಗೆ ಪಿಚ್ ಬ್ಯಾಟಿಂಗ್ಗೂ ಅನುಕೂಲಕರವೆನಿಸಿದೆ.
ಟೀಮ್ ನ್ಯೂಸ್:
ಭಾರತ: ಪಿಚ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಭಾರತ ಮತ್ತೆ 2 ವೇಗಿ, 3 ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯುವ ನಿರೀೆ ಇದ್ದು, ರಾಂಚಿಯಲ್ಲಿ ಪದಾರ್ಪಣೆ ಮಾಡಿದ್ದ ಆಕಾಶ್ ದೀಪ್, ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾಗೆ ಸ್ಥಾನ ಬಿಟ್ಟುಕೊಡಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಬದಲಾವಣೆ ಇಲ್ಲ. ಕಳೆದ 6 ಇನಿಂಗ್ಸ್ಗಳಲ್ಲಿ ಕೇವಲ 63 ರನ್ ಗಳಿಸಿರುವ ನಡುವೆಯೂ ರಜತ್ ಪಾಟೀದಾರ್ಗೆ ಇನ್ನೊಂದು ಅವಕಾಶ ನೀಡಲು ಟೀಮ್ ಮ್ಯಾನೇಜ್ಮೆಂಟ್ ಒಲವು ತೋರಿದೆ. ಹೀಗಾಗಿ ಕನ್ನಡಿಗ ದೇವದತ್ ಪಡಿಕ್ಕಲ್ ಈ ಸಲವೂ ಟೆಸ್ಟ್ ಪದಾರ್ಪಣೆಯಿಂದ ವಂಚಿತರಾಗುವ ಸಾಧ್ಯತೆ ಇದೆ.
ಇಂಗ್ಲೆಂಡ್: ಸತತ 5ನೇ ಸಲವೂ ಇಂಗ್ಲೆಂಡ್ ಪಂದ್ಯಕ್ಕೆ ಮುನ್ನಾದಿನವೇ ಆಡುವ 11ರ ಬಳಗವನ್ನು ಪ್ರಕಟಿಸಿದೆ. ರಾಂಚಿಯಲ್ಲಿ ಆಡಿದ ತಂಡದಲ್ಲಿ ಏಕೈಕ ಬದಲಾವಣೆ ಮಾಡಿರುವ ಇಂಗ್ಲೆಂಡ್, ಒಲಿ ರಾಬಿನ್ಸನ್ ಬದಲಿಗೆ ಮತ್ತೋರ್ವ ವೇಗಿ ಮಾರ್ಕ್ ವುಡ್ರನ್ನು ಮತ್ತೆ ಕಣಕ್ಕಿಳಿಸಲಿದೆ. ಚಳಿ ವಾತಾವರಣದ ನಡುವೆ ಪಿಚ್ ವೇಗದ ಬೌಲಿಂಗ್ ಸ್ನೇಹಿಯಾಗಿ ವರ್ತಿಸುವ ನಿರೀಕ್ಷೆ ಇದ್ದರೂ, ಇಂಗ್ಲೆಂಡ್ 3ನೇ ವೇಗಿಯನ್ನು ಕಣಕ್ಕಿಳಿಸದೆ, ಇಬ್ಬರು ಸ್ಪಿನ್ನರ್ಗಳನ್ನೇ ಆಡಿಸಲಿದೆ. 41 ವರ್ಷದ ವೇಗಿ ಜೇಮ್ಸ್ ಆಂಡರ್ಸನ್ ಪ್ರವಾಸದಲ್ಲಿ ಸತತ 4ನೇ ಟೆಸ್ಟ್ ಆಡಲಿದ್ದು, 700 ವಿಕೆಟ್ ಪೂರೈಸುವ ಅವಕಾಶ ಪಡೆದಿದ್ದಾರೆ.
ಆರಂಭ: ಬೆಳಗ್ಗೆ 9.30
ನೇರಪ್ರಸಾರ: ಸ್ಪೋರ್ಟ್ಸ್18, ಜಿಯೋಸಿನಿಮಾ
ಅಶ್ವಿನ್, ಬೇರ್ಸ್ಟೋಗೆ 100ರ ಸಂಭ್ರಮ
ಸರಣಿಯ ಪ್ರತಿ ಪಂದ್ಯದಲ್ಲೂ ಒಂದೊಂದು ಮೈಲಿಗಲ್ಲು ನೆಡುತ್ತ ಬಂದಿರುವ ಆಫ್ ಸ್ಪಿನ್ನರ್ ಆರ್. ಅಶ್ವಿನ್, ಧರ್ಮಶಾಲಾದಲ್ಲಿ ವೃತ್ತೀಜಿವನದ 100ನೇ ಟೆಸ್ಟ್ ಪಂದ್ಯದ ಸಂಭ್ರಮ ಕಾಣಲಿದ್ದಾರೆ. ಸರಣಿಯ ಮೊದಲ 3 ಟೆಸ್ಟ್ಗಳಲ್ಲಿ ಬೌಲಿಂಗ್&ಬ್ಯಾಟಿಂಗ್ನಲ್ಲಿ ಹೆಚ್ಚಿನ ಕೊಡುಗೆ ನೀಡದ 37 ವರ್ಷದ ಅಶ್ವಿನ್, ರಾಂಚಿಯಲ್ಲಿ 5 ವಿಕೆಟ್ ಪಡೆಯುವ ಮೂಲಕ ಲಯಕ್ಕೆ ಮರಳಿದ್ದಾರೆ. 100ನೇ ಟೆಸ್ಟ್ನಲ್ಲಿ ಅವರು ಇನ್ನಷ್ಟು ಯಶ ಕಾಣುವ ನಿರೀೆಯಲ್ಲಿದ್ದಾರೆ. 100ನೇ ಟೆಸ್ಟ್ ಆಡುವುದಕ್ಕೆ ಮುನ್ನವೇ 500 ವಿಕೆಟ್ ಪೂರೈಸಿರುವ 2ನೇ ಬೌಲರ್ ಅಶ್ವಿನ್ ಆಗಿದ್ದಾರೆ. ಮುರಳೀಧರನ್ ಮೊದಲ ಸಾಧಕ. ಸರಣಿಯ ಮೊದಲ 4 ಪಂದ್ಯಗಳಲ್ಲಿ ಒಂದೂ ಅರ್ಧಶತಕವಿಲ್ಲದೆ 170 ರನ್ ಮಾತ್ರ ಗಳಿಸಿರುವ ಜಾನಿ ಬೇರ್ಸ್ಟೋ, ಇಂಗ್ಲೆಂಡ್ ಪರ 100 ಟೆಸ್ಟ್ ಆಡುವ ಅವಕಾಶ ಪಡೆದ ಅತ್ಯಂತ ಕೆಟ್ಟ ಆಟಗಾರ ಎಂಬ ಟೀಕೆಗೂ ಗುರಿಯಾಗಿದ್ದಾರೆ. ಇದಕ್ಕೀಗ ಅವರು 100ನೇ ಪಂದ್ಯದಲ್ಲೇ ದೊಡ್ಡ ಇನಿಂಗ್ಸ್ ಆಡುವ ಮೂಲಕ ಉತ್ತರ ನೀಡುವ ಛಲದಲ್ಲಿದ್ದಾರೆ.
*100 ಟೆಸ್ಟ್ ಆಡುವುದು ಯಾವುದೇ ಆಟಗಾರನಿಗೆ ದೊಡ್ಡ ಸಾಧನೆ. ಅಶ್ವಿನ್ ನಮ್ಮ ಮ್ಯಾಚ್ ವಿನ್ನರ್. ಅವರು ನಮ್ಮ ತಂಡಕ್ಕೆ ನೀಡಿರುವ ಕೊಡುಗೆಗೆ ಯಾವುದೇ ಹೊಗಳಿಕೆ ಸಾಕಾಗದು. ಕಳೆದ 5-7 ವರ್ಷಗಳಲ್ಲಿ ಪ್ರತಿ ಸರಣಿಯಲ್ಲಿ ಉತ್ತಮ ಕೊಡುಗೆ ನೀಡಿದ್ದಾರೆ. ಅಂಥ ಆಟಗಾರರು ಸಿಗುವುದು ಅಪರೂಪ.
| ರೋಹಿತ್ ಶರ್ಮ, ಟೀಮ್ ಇಂಡಿಯಾ ನಾಯಕ